Door to door vaccination: ಮನೆ ಬಾಗಿಲಿಗೇ ಬರಲಿದೆ ವ್ಯಾಕ್ಸಿನ್; ಏನಿದು ಕೇಂದ್ರ ಸರ್ಕಾರದ ಹೊಸ ನಿರ್ಧಾರ?

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮನೆ-ಮನೆಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಇದಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಸಹ ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ದೇಶದಲ್ಲಿ ನಿರಂತರವಾಗಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮತ್ತೊಂದು ಕಡೆ ವ್ಯಾಕ್ಸಿನೇಷನ್​​​ 83 ಕೋಟಿಯ ಗಡಿ ದಾಟಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮನೆ-ಮನೆಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಇದಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಸಹ ಪ್ರಕಟಿಸಿದೆ. ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ (VK Paul) ಗುರುವಾರ ಡೋರ್ ಟು ಡೋರ್ ವ್ಯಾಕ್ಸಿನ್ (door-to-door COVID-19 vaccination) ಕುರಿತು ಮಾಹಿತಿ ನೀಡಿದರು.

ಲಸಿಕಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದಂತಹ ಜನರಿಗೆ ವ್ಯಾಕ್ಸಿನ್ ತಲುಪಿಸುವ ನಿಟ್ಟಿನಲ್ಲಿ ಡೋರ್ ಟು ಡೋರ್ ಲಸಿಕಾಕರಣಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಂಬಂಧ ಲಸಿಕೆ ಅಭಿಯಾನ ಹೇಗಿರಬೇಕು ಎಂಬುದರ ಬಗ್ಗೆ ವಿವರವಾದ ಮಾರ್ಗಸೂಚಿ ಸಹ ಸಿದ್ಧಪಡಿಸಲಾಗಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ನೀಡಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪಾಲ್ ಹೇಳಿದರು.

ಇಳಿಕೆಯಾಗುತ್ತಿರುವ ಮಹಾಮಾರಿಯ ಅಬ್ಬರ:

ಕಳೆದ ಕೆಲ ತಿಂಗಳಿನಿಂದ ದೇಶದಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 31,923 ಜನಕ್ಕೆ ಕೋವಿಡ್ ಸೋಂಕಿಗೆ ತುತ್ತಾಗಿದ್ದು, 282 ಜನರು ಸಾವನ್ನಪ್ಪಿದ್ದಾರೆ. 24 ಗಂಟೆಯಲ್ಲಿ 31,990 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ದೇಶದಲ್ಲಿ 3,01,604 ಸಕ್ರಿಯ ಪ್ರಕರಣಗಳಿದ್ದು, ಇದು ಕಳೆದ 187 ದಿನಗಳಲ್ಲಿ ಅತ್ಯಂತ ಕಡಿಮೆ. ಇದುರವರೆಗೂ 4,46,050 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಎರಡನೇ ಅಲೆ ಇನ್ನೂ ಅಂತ್ಯವಾಗಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಕೊರೊನಾ ಸಂಖ್ಯೆ ಇಳಿಮುಖವಾಗ್ತಿದೆ ಎಂದು ಜನರು ಎಚ್ಚರತಪ್ಪಬಾರದು ಎಂದು ಸಲಹೆ ನೀಡಿದ್ದಾರೆ. ಸದ್ಯ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿವೆ. ಬುಧವಾರ ಒಂದೇ ದಿನ 71,38,205 ಜನ ಲಸಿಕೆ ಪಡೆದುಕೊಂಡಿದ್ದು, ಇದುವರೆಗೂ 83,39,90,049 ಜನ ವ್ಯಾಕ್ಸಿನೇಟ್ ಆಗಿದ್ದಾರೆ.

ಶೇ.23ರಷ್ಟು ಜನಕ್ಕೆ ಎರಡು ಡೋಸ್ ವ್ಯಾಕ್ಸಿನ್:

ಕಳೆದ 12 ವಾರಗಳಿಂದ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಇಳಿಕೆಯಾಗುತ್ತಿದೆ. ಸದ್ಯ ಪಾಸಿಟಿವಿಟಿ ರೇಟ್ ಶೇ.3ಕ್ಕಿಂತಲೂ ಕಡಿಮೆ ಇದೆ. ಇನ್ನು ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.97.8ರಷ್ಟಿದೆ. ಕೆಲ ರಾಜ್ಯಗಳು ಲಸಿಕಾಕರಣ ಕಾರ್ಯಕ್ರಮವನ್ನು ಸವಾಲಾಗಿ ತೆಗೆದುಕೊಂಡು ಕೆಲಸ ಮಾಡುತ್ತಿವೆ. ಹಾಗಾಗಿ 18 ವರ್ಷ ಮೇಲ್ಪಟ್ಟ ಶೇ.66ರಷ್ಟು ಕನಿಷ್ಠ ಒಂದು ಡೋಸ್ ಆದ್ರೂ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೂ ಶೇ.23ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಹೇಳಿದ್ದಾರೆ.

ಇದನ್ನೂ ಓದಿ: School Re-Open| ಕರ್ನಾಟಕದಲ್ಲಿ 1ನೇ ತರಗತಿಯಿಂದ ಶಾಲೆಗಳ ಪುನಾರಾರಂಭಕ್ಕೆ ಪೋಷಕರು ಆಸಕ್ತಿ; ವರದಿ

6 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಶೇ.100ರಷ್ಟು ಮೊದಲ ಡೋಸ್ ಪಡೆದುಕೊಂಡಿವೆ. ಇದರಲ್ಲಿ ಲಕ್ಷದ್ವೀಪ, ಚಂಡೀಗಢ, ಗೋವಾ, ಹಿಮಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಸಿಕ್ಕಿಂ ಇವೆ. 4 ರಾಜ್ಯ/ಕೇಂದ್ರಾಡಳಿತ ಪ್ರದೇಶ ಶೇ.90ಕ್ಕೂ ಹೆಚ್ಚು ಮೊದಲ ಡೋಸ್ ಪಡೆದುಜಕೊಂಡಿವೆ. ಇದರಲ್ಲಿ ದಾದ್ರಾ ಮತ್ತು ನಗರ್ ಹವೇಲಿ, ಕೇರಳ, ಲಡಾಕ್ ಮತ್ತು ಉತ್ತರಾಖಂಡ್ ಸೇರಿವೆ.

ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆಯೂಬ ರಾಜೇಶ್ ಭೂಷಣ್ ಮಾಹಿತಿ ನೀಡಿದರು. ಕಳೆದ 187 ದಿನಗಳಲ್ಲಿಯೇ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತ್ತು ಮಹಾರಾಷ್ಟ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

ವರದಿ: ಮೊಹ್ಮದ್​ ರಫೀಕ್​ ಕೆ.
Published by:Kavya V
First published: