• Home
  • »
  • News
  • »
  • coronavirus-latest-news
  • »
  • ಕೊರೋನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 31ಕ್ಕೇರಿಕೆ; ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಸೋಂಕು ಏರಿಕೆ

ಕೊರೋನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 31ಕ್ಕೇರಿಕೆ; ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಸೋಂಕು ಏರಿಕೆ

ಫೇಸ್ ಮಾಸ್ಕ್ ಹಾಕಿರುವ ವಿದ್ಯಾರ್ಥಿಗಳು

ಫೇಸ್ ಮಾಸ್ಕ್ ಹಾಕಿರುವ ವಿದ್ಯಾರ್ಥಿಗಳು

ಚೀನಾ ಆಚೆ ವಿಶ್ವಾದ್ಯಂತ ಕೊರೋನಾ ವೈರಸ್ ಬಹಳ ಕ್ಷಿಪ್ರವಾಗಿ ಹರಡುತ್ತಿದೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದ ಇತರೆಲ್ಲೆಡೆ 17 ಪಟ್ಟು ವೇಗದಲ್ಲಿ ಕೊರೋನಾ ವೈರಸ್ ಹರಡುತ್ತಿದೆಯಂತೆ.

  • Share this:

ನವದೆಹಲಿ(ಮಾ. 06): ಕೊರೋನಾ ವೈರಸ್​ ವೇಗವಾಗಿ ಹರಡುವುದು ಮುಂದುವರಿದಿದೆ. ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಚೀನಾದಲ್ಲಿ ಶುಕ್ರವಾರ ಬೆಳಗ್ಗೆ 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಆ ದೇಶದಲ್ಲಿ ಸಾವಿನ ಸಂಖ್ಯೆ 3,042ಕ್ಕೆ ಏರಿದೆ. ಇಟಲಿ ದೇಶದಲ್ಲಿ 148 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ.


ನಿನ್ನೆಯವರೆಗೂ ಭಾರತದಲ್ಲಿ ಸೋಂಕಿತರ ಸಂಖ್ಯೆಯ 29 ಇತ್ತು. ಇವತ್ತು ಇನ್ನಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಘಾಜಿಯಾಬಾದ್​ನಲ್ಲಿರುವ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವ್ಯಕ್ತಿ ಇತ್ತೀಚೆಗಷ್ಟೇ ಇರಾನ್ ದೇಶಕ್ಕೆ ಹೋಗಿ ಬಂದಿದ್ದರೆನ್ನಲಾಗಿದೆ. ದೆಹಲಿಯ ವ್ಯಕ್ತಿಯೊಬ್ಬರೂ ಸೋಂಕಿತರಾಗಿದ್ದಾರೆ. ಈ ವ್ಯಕ್ತಿ ಥಾಯ್ಲೆಂಡ್ ಮತ್ತು ಮಲೇಷ್ಯಾ ಪ್ರವಾಸ ಹೋಗಿ ಬಂದಿದ್ದರು. ಇವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ. ಭಾರತದಲ್ಲಿರುವ ಈ 31 ಮಂದಿ ಸೋಂಕಿತರ ಪಟ್ಟಿಯಲ್ಲಿ 15 ವಿದೇಶೀ ಪ್ರವಾಸಿಗರೂ ಇದ್ದಾರೆ. ಹಾಗೆಯೇ, ಭಾರತದಲ್ಲಿ ಮೊದಲ ಬಾರಿ ಈ ವೈರಸ್ ಸೋಂಕು ಕಂಡಿದ್ದ ಮೂವರು ಕೇರಳಿಗರು ಈ ಪಟ್ಟಿಯಲ್ಲಿದ್ದಾರೆ. ಈ ಕೇರಳದ ವ್ಯಕ್ತಿಗಳು ಸದ್ಯಕ್ಕೆ ಚೇತರಿಸಿಕೊಂಡಿರುವುದು ತಿಳಿದುಬಂದಿದೆ.


ಕೊರೋನಾ ವೈರಸ್ ಹರಡುವಿಕೆ ನಿಗ್ರಹಿಸಲು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿಯಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ಡಿಸಿಎಂ ಮನೀಶ್ ಸಿಸೋಡಿಯಾ ಸೂಚಿಸಿದ್ದಾರೆ.


ಇದನ್ನೂ ಓದಿ: CoronaVirus | ಕೋವಿಡ್-19 ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಬ್ರಸೆಲ್ಸ್ ಪ್ರವಾಸ ರದ್ದು


ತೆಲಂಗಾಣದಲ್ಲಿ ವೈರಸ್ ಸೋಂಕು ತಗುಲಿರಬಹುದೆಂದು ಶಂಕಿಸಲಾದ ಇಬ್ಬರು ವ್ಯಕ್ತಿಗಳ ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ. ಇವರಿಬ್ಬರಿಗೆ ಸೋಂಕು ತಗುಲಿಲ್ಲದಿರುವುದು ಖಚಿತಪಟ್ಟಿದೆ. ಪುಣೆಯ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ವೈರೋಲಜಿಯಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು.


ಇನ್ನು ಕೊರೋನಾ ಸೋಂಕು ತಗುಲಿರುವ ತೆಲಂಗಾಣ ಮೂಲದ ಬೆಂಗಳೂರು ಸಾಫ್ಟ್​ವೇರ್ ಎಂಜಿನಿಯರ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.. ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ಈ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಇನ್ನು ಸಿಕ್ಕಿಮ್ ಸರ್ಕಾರ ವಿದೇಶೀ ಪ್ರವಾಸಿಗರಿಗೆ ಐಎಲ್​ಪಿ ಅನುಮತಿ ನೀಡುವುದನ್ನು ನಿಲ್ಲಿಸಿದೆ. ಅಂದರೆ ಯಾವುದೇ ವಿದೇಶೀಯರು ಸಿಕ್ಕಿಮ್​ಗೆ ಹೋಗದಂತೆ ನಿರ್ಬಂಧಿಸಲಾಗಿದೆ.


 ಇದನ್ನೂ ಓದಿ: CoronaVirus | ಮಾರ್ಚ್ 31ರವರೆಗೆ ದೆಹಲಿಯ ಎಲ್ಲ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ


ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಪುಟದ ಹಲವು ಸಚಿವರು ಈ ಬಾರಿ ಸಾಮೂಹಿಕ ಹೋಳಿ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಹಾಗೆಯೇ, ಪ್ರಧಾನಿಗಳು ತಮ್ಮ ಬ್ರುಸೆಲ್ಸ್ ಪ್ರವಾಸವನ್ನೂ ರದ್ದು ಮಾಡಿದ್ಧಾರೆ.


ಇದೇ ವೇಳೆ, ಚೀನಾ ಆಚೆ ವಿಶ್ವಾದ್ಯಂತ ಕೊರೋನಾ ವೈರಸ್ ಬಹಳ ಕ್ಷಿಪ್ರವಾಗಿ ಹರಡುತ್ತಿದೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದ ಇತರೆಲ್ಲೆಡೆ 17 ಪಟ್ಟು ವೇಗದಲ್ಲಿ ಕೊರೋನಾ ವೈರಸ್ ಹರಡುತ್ತಿದೆಯಂತೆ. ಇಟಲಿಯಲ್ಲಿ 148 ಮಂದಿ ಸತ್ತರೆ, ದಕ್ಷಿಣ ಕೊರಿಯಾದಲ್ಲಿ ಸಾವಿನ ಸಂಖ್ಯೆ 42 ದಾಟಿದೆ. ಇಲ್ಲಿ 6 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇನ್ನು, ಅಮೆರಿಕದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 12 ದಾಟಿದೆ.


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by:Vijayasarthy SN
First published: