ಕೊರೋನಾ ವೈರಸ್​​ನಿಂದ ಆಸ್ಪತ್ರೆ ಸೇರಿದ ಅಪ್ಪ; ಹಸಿವಿನಿಂದ ಕುಳಿತಲ್ಲೇ ಶವವಾದ ಮಗ!

Coronavirus: ಹುಬೇಯ್​ನಲ್ಲಿ ವಿಶೇಷಚೇತನ ಮಗನೊಂದಿಗೆ ವಾಸವಾಗಿದ್ದ ವ್ಯಕ್ತಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಮಗನನ್ನು ಮನೆಯಲ್ಲೇ ಬಿಟ್ಟು ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿದಾಗ ಕೊರೋನಾ ವೈರಸ್ ಲಕ್ಷಣಗಳು ಇರುವುದು ಪತ್ತೆಯಾಗಿತ್ತು.

ಮೃತ ಚೀನಾ ಯುವಕ

ಮೃತ ಚೀನಾ ಯುವಕ

  • Share this:
ಬೀಜಿಂಗ್ (ಫೆ. 4): ಕೊರೋನಾ ವೈರಸ್ ದಾಳಿಯಿಂದ ಅಪ್ಪ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ. ಮನೆಯಲ್ಲಿ ಏಕಾಂಗಿಯಾಗಿದ್ದ ವಿಶೇಷ ಚೇತನ ಮಗ ವೀಲ್​ಚೇರ್​ನಲ್ಲೇ ಹೆಣವಾಗಿದ್ದ. ಇಂಥದ್ದೊಂದು ಕರುಣಾಜನಕ ಘಟನೆ ನಡೆದಿರುವುದು ಚೀನಾದ ಹುಬೇಯ್​ನಲ್ಲಿ.

ಚೀನಾದಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಬಗ್ಗೆ 20ಕ್ಕೂ ಹೆಚ್ಚು ದೇಶಗಳಲ್ಲಿ ಆತಂಕ ಶುರುವಾಗಿದೆ. ಚೀನಾದಲ್ಲಿ ಈಗಾಗಲೇ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ. ಒಟ್ಟಾರೆ 20 ಸಾವಿರಕ್ಕೂ ಹೆಚ್ಚು ಜನರಿಗೆ ಈ ಮಾರಣಾಂತಿಕ ವೈರಸ್ ತಗುಲಿದೆ. ಇದೆಲ್ಲದರ ನಡುವೆ ಚೀನಾದಲ್ಲಿ ಈ ದಾರುಣ ಘಟನೆ ನಡೆದಿದೆ.

ಹುಬೇಯ್​ನಲ್ಲಿ ವಿಶೇಷಚೇತನ ಮಗನೊಂದಿಗೆ ವಾಸವಾಗಿದ್ದ ಯಾನ್ ಕ್ಸಿಯೋವೆನ್ ಎಂಬ ವ್ಯಕ್ತಿಗೆ ಜ. 22ರಂದು ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿದಾಗ ಕೊರೋನಾ ವೈರಸ್ ಲಕ್ಷಣಗಳು ಇರುವುದು ಪತ್ತೆಯಾಗಿತ್ತು. ಇದರಿಂದಾಗಿ ಕೂಡಲೇ ಆತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ಅಂದಿನಿಂದಲೂ ಆ ವ್ಯಕ್ತಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಹಿನ್ನೆಲೆ; ಕೊಡಗು, ಚಾಮರಾಜನಗರದಲ್ಲಿ ಹೈ ಅಲರ್ಟ್

ಆದರೆ, ಆ ವ್ಯಕ್ತಿಯ 17 ವರ್ಷದ ಮಗ ಯಾನ್​ ಚೆಂಗ್​ಗೆ ಮಾತನಾಡಲು, ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹುಟ್ಟುವಾಗಲೇ ಕಿವುಡನಾಗಿದ್ದ ಆತ ಪ್ರತಿಯೊಂದಕ್ಕೂ ಅಪ್ಪನ ಮೇಲೆ ಅವಲಂಬಿತನಾಗಿದ್ದ. ವೀಲ್​ಚೇರ್​ ಮೇಲೆಯೇ ದಿನಪೂರ್ತಿ ಕುಳಿತಿರುತ್ತಿದ್ದ ಆತನ ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅಪ್ಪನೇ ಆತನ ದಿನನಿತ್ಯದ ಎಲ್ಲ ಕಾರ್ಯಗಳನ್ನೂ ನೋಡಿಕೊಳ್ಳುತ್ತಿದ್ದ. ಮಗನನ್ನು ರೂಮಿನಲ್ಲಿ ವೀಲ್​ಚೇರ್ ಮೇಲೆ ಕೂರಿಸಿ, ಜ. 22ರಂದು ಆಸ್ಪತ್ರೆಗೆ ತೆರಳಿದ್ದ ಅಪ್ಪ ತಕ್ಷಣವೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ.

ಇದನ್ನೂ ಓದಿ: ಕೊರೋನಾ ವೈರಸ್​ ಹರಡುವುದು ಹೇಗೆ, ಇದರ ಲಕ್ಷಣಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ

ಇದರಿಂದಾಗಿ ಮಗನಿಗೆ ಊಟ ಹಾಕಲು, ಆತನ ದಿನನಿತ್ಯದ ಕೆಲಸಗಳನ್ನು ಮಾಡಲು ಯಾರೂ ಇರಲಿಲ್ಲ. ಮನೆಯೊಳಗೆ ಏಕಾಂಗಿಯಾಗಿದ್ದ ಮಗನನ್ನು ಯಾರಾದರೂ ನೋಡಿಕೊಳ್ಳಿ ಎಂದು ಆತನ ಅಪ್ಪ ಆಸ್ಪತ್ರೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದ. ತನ್ನ ಮಗನ ಪರಿಸ್ಥಿತಿಯನ್ನೂ ವಿವರಿಸಿದ್ದ. ಆಸ್ಪತ್ರೆಯ ವೈದ್ಯರು, ನೆಂಟರು, ಸ್ನೇಹಿತರೆಲ್ಲರ ಬಳಿ ತನ್ನ ಮಗನನ್ನು ನೋಡಿಕೊಳ್ಳುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದ. ಆದರೆ, ಯಾರೂ ಆತನ ಮನವಿಗೆ ಸ್ಪಂದಿಸಿರಲಿಲ್ಲ. ಕೊರೋನಾ ವೈರಸ್ ಪೀಡಿತನ ಮಗನ ಬಳಿ ಹೋದರೆ ತಮಗೂ ಆ ಸೋಂಕು ಅಂಟಬಹುದು ಎಂದು ಎಲ್ಲರೂ ಹಿಂದೇಟು ಹಾಕಿದ್ದರು.

ಇದನ್ನೂ ಓದಿ: ಕೊರೊನಾ ವೈರಸ್​: ಚೀನಾದಲ್ಲಿ ಸಾವಿನ ಸಂಖ್ಯೆ 425ಕ್ಕೆ ಏರಿಕೆ; ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ

ಅಪ್ಪನ ಬರುವಿಕೆಗಾಗಿ ಮನೆಯೊಳಗೆ ಕಾದು ಕಾದು ಸುಸ್ತಾದ ಮಗ ಜ. 29ರಂದು ವೀಲ್​ಚೇರ್ ಮೇಲೇ ಪ್ರಾಣ ಬಿಟ್ಟಿದ್ದಾನೆ. ಆತನ ಬಗ್ಗೆ ಕೇರ್ ತೆಗೆದುಕೊಳ್ಳಬೇಕೆಂದು ಊರಿನ ವೈದ್ಯರು, ಅಕ್ಕಪಕ್ಕದವರ ಬಳಿ ಕೇಳಿಕೊಂಡರೂ ಯಾರೂ ಗಮನ ಹರಿಸದ ಕಾರಣ 17 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಕಮ್ಯುನಿಸ್ಟ್​ ಪಕ್ಷದ ಕಾರ್ಯದರ್ಶಿ ಹಾಗೂ ಮೇಯರ್​ ಅವರನ್ನು ಅಮಾನತು ಮಾಡಲಾಗಿದೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸದ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

17 ವರ್ಷದ ಯಾನ್ ಚೆಂಗ್ ಸಾವಿಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದಿಲ್ಲ. ಆತ ಊಟವಿಲ್ಲದೆ ನಿಶ್ಯಕ್ತಿಯಿಂದ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ. ಈ ದುರಂತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಕೊರೋನಾ ಪೀಡಿತರ ಕುಟುಂಬದ ಬಗ್ಗೆ ನಿಗಾ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

 

 

 

 
First published: