CoronaVirus Cases: ಪೇಟಿಎಂ ಉದ್ಯೋಗಿಗೆ ಕೊರೋನಾ; ವಿಪ್ರೋ, ಟಿಸಿಎಸ್, ಎಚ್​ಸಿಎಲ್​ ಕಂಪನಿಗಳಲ್ಲೂ ಹೈ ಅಲರ್ಟ್​

Coronavirus in India: ಪೇಟಿಎಂ ಸೇರಿದಂತೆ ಭಾರತದ ವಿಪ್ರೋ, ಟಿಸಿಎಸ್, ಎಚ್​ಸಿಎಲ್, ನಿಯರ್​ಬೈ, ಶೆಲ್ ಮುಂತಾದ ಕಂಪನಿಗಳು ಕೊರೋನಾ ವೈರಸ್ ಕುರಿತಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಮಾ. 5): ಹರಿಯಾಣದ ಗುರುಗ್ರಾಮದಲ್ಲಿರುವ ಪೇಟಿಂಎ ಉದ್ಯೋಗಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ತಮ್ಮ ಉದ್ಯೋಗಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಎಲ್ಲ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಗುರುಗ್ರಾಮದ ಪೇಟಿಎಂ ಸಂಸ್ಥೆ ಆದೇಶಿಸಿದೆ. ಅಲ್ಲದೆ, 2 ದಿನಗಳ ಕಾಲ ಪೇಟಿಎಂ ಸಂಸ್ಥೆಯನ್ನು ಮುಚ್ಚಲಾಗಿದೆ.

ಪೇಟಿಎಂ ಕಂಪನಿಯ ಉದ್ಯೋಗಿ ರಕ್ತದ ಮಾದರಿಯ ಪರೀಕ್ಷೆ ನಡೆಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಪೇಟಿಎಂ ಕಂಪನಿಯನ್ನು 2 ದಿನಗಳ ಕಾಲ ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ವಿಶ್ವದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿಗೆ ಒಳಗಾಗಿರುವ ದೇಶಗಳಲ್ಲಿ ಇಟಲಿ ಕೂಡ ಒಂದು. ಹರಿಯಾಣದ ಪೇಟಿಎಂ ಉದ್ಯೋಗಿ ಕೆಲವು ದಿನಗಳ ಹಿಂದಷ್ಟೇ ಇಟಲಿಗೆ ಪ್ರವಾಸಕ್ಕೆ ತೆರಳಿದ್ದರು. ಆತ ಭಾರತಕ್ಕೆ ವಾಪಾಸಾದ ಬಳಿಕ ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ಭಾರತದಲ್ಲಿ ಮುಂದುವರಿದ ಕೊರೋನಾ ಭೀತಿ; ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆ

ಹರಿಯಾಣದ ಪೇಟಿಎಂ ಉದ್ಯೋಗಿ ಸೇರಿದಂತೆ ಇಟಲಿಯ 16 ಮಂದಿಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಕಾರಿನ ಚಾಲಕನಿಗೂ ಕೊರೋನಾ ಬಂದಿದೆ. ತನ್ನ ಉದ್ಯೋಗಿಗಳಲ್ಲಿ ಕೊರೊನಾ ಕಂಡುಬಂದಿರುವುದರಿಂದ ಉತ್ತರ ಪ್ರದೇಶದ ನೋಯ್ಡಾ ಮತ್ತು ಹರಿಯಾಣದ ಗುರುಗ್ರಾಮದಲ್ಲಿರುವ ಕಚೇರಿಗಳನ್ನು ಎರಡು ದಿನಗಳವರೆಗೆ ಬಂದ್​ ಮಾಡಿ, ಶುಚಿಗೊಳಿಸಲು ಪೇಟಿಎಂ ಆದೇಶಿಸಿದೆ. ಇದರೊಂದಿಗೆ ಪೇಟಿಎಂ ಹಾಗೇ, ತನ್ನ ಉದ್ಯೋಗಿಗಳಿಗೆ ಕೆಲವು ದಿನಗಳವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ.

ಈ ಬಗ್ಗೆ ಮಾತನಾಡಿರುವ ಪೇಟಿಎಂ ವಕ್ತಾರ, ಇಟಲಿ ಪ್ರವಾಸ ಮುಗಿಸಿ ಬಂದವರಿಗೆ ಸೋಂಕು ತಗುಲಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಕುಟುಂಬಕ್ಕೆ ಸಂಪೂರ್ಣವಾಗಿ ನೆರವಾಗುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ವೈರಸ್​ನಿಂದ ಜಾಗತಿಕ ಮರಣ ಪ್ರಮಾಣ ಶೇ.3.4ರಷ್ಟು ಹೆಚ್ಚಳ; ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಪೇಟಿಎಂ ಸೇರಿದಂತೆ ಭಾರತದ ವಿಪ್ರೋ, ಟಿಸಿಎಸ್, ಎಚ್​ಸಿಎಲ್, ನಿಯರ್​ಬೈ, ಶೆಲ್ ಮುಂತಾದ ಕಂಪನಿಗಳು ಕೊರೋನಾ ವೈರಸ್ ಕುರಿತಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಮುಂಜಾಗ್ರತೆ ವಹಿಸಲು ಸೂಚಿಸಿದೆ.

ವಿಪ್ರೋದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲವು ವಾರಗಳಿಂದೀಚೆಗೆ ಕೊರೋನಾ ಸೋಂಕು ಹೆಚ್ಚಾಗಿರುವ ದೇಶಗಳಿಗೆ ಪ್ರಯಾಣ ಬೆಳೆಸಿದ್ದರೆ ಅವರು 14 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಚೀನಾ, ಹಾಂಕಾಂಗ್, ಇಟಲಿ ಮುಂತಾದ ದೇಶಗಳಿಗೆ ಪ್ರಯಾಣ ಬೆಳೆಸದಂತೆ ವಿಪ್ರೋ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ.

ಭಾರತದ ಸಾಫ್ಟ್​ವೇರ್ ಕಂಪನಿಗಳಾದ  ಟಿಸಿಎಸ್, ಹೆಚ್​ಸಿಎಲ್ ಮುಂತಾದ​ ಸಂಸ್ಥೆಗಳು ಕೂಡ ಕೊರೋನಾ ವೈರಸ್ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆದೇಶ ಹೊರಡಿಸಿವೆ. ಹಾಗೇ, ಸಿಬ್ಬಂದಿಗೆ ಅನಾರೋಗ್ಯ ಕಂಡುಬಂದಲ್ಲಿ ಮನೆಯಿಂದಲೆ ಕೆಲಸ ಮಾಡಲು ಸೂಚಿಸಿವೆ.
First published: