ಮುಕ್ಕೋಟಿ ದೇವರು ಒಟ್ಟಾಗಿ ಬಂದರೂ, ಸಮವಲ್ಲ ಅಪ್ಪನ ಎದುರು... ನೀವು ಎಷ್ಟೇ ಬೆಳೆದರೂ, ನೀವು ಹೇಗೆ ಮೆರೆದರೂ ಬೆನ್ನೆಲುಬು ಅಪ್ಪನ ಬೆವರು.. ಹೌದು, ಅಪ್ಪ ಅಂದರೇನೇ ಬದುಕು, ತಾಯಿ ಜೀವ ಕೊಟ್ಟರೆ, ತಂದೆ ಆ ಜೀವನವನ್ನ ಕಟ್ಟಿ ಕೊಡುತ್ತಾನೆ. ಅಂತಹ ತಂದೆಯೇ ಕೋವಿಡ್ 19ಗೆ(COVID-19) ಬಲಿಯಾದರೆ, ಆ ಮಗನ ಮನಸ್ಸು ಯಾವ ರೀತಿ ಆಗಿರಬಾರದು. ಮಹಾರಾಷ್ಟ್ರ(Maharashtra)ದ ಬಿಸಿನೆಸ್ ಮ್ಯಾನ್ ಅರುಣ್ ಕೋರೆ(Businessman Arun Kore) ಎಂಬುವವರ ತಂದೆ 2020ರಲ್ಲಿ ಕೊರೋನಾಗೆ(Coronavirus) ಬಲಿಯಾಗಿದ್ದರು. ಇದೀಗ ತಂದೆಯನ್ನ ಕಳೆದುಕೊಂಡು ನೋವಿನಲ್ಲಿದ್ದ, ಅರುಣ್ ಕೋರೆ ತಮ್ಮ ತಂದೆ ಪುತ್ಥಳಿಯನ್ನು ನಿರ್ಮಿಸಿದ್ದಾರೆ. 15 ಲಕ್ಷ ವೆಚ್ಚದ ಸಿಲಿಕಾನ್ ಪ್ರತಿಮೆ(Silicon Statue)ಯನ್ನು ಅರುಣ್ ಕೋರೆ ನಿರ್ಮಿಸಿದ್ದಾರೆ. ಈ ಮೂಲಕ ಗತಿಸಿದ ತಂದೆಯನ್ನು ಮತ್ತೆ ಪ್ರತಿಮೆ ರೂಪದಲ್ಲಿ ತಂದು ತಮ್ಮ ನೋವನ್ನ ಮರೆಯುತ್ತಿದ್ದಾರೆ.
32 ವರ್ಷದ ಅರುಣ್ ಕೋರೆ, ತಮ್ಮ ತಂದೆ 55 ವರ್ಷದ ರಾವ್ ಸಾಹೇಬ್ ಶಾಮರಾವ್ ಕೋರೆ ಅವರನ್ನು 2020ರ ಸೆಪ್ಟೆಂಬರ್ 6ರಂದು ಕೊರೋನಾದಿಂದಾಗಿ ಕಳೆದುಕೊಂಡರು. ಅರುಣ್ ಕೋರೆ ಅವರ ತಂದೆ ನಾಗಪುರದಲ್ಲಿ ರಾಜ್ಯ ಅಬಕಾರಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವರ್ಷ ಕೋವಿಡ್ 19 ನಿಂದಾಗಿ ತಂದೆಯನ್ನು ಕಳೆದುಕೊಂಡು, ಅವರ ಕುಟುಂಬ ನೋವಿನಲ್ಲಿತ್ತು. ತನ್ನ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅರುಣ್ ಕೋರೆ, ಯೂಟ್ಯೂಬ್ ನಲ್ಲಿ ಕರ್ನಾಟಕದ ಉದ್ಯಮಿಯೊಬ್ಬರು ತಮ್ಮ ಪತ್ನಿ ತೀರಿಕೊಂಡ ನಂತರ ಅವರ ಪ್ರತಿಮೆ ಮಾಡಿದ್ದನ್ನು ನೋಡಿದ್ದಾರೆ. ಇದರಿಂದ ಪ್ರೇರೇಪಿತರಾದ ಅರುಣ್ ಕೋರೆ ನನ್ನ ತಂದೆಯ ಪ್ರತಿಮೆಯನ್ನು ಹೀಗೆ ಮಾಡಿಸಬೇಕೆಂದು ಅಂದುಕೊಂಡರು.
ಬಳಿಕ ಕೋರೆ ತನ್ನ ಸ್ನೇಹಿತ ವಿಜಯ್ ಪಾಟೀಲ್ ಅವರನ್ನು ಸಂಪರ್ಕ ಮಾಡಿದ್ದರು. ಸ್ನೇಹಿತನ ಮೂಲಕ ಕೊಪ್ಪಳ ಮೂಲದ ಉದ್ಯಮಿಗೆ ಪ್ರತಿಮೆ ಮಾಡಿಕೊಟ್ಟಿದ್ದ, ಬೆಂಗಳೂರಿನ ಕಲಾವಿದನ ಫೋನ್ ನಂಬರ್ ಪಡೆದು ಸಂಪರ್ಕಿಸಿದರು. ಅದರಂತೆ ಬೆಂಗಳೂರಿನ ಕಲಾವಿದ ಕೂಡ ಎರಡು ತಿಂಗಳೊಳಗೆ ತಂದೆ ಪ್ರತಿಮೆಯನ್ನು ಸಿದ್ಧಪಡಿಸಿದ್ದರು. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಅರುಣ್ ಕೋರೆ, ತನ್ನ ತಂದೆಯ ಪ್ರತಿಮೆಯನ್ನು ನೋಡಿ ಆಶ್ಚರ್ಯಗೊಂಡರು. "ನನ್ನ ಕಣ್ಣಿನಿಂದ ಇದು ನಂಬಲು ಸಾಧ್ಯವಾಗುತ್ತಿಲ್ಲ, ಈ ಪ್ರತಿಮೆಯನ್ನು ನೋಡಿದರೆ, ನನ್ನ ತಂದೆ ಜೀವಂತವಾಗಿದ್ದಾರೆ. ನನ್ನ ಮುಂದೆ ನನ್ನ ತಂದೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಭಾಸವಾಗುತ್ತದೆ" ಅಂತ ಅರುಣ್ ಕೋರೆ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರತಿಮೆಯನ್ನು 15 ಲಕ್ಷ ರೂ.ಗಳ ವೆಚ್ಚದಲ್ಲಿ ತಯಾರಿಸಲಾಗಿದೆ. ಹಾಗೂ ಈ ಪ್ರತಿಮೆ 50 ವರ್ಷಗಳ ಕಾಲ ಇರುತ್ತೆ ಅಂತ ಕೋರೆ ತಿಳಿಸಿದ್ದಾರೆ.
ಇದನ್ನೂ ಓದಿ:Tragic Story: ನದಿಯಲ್ಲಿ ಸಿಲುಕಿದ್ದ ಆನೆ ರೆಸ್ಕ್ಯೂ ವೇಳೆ ಘೋರ ದುರಂತ; ಪತ್ರಕರ್ತ ಸಾವು, ರಕ್ಷಣಾ ಸಿಬ್ಬಂದಿ ನಾಪತ್ತೆ..
ಇನ್ನು ಅರುಣ್ ಕೋರೆ ಕುಟುಂಬವು ರಾಜಸ್ಥಾನದ ಸಾಂಗ್ಲಿ ನಗರದಲ್ಲಿ ವಾಸವಿದ್ದಾರೆ. ತಮ್ಮ ಬಂಗಲೆಯಲ್ಲೇ ಚಿಕ್ಕದೊಂದು ಮ್ಯೂಸಿಯಂ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿಯೇ ತಂದೆ ಪ್ರತಿಮೆ ಇಟ್ಟಿದ್ದಾರೆ. ಹಾಗೂ ತಮ್ಮ ತಂದೆ ಉಪಯೋಗಿಸುತ್ತಿದ್ದ ಸಮವಸ್ತ್ರ, ಪದಕಗಳು, ತಂದೆಗೆ ಸಿಕ್ಕ ಬಹುಮಾನಗಳನ್ನು ಇಲ್ಲಿಯೇ ಇಟ್ಟಿದ್ದಾರೆ. ತಂದೆ ಬದುಕಿದ್ದಾಗ ಬರೆಯುತ್ತಿದ್ದ ತಮ್ಮ ಆತ್ಮಚರಿತ್ರೆಯನ್ನು ಪುತ್ರ ಅರುಣ್ ಕೋರೆ ಪೂರ್ಣಗೊಳಿಸಲು ಮುಂದಾಗಿದ್ದಾರೆ.
ಮಾದರಿಯಾದ "ಕೊಪ್ಪಳದ ಶಹಜಹಾನ್"
ಕೊಪ್ಪಳ ಸಮೀಪದ ಭಾಗ್ಯನಗರದ ಕೂದಲು ಉದ್ಯಮಿ ಶ್ರೀನಿವಾಸ ಗುಪ್ತಾ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದರು. ಪತ್ನಿ ಆಸೆಯಂತೆ ಮನೆಯನ್ನು ನಿರ್ಮಿಸಿದ್ದರು. ಆದರೆ, ಗೃಹ ಪ್ರವೇಶಕ್ಕೆ ಮನೆಯ ಒಡತಿಯೇ ಇಲ್ಲವಲ್ಲ ಎಂಬ ಕೊರಗು ಉದ್ಯಮಿ ಶ್ರೀನಿವಾಸ ಗುಪ್ತಾರನ್ನು ಕಾಡಿತ್ತು. ಪತ್ನಿಯ ಅನುಪಸ್ಥಿತಿ ಕಾಡಬಾರದು ಎಂದು ಯೋಚಿಸಿ, ನೈಜ ರೂಪದ ಗೊಂಬೆ ನಿರ್ಮಿಸಲು ಯೋಚಿಸಿ, ತಮ್ಮ ಪತ್ನಿಯ ಪ್ರತಿಮೆಯನ್ನು ಸಿದ್ಧಪಡಿಸಿ ಗೃಹಪ್ರವೇಶ ನೆರವೇರಿಸಿದ್ದರು. ಇವರನ್ನ ಕಂಡು ತಮಿಳುನಾಡಿನಲ್ಲೂ ಪ್ರತಿಯೋರ್ವ ಮೃತಪಟ್ಟಿದ್ದ ಹೆಂಡತಿಯ ಪುತ್ಥಳಿಯನ್ನು ನಿರ್ಮಿಸಿ ಮನೆಯಲ್ಲಿ ಇಟ್ಟುಕೊಂಡಿದ್ದರು. ಇದೀಗ ಇವರನ್ನ ಮತ್ತೆ ಮಾದರಿಯಾಗಿ ತೆಗೆದುಕೊಂಡ ರಾಜಸ್ಥಾನ ಮೂಲದ ಉದ್ಯಮಿ ತನ್ನ ತಂದೆಯ ಪ್ರತಿಮೆಯನ್ನು ನಿರ್ಮಿಸಿ ಮನೆಯಲ್ಲಿರಿಸಿದ್ದಾರೆ.
(ವರದಿ - ವಾಸುದೇವ್.ಎಂ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ