ಕೊಡಗು : ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರೆ ಆಲ್ಕೋಹಾಲ್ ಸೇವಿಸಲು ಕಂಟಕವಾಗುತ್ತದೆ ಎಂದು ಕೊಡಗಿನಲ್ಲಿ ಫ್ರಂಟ್ ಲೈನ್ ವರ್ಕರ್ಸ್ ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಕೊರೊನಾ ಮಹಾಮಾರಿಯನ್ನು ಬಗ್ಗು ಬಡಿಯಲು ಈಗಾಗಲೇ ಕೋವ್ಯಾಕ್ಸಿನ್ ಸಿದ್ಧಗೊಳಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಫ್ರಂಟ್ ಲೈನ್ ವರ್ಕರ್ಸ್‍ಗೆ ವಿತರಣೆ ಮಾಡಲಾಗುತ್ತಿದೆ. ಆದರೆ ವ್ಯಾಕ್ಸಿನ್ ಪಡೆದುಕೊಂಡರೆ ಎಣ್ಣೆಕುಡಿಯಲು ಸಾಧ್ಯವಾಗುವುದಿಲ್ಲ ಎಂದು ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನೋದು ಬಹಿಂರಂಗವಾಗಿದೆ.
ಕೊಡಗು ಜಿಲ್ಲೆಯಲ್ಲಿ ಪೋಲೀಸ್, ಹೋಂಗಾರ್ಡ್ ಸೇರಿದಂತೆ ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡುವ 6 ಸಾವಿರ ಸಿಬ್ಬಂದಿ ಇದ್ದಾರೆ. ಇವರಲ್ಲಿ ಕೇವಲ 1,800 ಜನ ಮಾತ್ರ ಇದುವರೆಗೆ ಫ್ರಂಟ್ ಲೈನ್ ವರ್ಕರ್ಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಹಲವು ಬಾರಿ ಹೇಳಿದರು ವ್ಯಾಕ್ಸಿನ್ ಪಡೆದುಕೊಳ್ಳಲು ಫ್ರಂಟ್ ಲೈನ್ ವರ್ಕರ್ಸ್ ಮುಂದಾಗುತ್ತಿಲ್ಲ ಎನ್ನುತ್ತಿದೆ ಆರೋಗ್ಯ ಇಲಾಖೆ. ಇನ್ನು, ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಒತ್ತಾಯ ಮಾಡುವಂತಿಲ್ಲ. ಅವರ ಇಚ್ಛೆಯಂತೆ ಅವರು ವ್ಯಾಕ್ಸಿನ್ ಪಡೆದುಕೊಳ್ಳಬಹುದು, ಇಲ್ಲವೇ ಬಿಡಬಹುದು. ಹೀಗಾಗಿ ಫ್ರಂಟ್ ಲೈನ್ ವರ್ಕರ್ಸ್ ಕೂಡ ಸ್ವಯಂಪ್ರೇರಿತವಾಗಿ ವ್ಯಾಕ್ಸಿನ್ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ.
ಇದನ್ನೂ ಓದಿ: ಪ್ರತಿಪಕ್ಷಗಳ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಯತ್ನಾಳ್ಗೆ ಶಿಸ್ತು ಸಮಿತಿ ನೊಟೀಸ್; ನಳೀನ್ ಕುಮಾರ್
ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಶೇ 50 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಫ್ರಂಟ್ ಲೈನ್ ವರ್ಕ್‍ರ್ಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಕಾರಣವೇನು ಎಂದು ಕೇಳಿದರೆ ನಮ್ಮ ವೈಯಕ್ತಿಕ ಕಾರಣದಿಂದ ವ್ಯಾಕ್ಸಿನ್ ಪಡೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಡಿಎಚ್‍ಓ ಮೋಹನ್ ಕುಮಾರ್ ಅವರು ಹೇಳಿದ್ದಾರೆ. ಇನ್ನು ಆರೋಗ್ಯ ಇಲಾಖೆಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಕ್ಸಿನ್ ವಿತರಣೆಯಲ್ಲಿ ಗುರಿ ತಲುಪಿಲ್ಲ. ಇಲ್ಲಿ ಕೂಡ ಶೇಕಡ 65 ರಷ್ಟು ಸಿಬ್ಬಂದಿ ಮಾತ್ರ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಉಳಿದವರು ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂಬುದನ್ನು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಕೊಡಗಿನಲ್ಲಿ ಸಹಜವಾಗಿ ಮದ್ಯ ಪ್ರಿಯರ ಸಂಖ್ಯೆ ಹೆಚ್ಚು. ಅದರಲ್ಲೂ ಹಬ್ಬ ಹರಿದಿನ ಮದುವೆ ಸಮಾರಂಭ ಅಂದರಂತೂ ಓಪನ್ ಬಾರ್ ತೆರೆದಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಮದ್ಯ ಸೇವನೆ ಮಾಡದೇ ಇರುವವರು ತೀರಾ ಕಡಿಮೆಯೇ ಸರಿ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ ಮೇಲೆ ಎರಡನೇ ಡೋಸ್ ಪಡೆಯುವವರೆಗೆ ಅಂದರೆ 28 ರಿಂದ ಒಂದು ತಿಂಗಳ ಕಾಲ ಮದ್ಯಸೇವನೆ ಮಾಡುವಂತಿಲ್ಲ. ಒಂದು ವೇಳೆ ಮದ್ಯ ಸೇವಿಸಿದರೆ ಕೋವ್ಯಾಕ್ಸಿನ್ ನಿಂದ ಬೇರೆ ಅಡ್ಡಪರಿಣಾಮ ಬೀರಬಹುದು. ಇಲ್ಲವೆ ಪಡೆದಿರುವ ಡೋಸ್ ಪ್ರಯೋಜನ ಆಗದೇ ಇರಬಹುದು ಈ ಎಲ್ಲಾ ಆತಂಕಗಳಿಂದ ಫ್ರಂಟ್ ಲೈನ್ ವರ್ಕರ್ಸ್ ಕೋವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ