ರಾಷ್ಟ್ರಪತಿ ಭವನದ ಬಳಿಕ ಪಿಎಂಓ ಬಳಿಯ ರಕ್ಷಣಾ ಇಲಾಖೆ ಕಚೇರಿಯಲ್ಲಿ ಕೊರೋನಾ ಪತ್ತೆ

Coronavirus In India: ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ವಿಷಯ ಗೊತ್ತಾಗುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್

  • Share this:
ನವದೆಹಲಿ (ಜೂ. 4): ಜಾಗತಿಕ ಪಿಡುಗಾಗಿರುವ ಕೊರೋನಾ ಅತ್ಯಂತ ಭದ್ರತೆ, ಸ್ವಚ್ಛತೆಗಳಿರುವ ರಾಷ್ಟ್ರಪತಿ ಭವನವನ್ನೂ ಬಿಟ್ಟಿರಲಿಲ್ಲ. ರಾಷ್ಟ್ರಪತಿ ಭವನದ ಒಳಗಡೆ ಇರುವವರಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಈಗ ಪ್ರಧಾನ ಮಂತ್ರಿ ಕಚೇರಿ ಬಳಿಯೇ ಕೊರೋನಾ ಕೇಸ್ ಪತ್ತೆಯಾಗಿದೆ. ಅದೂ ಕೂಡ ರಕ್ಷಣಾ ಇಲಾಖೆ ಇರುವ ರೈಸಿನಾ ಹಿಲ್ ನಲ್ಲಿ...

ರೈಸಿನಾ ಹಿಲ್​ನ ಸೌತ್ ಬ್ಲಾಕ್ ನಲ್ಲಿರುವ ರಕ್ಷಣಾ ಇಲಾಖೆ ಕಚೇರಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಬಂದಿದೆ. ಅದು ಮತ್ಯಾರಿಗೂ ಅಲ್ಲ, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಅವರಿಗೆ. ಇನ್ನೂ ಆತಂಕಕಾರಿ ವಿಷಯ ಎಂದರೆ ಇದೇ ಅಜಯ್ ಕುಮಾರ್ ಕೂರುವ ರಕ್ಷಣಾ ಇಲಾಖೆ ಕಚೇರಿಯಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂರುವುದು. ಅಷ್ಟೇ ಅಲ್ಲ, ಭೂಸೇನಾ ಮತ್ತು ಜಲಸೇನಾ ಮುಖ್ಯಸ್ಥರು ಕೂರುವುದು  ಕೂಡ ಇದೇ ಕಚೇರಿಯಲ್ಲಿ.

ಇದನ್ನೂ ಓದಿ: ರಾಜ್ಯಸಭಾ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಪೈಪೋಟಿ; ಕೆಸಿವಿಗೆ ಕರೆ ಮಾಡಿ ಒತ್ತಡ ಹೇರಿದ ಮುದ್ದಹನುಮೇಗೌಡ

ವಿಷಯ ಗೊತ್ತಾಗುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಚೇರಿಯಲ್ಲಿ ಒಟ್ಟು 35 ನೌಕರರು ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಈಗ ಕೊರೋನಾ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲು ರಕ್ಷಣಾ ಇಲಾಖೆಯ ವಕ್ತಾರರು ನಿರಾಕರಿಸಿದ್ದಾರೆ.

ಇದಕ್ಕೂ ಮೊದಲು ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ 125 ಕುಟುಂಬಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲಿಯ ಗಾರ್ಡನ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದರೆ, ಈ ಬಾರಿ ರಕ್ಷಣಾ ಇಲಾಖೆಯ ಅಧಿಕಾರಿಗೇ ಕೊರೋನಾ ಸೋಂಕು ದೃಢಪಟ್ಟಿದೆ.First published: