ಚೀನಾದಿಂದ ಬಂದ ವರನನ್ನೇ ಬಿಟ್ಟು ಮಗಳ ಮದುವೆ ರಿಸೆಪ್ಷನ್ ನಡೆಸಿದ ಕೇರಳ ಕುಟುಂಬ!

ಸಂಬಂಧಿಕರು, ಆಪ್ತರನ್ನು ಮದುವೆಗೆ ಆಹ್ವಾನಿಸಿ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ ವರ ಇಲ್ಲದಿದ್ದರೂ ವಧುವಿನ ಮನೆಯವರು ತ್ರಿಶೂರ್​ನಲ್ಲಿ ನಿಗದಿಯಾದ ದಿನವೇ ರಿಸೆಪ್ಷನ್ ಮಾಡಿ ಮುಗಿಸಿದ್ದಾರೆ.

Sushma Chakre | news18-kannada
Updated:February 5, 2020, 11:23 AM IST
ಚೀನಾದಿಂದ ಬಂದ ವರನನ್ನೇ ಬಿಟ್ಟು ಮಗಳ ಮದುವೆ ರಿಸೆಪ್ಷನ್ ನಡೆಸಿದ ಕೇರಳ ಕುಟುಂಬ!
ಸಾಂದರ್ಭಿಕ ಚಿತ್ರ
  • Share this:
ತ್ರಿಶೂರ್ (ಫೆ. 5): ಮದುವೆಯೆಂದರೆ ಸಂಭ್ರಮ ಇದ್ದೇ ಇರುತ್ತದೆ. ಕೇರಳದಲ್ಲಿ ನಡೆದ ಮದುವೆಯ ರಿಸೆಪ್ಷನ್​ನಲ್ಲೂ ಸಂಬಂಧಿಕರು, ಸ್ನೇಹಿತರು, ಮನೆಯವರು ಎಲ್ಲರೂ ಸೇರಿದ್ದರು. ಆದರೆ, ವೇದಿಕೆಯಲ್ಲಿ ದೊಡ್ಡ ಕೊರತೆ ಎದ್ದು ಕಾಣುತ್ತಿತ್ತು. ಮಾರನೇ ದಿನ ಮದುವೆಯಾಗಬೇಕಿದ್ದ ವಧುವಿನ ಪಕ್ಕದಲ್ಲಿ ವರನೇ ಇರಲಿಲ್ಲ! ಅದಕ್ಕೆ ಕಾರಣ ಕೊರೊನಾ ವೈರಸ್ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ.

ಚೀನಾದಿಂದ ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ದಾಳಿಗೆ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಾರಣಾಂತಿಕ ವೈರಸ್ ಬೇರೆಯವರಿಗೆ ಹರಡದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಚೀನಾದಿಂದ ಭಾರತಕ್ಕೆ ವಾಪಾಸಾಗುವವರನ್ನು ಪ್ರತ್ಯೇಕವಾಗಿರಿಸಿ, ತಪಾಸಣೆ ನಡೆಸಲಾಗುತ್ತಿದೆ. ಕೇರಳದಲ್ಲಿ ಈಗಾಗಲೇ ಮೂವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದರಿಂದ ಹೈ ಅಲರ್ಟ್​ ಘೋಷಿಸಲಾಗಿದೆ. ಇಲ್ಲಿನ ತ್ರಿಶೂರ್​ ಮೂಲದ ಯುವಕ ತನ್ನ ಮದುವೆಗೆಂದು ಚೀನಾದಿಂದ ವಾಪಾಸ್​ ಬಂದಿದ್ದ. ಚೀನಾದಿಂದ ಬಂದಿದ್ದರಿಂದ ಆತನನ್ನು ಪ್ರತ್ಯೇಕವಾಗಿ ಆಸ್ಪತ್ರೆಯ ವಾರ್ಡ್​ನಲ್ಲಿರಿಸಿ, ನಿಗಾದಲ್ಲಿ ಇರಿಸಲಾಗಿತ್ತು. ಹೀಗಾಗಿ, ತನ್ನ ಮದುವೆಗೆ ಆತ ಹಾಜರಾಗಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಕೊರೊನಾ ವೈರಸ್​ಗೆ ವಿಸ್ಕಿ ಮತ್ತು ಜೇನುತುಪ್ಪವೇ ಮದ್ದು!; ಹೊಸ ಪರಿಹಾರ ಕಂಡುಹಿಡಿದ ಚೀನಾ ಶಿಕ್ಷಕ

ಆದರೆ, ಸಂಬಂಧಿಕರನ್ನು, ಆಪ್ತರನ್ನು ಮದುವೆಗೆ ಆಹ್ವಾನಿಸಿ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ ವರ ಇಲ್ಲದಿದ್ದರೂ ವಧುವಿನ ಮನೆಯವರು ನಿಗದಿಯಾದ ದಿನವೇ ರಿಸೆಪ್ಷನ್ ಮಾಡಿ ಮುಗಿಸಿದ್ದಾರೆ. ಫೆ. 4ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಲಾಗಿದೆ. ಆದರೆ, ರಿಸೆಪ್ಷನ್ ಅನ್ನು ಮಾತ್ರ ನಿಗದಿಯಾದ ದಿನಕ್ಕೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿರುವ ವರನ ತಪಾಸಣೆ ಮುಗಿದು, ರಿಪೋರ್ಟ್​ ಬಂದ ನಂತರ ಮದುವೆಯ ಹೊಸ ದಿನಾಂಕವನ್ನು ನಿಗದಿಪಡಿಸಲಾಗುವುದು.

ಕೊರೊನಾ ವೈರಸ್ ಪೀಡಿತ ದೇಶವಾದ ಚೀನಾದಿಂದ ತ್ರಿಶೂರ್​ಗೆ ಆಗಮಿಸಿರುವ ಯುವಕನಿಗೆ 28 ದಿನಗಳ ಕಾಲ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸದಂತೆ ವೈದ್ಯರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ, ಆತನಿಗೆ ಸೋಂಕು ತಗುಲಿದೆಯೇ, ಇಲ್ಲವೇ ಎಂಬ ಬಗ್ಗೆ ಖಾತರಿಯಾಗುವವರೆಗೂ ಆತ ತನ್ನ ಮದುವೆಯಲ್ಲೂ ಪಾಲ್ಗೊಳ್ಳುವಂತಿಲ್ಲ.

ಇದನ್ನೂ ಓದಿ: ಕೊರೊನಾ ಪ್ರಹಾರ​: ಚೀನಾದಲ್ಲಿ ಸಾವಿನ ಸಂಖ್ಯೆ 490ಕ್ಕೆ ಏರಿಕೆ; ಜಪಾನ್​ಗೂ ವ್ಯಾಪಿಸಿದ ಮಹಾಮಾರಿ

ಕೆಲವು ದಿನಗಳ ಹಿಂದೆ ಕೇರಳದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ದಾಖಲಾಗಿತ್ತು. ದೇಶದಲ್ಲೇ ಪತ್ತೆಯಾದ ಮೊದಲ ಪ್ರಕರಣ ಇದಾಗಿದ್ದು, ವೈರಸ್ ಸೋಂಕು ತಗಲಿದ ವ್ಯಕ್ತಿ ತ್ರಿಶೂರ್​ನವನೇ ಆಗಿದ್ದ. ಚೀನಾದಲ್ಲಿ ವಿದ್ಯಾಭ್ಯಾಸ ಮುಗಿಸಿ, ವಾಪಾಸಾಗಿದ್ದ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ನಂತರ ಕೇರಳದ ಇನ್ನೂ ಇಬ್ಬರಲ್ಲಿ ವೈರಸ್ ಪತ್ತೆಯಾಗಿತ್ತು. ಹೀಗಾಗಿ, ಅಲ್ಲಿನ ಆರೋಗ್ಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಚೀನಾದಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ತಡೆದು, ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ.
First published: February 5, 2020, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading