Coronavirus Vaccine: ಕೊರೋನಾ ಲಸಿಕೆಗೆ ಭಾರೀ ಬೇಡಿಕೆ; ಕರ್ನಾಟಕದಲ್ಲಿ ಈಗಾಗಲೇ 4.6 ಲಕ್ಷ ಜನ ನೋಂದಣಿ

Covid-19 Vaccine: ಆರಂಭದಲ್ಲಿ ರಾಜ್ಯದ ಫ್ರಂಟ್‌ಲೈನ್ ವಾರಿಯರ್ಸ್‌ಗೆ ಕೊರೋನಾ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ‌ ಹಿನ್ನೆಲೆಯಲ್ಲಿ 4.6. ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಡಿ. 1): ಭಾರತದಲ್ಲಿ ಶೀಘ್ರದಲ್ಲಿ ಕೊರೋನಾ ಸೋಂಕಿಗೆ ಲಸಿಕೆ ಲಭ್ಯವಾಗಲಿದ್ದು, ಟ್ರಯಲ್ ಹಂತದ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೊರೋನಾ ಲಸಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕೊರೋನಾಗೆ ಲಸಿಕೆ ಪಡೆಯಲು ಈಗಲೇ ರಿಜಿಸ್ಟ್ರೇಷನ್‌ ನಡೆಸಲಾಗಿದ್ದು, ಕರ್ನಾಟಕದಲ್ಲಿ ಬರೋಬ್ಬರಿ 4.6. ಲಕ್ಷ ಮಂದಿ ಕೊರೋನಾ ವ್ಯಾಕ್ಸಿನ್‌ಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಮೊದಲ ಹಂತದಲ್ಲಿ ಕರ್ನಾಟಕಕ್ಕೆ ಕೊರೋನಾ ಲಸಿಕೆ ಲಭ್ಯವಾಗಲಿದೆ. ಆರಂಭದಲ್ಲಿ ರಾಜ್ಯದ ಫ್ರಂಟ್‌ಲೈನ್ ವಾರಿಯರ್ಸ್‌ಗೆ ಕೊರೋನಾ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ‌ ಹಿನ್ನೆಲೆಯಲ್ಲಿ ಲಕ್ಷ-ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ವಲಯದಲ್ಲಿ 2,24,083 ಹಾಗೂ ಖಾಸಗಿ ವಲಯದಲ್ಲಿ 2,45,773 ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ವಲಯದಲ್ಲಿ 30 ಸಾವಿರಕ್ಕೂ ಹೆಚ್ಚು ಲಸಿಕೆ ಕೇಂದ್ರಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಲಸಿಕೆ ನೀಡುವವರನ್ನು ಗುರುತಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ರಾಜ್ಯದ ಕೋಲ್ಡ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಆರೋಗ್ಯ ಇಲಾಖೆ ಸೌಕರ್ಯ ಕೋರಿದೆ. ಲಸಿಕೆ ಕುರಿತು ಶೀಘ್ರದಲ್ಲಿ ತರಬೇತಿ ಆರಂಭಿಸಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ. ಕರ್ನಾಟಕದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವ್ಯಾಕ್ಸಿನ್ ಶೇಖರಣೆ, ವಿತರಣೆಯ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಮೊದಲನೇ ಹಂತದಲ್ಲಿ ಹೆಲ್ತ್ ಕೇರ್ ವರ್ಕರ್ಸ್‌ಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: ಸಾರಾ ಮಹೇಶ್ ಕೊಚ್ಚೆ ಗುಂಡಿ, ನಾನು ಕಲ್ಲೆಸೆಯುವುದಿಲ್ಲ; ಹೆಚ್. ವಿಶ್ವನಾಥ್ ತಿರುಗೇಟು

ವೈದ್ಯರು, ನರ್ಸ್, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಸಿಡಿಪಿಓಗಳಿಗೆ, ವಿಜ್ಞಾನಿಗಳಿಗೆ ರಿಜಿಸ್ಟ್ರೇಷನ್ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಆಡಳಿತ ಸಿಬ್ಬಂದಿಯನ್ನು ಸೇರಿಸಿಲ್ಲ. ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಅಸಿಸ್ಟೆಂಟ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ. ಅವರು ಮಾತ್ರ ರಿಜಿಸ್ಟ್ರೇಷನ್ ಅಪ್​ಲೋಡ್ ಮಾಡುತ್ತಾರೆ. ನಿನ್ನೆಯವರೆಗೂ 4.9 ಲಕ್ಷ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಲಸಿಕಾ ವಿಭಾಗದ ಜಂಟಿ ನಿರ್ದೇಶಕಿ ಡಾ. ಪಿ. ರಜನಿ ನ್ಯೂಸ್18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 94,000 ಕೊರೋನಾ ವಾರಿಯರ್​ಗಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಲಸಿಕೆಯನ್ನು ಶೇಖರಿಸಿ ಇಡಲು ಬಿಬಿಎಂಪಿಯಲ್ಲಿ 175 ಫ್ರಿಡ್ಜ್, 15 ಫ್ರೀಜರ್​ಗಳಿವೆ. ಇನ್ನೂ ಬೇರೆಡೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
Published by:Sushma Chakre
First published: