ಸುಲಭದಲ್ಲಿ‌ ಕೊನೆಯಾಗಲ್ಲ ಕೊರೋನಾ, 2ನೇ ಹಂತದಲ್ಲೂ ಬರಲಿದೆ: ಡಾ. ಗುಲೇರಿಯಾ

ಕೊರೋನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವುದು ಆಸ್ಪತ್ರೆಗಳ ಕೈಲಿಲ್ಲ. ಸಮುದಾಯದೊಳಗೆ ಸೋಂಕು ಬಾರದಂತೆ ಜನರೇ ನಿಯಂತ್ರಣ ಮಾಡಬೇಕಿದೆ. ಜನರು ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಎಲ್ಲದಕ್ಕೂ ಪರಿಹಾರ ಮಾರ್ಗ ಎಂದು ಹೇಳಿದ್ದಾರೆ‌.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವದೆಹಲಿ: ಇನ್ನೂ ಮೊದಲ ಹಂತದ ಕೊರೋನಾ ಪರಿಸ್ಥಿತಿಯೇ ಕೊನೆಗೊಂಡಿಲ್ಲ. ಆದರೆ ಭಾರತದಲ್ಲಿ ಎರಡನೇ ಹಂತದಲ್ಲೂ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಅಂತಾ ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕ ಮತ್ತು ಕೇಂದ್ರ ಆರೋಗ್ಯ ಇಲಾಖೆ ಟಾಸ್ಕ್ ಫೋರ್ಸ್ ಸದಸ್ಯ ಡಾ. ರಣದೀಪ್ ಗುಲೇರಿಯಾ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಸದ್ಯ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರಬಹುದು. ಹಾಗಂತ ಅದನ್ನು ಮುಗಿದ ಅಧ್ಯಾಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಮುಂದಿನ ಚಳಿಗಾಲದಲ್ಲಿ ಎರಡನೇ ಎರಡನೇ ಹಂತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಚೀನಾದ ಉದಾಹರಣೆ ನೀಡಿರುವ ಡಾ. ರಣದೀಪ್ ಗುಲೇರಿಯಾ, ಚೀನಾದಲ್ಲಿ ಮೊದಲ ನಿಯಂತ್ರಣ ಆಗಿತ್ತು. ನಂತರ ಚಳಿ ಹೆಚ್ಚಾದಾಗ ಮತ್ತೆ ಕಾಣಿಸಿಕೊಂಡಿತು. ಅದೇ ರೀತಿ ಭಾರತದಲ್ಲೂ ಚಳಿಗಾಲದಲ್ಲಿ ಮತ್ತೆ ಕೊರೋನಾ ಸೋಂಕು ಹರಡಬಹುದು. ಆದುದರಿಂದ ನಾವಿದನ್ನು ತಾತ್ಕಾಲಿಕ ಎಂದು ಪರಿಗಣಿಸುವುದು ಸೂಕ್ತವಲ್ಲ. ಸುದೀರ್ಘ ಹೋರಾಟದಿಂದ ಮಾತ್ರ ಮುಕ್ತಿ ಸಾಧ್ಯ ಎಂದು ಹೇಳಿದ್ದಾರೆ.

ರೋಗ ಲಕ್ಷಣಗಳು ಇಲ್ಲದವರಿಗೂ ಕೊರೋನಾ ಪಾಸಿಟಿವ್ ಬಂದಿರುವುದನ್ನು ನಾವೀಗ ನೋಡಿದ್ದೇವೆ. ಇದಕ್ಕೆ ಪೂರಕವಾಗಿ ಡಾ. ರಣದೀಪ್ ಗುಲೇರಿಯಾ ದೇಹದಲ್ಲಿ ಸುದೀರ್ಘ ಸಮಯದವರೆಗೆ ಸೋಂಕು ಇರಬಹುದು, ಅದು ನಮಗೆ ಗೊತ್ತಾಗದಿರಬಹುದು, ಕೆಲ ದಿನಗಳ ಬಳಿಕ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.

ಸದ್ಯ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ದೇಶದಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಹೆಚ್ಚಿಸಲಾಗುತ್ತಿದೆ‌. ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಿಂದ ಮಾತ್ರ ಕೊರೋನಾವನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಕೊರೋನಾವನ್ನು ತೊಲಗಿಸಲು ಖಾಸಗಿ ಆಸ್ಪತ್ರೆಗಳ ಬೆಂಬಲ ಬೇಕೇಬೇಕು. ಕೊರೋನಾ ಸೂಚ್ಯಂಕ ಭಾರತದಲ್ಲಿ ಇನ್ನೂ ಇಳಿಕೆಯಾಗಿಲ್ಲ. ಸೋಂಕು ಹರಡುವಿಕೆ ಏರುಮುಖವಾಗಿದ್ದರೂ ಲಾಕ್ಡೌನ್ ಗೆ ವಿನಾಯಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅತ್ಯಗತ್ಯ ಎಂದಿದ್ದಾರೆ.

ಇದನ್ನು ಓದಿ: ದೇಶದಲ್ಲಿ 24 ಗಂಟೆಗಳಲ್ಲಿ 3,900 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 46,711ಕ್ಕೆ ಏರಿಕೆ

ಕೊರೋನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವುದು ಆಸ್ಪತ್ರೆಗಳ ಕೈಲಿಲ್ಲ. ಸಮುದಾಯದೊಳಗೆ ಸೋಂಕು ಬಾರದಂತೆ ಜನರೇ ನಿಯಂತ್ರಣ ಮಾಡಬೇಕಿದೆ. ಜನರು ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಎಲ್ಲದಕ್ಕೂ ಪರಿಹಾರ ಮಾರ್ಗ ಎಂದು ಹೇಳಿದ್ದಾರೆ‌.
First published: