HOME » NEWS » Coronavirus-latest-news » CORONAVIRUS TREATMENT HIGH ALERT IN KARNATAKA BORDER CHAMARAJANAGAR KODAGU AS CORONA VIRUS FOUND IN KERALA SCT

ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಹಿನ್ನೆಲೆ; ಕೊಡಗು, ಚಾಮರಾಜನಗರದಲ್ಲಿ ಹೈ ಅಲರ್ಟ್

Coronavirus: ಕೇರಳದಲ್ಲಿ ಕೊರೋನಾ ವೈರಸ್ ಪತ್ತೆಯಾಗಿರುವುದರಿಂದ ಗಡಿ ಜಿಲ್ಲೆಗಳಾದ ಗುಂಡ್ಲುಪೇಟೆ ಹಾಗೂ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ತಲಾ 5 ಹಾಸಿಗೆಯುಳ್ಳ ವಾರ್ಡ್​ಗಳನ್ನು ಕೊರೋನಾ ವೈರಸ್ ಕುರಿತ ತಪಾಸಣೆಗೆಂದು ಮೀಸಲಿಡಲಾಗಿದೆ.

Sushma Chakre | news18-kannada
Updated:February 4, 2020, 8:12 AM IST
ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಹಿನ್ನೆಲೆ; ಕೊಡಗು, ಚಾಮರಾಜನಗರದಲ್ಲಿ ಹೈ ಅಲರ್ಟ್
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಫೆ. 4): ಕೇರಳದಲ್ಲಿ ಈಗಾಗಲೇ 3 ಕೊರೋನಾ ವೈರಸ್ ಸೋಂಕಿತರ ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ರಾಜ್ಯಗಳಲ್ಲೂ ಆತಂಕ ಶುರುವಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಕೇರಳದಿಂದ ಗಡಿಯೊಳಗೆ ಬರುವ ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

4 ದಿನಗಳ ಹಿಂದೆ ಚೀನಾದ ವುಹಾನ್​ನಿಂದ ಶಿಕ್ಷಣ ಮುಗಿಸಿ, ಕೇರಳಕ್ಕೆ ಬಂದಿದ್ದ ಓರ್ವ ವ್ಯಕ್ತಿಯಲ್ಲಿ ಕೊರೋನಾ ವೈರಸ್​ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಪ್ರತ್ಯೇಕವಾಗಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಸೋಮವಾರ ಮತ್ತೆರಡು ಸೋಂಕು ಪ್ರಕರಣ ಪತ್ತೆಯಾಗಿತ್ತು. ರೋಗಿಗಳನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ- ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಗುಂಡ್ಲುಪೇಟೆ ಹಾಗೂ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ತಲಾ 5 ಹಾಸಿಗೆಯುಳ್ಳ ವಾರ್ಡ್​ಗಳನ್ನು ಕೊರೋನಾ ವೈರಸ್ ಕುರಿತ ತಪಾಸಣೆಗೆಂದು ಮೀಸಲಿಡಲಾಗಿದೆ. ಗಡಿಭಾಗದಲ್ಲಿರುವ ಮೂಲೆಹೊಳೆ ಹಾಗೂ ಬಂಡೀಪುರ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವೈದ್ಯಕೀಯ ತಂಡಗಳಿಂದ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕರಪತ್ರ ನೀಡಿ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಾರಣಾಂತಿಕ ವೈರಸ್ ನಮ್ಮ ರಾಜ್ಯವನ್ನು ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಲು ತ್ರಿಶೂರ್​ನಿಂದ ಬರುವ ಜನರ ಮೇಲೆ ಹೆಚ್ಚಿನ ಕಣ್ಗಾವಲು ಇಡಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿ ಹೇಳಿಕೆ ನೀಡಿದ್ದಾರೆ.

ಕೊಡಗಿನಲ್ಲೂ ಕಟ್ಟೆಚ್ಚರ:

ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೊಡಗು ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕೇರಳ ಕಾರ್ಮಿಕರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಮುಂದಿನ 15 ದಿನಗಳವರೆಗೆ ನಿರ್ಬಂಧ ವಿಧಿಸಲಾಗಿದೆ. ತೋಟದ ಮಾಲೀಕರಿಗೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಪ್ರವಾಸಿ ತಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಭಿತ್ತಿ ಪತ್ರಗಳನ್ನು ವಿತರಿಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊಡಗು ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಯ ವಿಶೇಷ ವಾರ್ಡ್ ತೆರೆಯಲಾಗಿದೆ. ಸೋಮವಾರಪೇಟೆ, ವಿರಾಜಪೇಟೆಗಳಲ್ಲೂ ವಿಶೇಷ ವಾರ್ಡ್ ತೆರೆಯಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ಕೊರೋನಾ ವೈರಸ್ ಪ್ರಕರಣ ಪತ್ತೆ; ಚೀನಾದಲ್ಲಿ ಸಾವಿನ ಸಂಖ್ಯೆ 361ಕ್ಕೆ ಏರಿಕೆ

ಚೀನಾದಿಂದ ಕೇರಳಕ್ಕೆ ವಾಪಾಸಾಗಿರುವ 1,793 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಅವರಲ್ಲಿ 1,723 ಮಂದಿಯನ್ನು ಪ್ರತ್ಯೇಕ ಕೊಠಡಿಗಳಲ್ಲಿ ಮತ್ತು 70 ಮಂದಿಯನ್ನು ಆಯ್ದ ಪ್ರತ್ಯೇಕ ವ್ಯವಸ್ಥಾ ಕೇಂದ್ರಗಳಲ್ಲಿ ಇರಿಸಲಾಗಿದೆ. ಚೀನಾದ ವುಹಾನ್​ನಿಂದ ಭಾರತಕ್ಕೆ ಬಂದ ಕೇರಳ ಮೂಲದ ವಿದ್ಯಾರ್ಥಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿತ್ತು. ಅದು ಭಾರತದಲ್ಲಿ ಪತ್ತೆಯಾದ ಮೊದಲ ಕೊರೋನಾ ವೈರಸ್ ಪ್ರಕರಣವಾಗಿತ್ತು. ಆ ವಿದ್ಯಾರ್ಥಿಯ ಜೊತೆಗೆ ಪ್ರಯಾಣಿಸಿದ್ದ ಪಶ್ಚಿಮ ಬಂಗಾಳದ 8 ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗಿತ್ತು. ಸೋಂಕು ಪೀಡಿತನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಓರ್ವ ದೆಹಲಿಯ ವ್ಯಕ್ತಿಯನ್ನೂ ನಿಗಾದಲ್ಲಿ ಇರಿಸಲಾಗಿದೆ.ಇದನ್ನೂ ಓದಿ: ಕೊರೊನಾ ವೈರಸ್​​ ಭೀತಿ: ವಿಮಾನದ ಮೂಲಕ ಚೀನಾದಿಂದ 324 ಭಾರತೀಯರ ಸ್ಥಳಾಂತರ

ಚೀನಾದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ 57 ಜನ ಸಾವನ್ನಪ್ಪಿರುವುದು ಆತಂಕಕ್ಕೀಡುಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತದಿಂದ ಯಾರೂ ಚೀನಾಗೆ ತೆರಳದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಒಟ್ಟು 20 ದೇಶಗಳಿಗೆ ಹರಡಿದೆ ಎನ್ನಲಾದ ಕೊರೋನಾ ವೈರಸ್ ಇಡೀ ವಿಶ್ವದಲ್ಲಿ ಸಾವಿನ ಭೀತಿ ಸೃಷ್ಟಿಸಿದೆ. ಚೀನಾದಲ್ಲಿ ಒಟ್ಟಾರೆ 20,438 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

(ವರದಿ: ನಂದೀಶ್)
First published: February 4, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories