ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ತುಂಬಾ ಈಗ ಕೊರೋನಾ ಆವರಿಸುವ ಭೀತಿ ಉಂಟಾಗಿದೆ. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ಯಡವಟ್ಟಿನಿಂದ ಕೊರೋನಾ ವಾರಿಯರ್ಸ್ಗಳು ಭಯದಿಂದಲೇ ಸೇವೆ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ನಾನಾ ಭಾಗಗಳಿದ ಬರುವ ಕೊರೋನಾ ಶಂಕಿತರನ್ನು ಸಾಮಾನ್ಯ ರೋಗಿಗಳ ಜೊತೆ ಇರಿಸುತ್ತಿದ್ದು ಎಲ್ಲರಿಗೂ ಸೋಂಕು ಹರಡುವ ಭಯ ಕಾಡುತ್ತಿದೆ. ಶಂಕಿತರನ್ನು ಬೇರೆಯಾದರೂ ಇರಿಸಿ, ಅಥವಾ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಿ ಅಂತ ಸಿಬ್ಬಂದಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಹರಡುವಿಕೆ ತಡೆಯಲು ಸರ್ಕಾರ ಹರಸಾಹಸ ಮಾಡುತ್ತಿದೆ. ಆದರೆ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗೆಯೇ ಚಿತ್ರದುರ್ಗ ಜಿಲ್ಲೆಯಲ್ಲೂ ಸೋಂಕಿತರು ಹೆಚ್ಚಾಗುತ್ತಿದ್ದಾರೆ.
ಇದರ ಜೊತೆಯಲ್ಲೆ ಎಸ್ಎಆರ್ಐ ಮತ್ತು ಐಎಲ್ಐ ಪ್ರಕರಣಗಳೂ ಕೂಡ ದಾಖಲಾಗುತ್ತಿವೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಮರ್ಪಕ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಎಸ್ಎಆರ್ಐ ಮತ್ತು ಐಎಲ್ಐ ಸೋಂಕಿತರ ಚಿಕಿತ್ಸೆ ಸಂದರ್ಭದಲ್ಲಿ ಯಡವಟ್ಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವ ಉಸಿರಾಟದ ತೊಂದರೆ, ಹಾಗೂ ಜ್ವರ ಇರುವ ರೋಗಿಗಳನ್ನು ಎಸ್ಎಆರ್ಐ ಮತ್ತು ಐಎಲ್ಐ ಪ್ರಕರಣ ಎಂದು ಗುರುತಿಸಿ ಚಿಕಿತ್ಸೆ ನೀಡಬೇಕು. ಆದರೆ ಇಂತಹ ರೋಗಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳಬಹುದು ಎಂಬ ಶಂಖೆ ಇದ್ದರೂ ಅವರನ್ನು ಸಾಮಾನ್ಯ ವಾರ್ಡ್ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ವಾರ್ಡ್ಗಳಲ್ಲಿ ಕೆಲಸ ಮಾಡುವ ನರ್ಸ್ಗಳಿಗೆ ಈಗ ಜೀವ ಭಯದ ಜೊತೆ ಅವರ ಕುಟುಂಬ ರಕ್ಷಣೆ ಹೇಗೆ ಅನ್ನುವ ಪ್ರಶ್ನೆ ಎದುರಾಗಿದೆ. ಯಾಕಂದರೆ ಸಾಮಾನ್ಯ ವಾರ್ಡ್ಗಳಲ್ಲಿ ಸಾಮಾನ್ಯವಾಗಿ ಕರ್ತವ್ಯ ನಿರ್ವಹಿಸುವ ನರ್ಸ್ ಗಳು, ಡಿ.ಗ್ರೂಪ್ ನೌಕರರು, ಎಲ್ಲಾ ರೋಗಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಅದರ ನಡುವೆಯೇ ಕೊರೋನಾ ಶಂಕಿತ ಎಸ್ಎಆರ್ಐ ಮತ್ತು ಐಎಲ್ಐ ಪ್ರಕರಣಗಳ ರೋಗಿಗಳನ್ನೂ ದಾಖಲಿಸಿದ್ದು ಒಬ್ಬರಿಂದ ಒಬ್ಬರಿಗೆ ರೋಗ ಹರಡಿದರೆ ಗತಿಯೇನು ಎನ್ನುವಂತಾಗಿದೆ.
ಸದ್ಯ ಜಿಲ್ಲಾಸ್ಪತ್ರೆಯ ಹಿರಿಯ ನಾಗರಿಕರ, ಸಂಕ್ರಾಮಿಕ, ಹಾಗೂ ಎಮರ್ಜೆನ್ಸಿ ವಾರ್ಡ್ಗಳಲ್ಲಿ ಎಸ್ಎಆರ್ಐ ಮತ್ತು ಐಎಲ್ಐ ರೋಗಿಗಳನ್ನು ಇರಿಸಲಾಗಿದೆ. ಇವರಿಗೆ ಕೊರೋನಾ ಪಾಸಿಟೀವ್ ವರದಿ ಬಂದ ಬಳಿಕ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತೆ. ಅಷ್ಟೇ ಅಲ್ಲದೆ ದಿನವಿಡೀ ಕರ್ತವ್ಯ ನಿರ್ವಹಿಸಿ ಮನೆಗಳಿಗೆ ತೆರಳುವ ನರ್ಸ್, ಸಿಬ್ಬಂದಿ ನಮ್ಮಿಂದ ಇಡೀ ಕುಟುಂಬಕ್ಕೆ ಕೊರೋನಾ ಬಂದರೆ ಏನು ಮಾಡಬೇಕು ಎಂಬ ಪ್ರಶ್ನೆ ಮಾಡಿದ್ದು, ಎಲ್ಲರ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆ ಮಾಡಿದರೆ ನಾವೂ ಎಚ್ಚರಿಕೆ ವಹಿಸಿ ಕೆಲಸ ಮಾಡಲು ಸಹಾಯ ಆಗುತ್ತೆ, ಇಲ್ಲವಾದರೆ ಶಂಕಿತ ರೋಗಿಗಳನ್ನು ಪ್ರತ್ಯೇಕವಾಗಿಯಾದರೂ ಇರಿಸಲಿ ಎಂದಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಎಸ್ಎಆರ್ಐ ಮತ್ತು ಐಎಲ್ಐ ರೋಗಿಗಳ ಕೊರೋನಾ ಟೆಸ್ಟ್ ವರದಿಯಲ್ಲಿ ಬಹುತೇಕರಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಹೀಗಿರುವಾಗ ಜಿಲ್ಲಾಸ್ಪತ್ರೆಯ ಸಾಮಾನ್ಯ ವಾರ್ಡ್ಗಳಲ್ಲಿ ಎಸ್ಎಆರ್ಐ ಮತ್ತು ಐಎಲ್ಐ ರೋಗಿಗಳನ್ನ ಇರಿಸಿರುವುದು ಕೊರೋನಾ ಸೋಂಕು ಹರಡಲು ಸಹಾಯ ಮಾಡಿದಂತಾಗಿದೆ. ಇದರ ಅರಿವಿಲ್ಲದೇ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು, ಸೇರಿದಂತೆ ನರ್ಸ್ಗಳಲ್ಲಿ ಸೋಂಕು ಕಾಣಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬೊಬ್ಬ ಕೊರೋನಾ ಸೋಂಕಿತರ ಟ್ರಾವಲ್ ಹಿಸ್ಟರಿ ಸಮೇತ ಪರಿಶೀಲಿಸಿ ಸಂಪರ್ಕಿತರನ್ನೂ ಬಿಡದೆ ಚಿಕಿತ್ಸೆಗೆ ಒಳಪಡಿಸುತ್ತಿದ್ದ ಆರೋಗ್ಯ ಇಲಾಖೆಯ ನಿರ್ದೇಶನ ಪಾಲಿಸುವಲ್ಲಿ ಎಡವಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು, ಸೋಂಕು ಹೆಚ್ಚಾಗಲು, ಮತ್ತೊಂದು ಯಡವಟ್ಟು ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ದೇಶದಲ್ಲಿ ಮುಂದುವರೆದ ಕೊರೋನಾ ಸ್ಫೋಟ; ಮಂಗಳವಾರ 64,531 ಪ್ರಕರಣಗಳು ಪತ್ತೆ
ಈ ಕುರಿತು ಆಸ್ಪತ್ರೆ ಸಿಬ್ಬಂದಿ, ವೈದ್ಯರು, ನರ್ಸ್ಗಳು ಸಭೆ ನಡೆಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ಬರುವ ಎಸ್ಎಆರ್ಐ ಮತ್ತು ಐಎಲ್ಐ ಪ್ರಕರಣಗಳಲ್ಲಿ ಕೊರೋನಾ ಇದೆ ಎಂಬುದು ನಮಗೆ ತಿಳಿಯುವುದಿಲ್ಲ. ಅವರ ಕೊರೋನಾ ಟೆಸ್ಟ್ ವರದಿ ಬರುವವರೆಗೆ ಅಲ್ಲಿ ಇರಿಸಿ ಬಳಿಕ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಇದಕ್ಕಾಗಿಯೇ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ನೀಡಲಾಗಿದೆ. ಕೊರೋನಾ ಪರೀಕ್ಷಾ ವರದಿ ಬರುವ ಮೊದಲೇ ಕೊರೋನಾ ಇದೆ ಎಂಬುದನ್ನು ದೇವರೇ ಕಂಡು ಹಿಡಿಯಬೇಕು ಎಂದಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಕೊರೋನಾ ತಡೆಗೆ ಇಲ್ಲಿಯವರೆಗೆ ಶ್ರಮ ವಹಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲಿ ಎಸ್ಎಆರ್ಐ ಮತ್ತು ಐಎಲ್ಐ ರೋಗಿಗಳ ಚಿಕಿತ್ಸೆ ವಿಷಯದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಇಡೀ ಜಿಲ್ಲಾಸ್ಪತ್ರೆಯ ವೈದ್ಯರು, ರೋಗಿಗಳು, ನರ್ಸ್ಗಳು, ಸಿಬ್ಬಂದಿಗೆ ಹಾಗೂ ಇತರೆ ಸಾಮಾನ್ಯ ರೋಗಿಗಳಿಗೆ ಕೊರೋನಾ ಬೀತಿ ಹುಟ್ಟಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ