ಚೀನಾ ಹೊಸ ವರಸೆ: ಕಳೆದ ವರ್ಷವೇ ವಿಶ್ವದ ಹಲವೆಡೆ ಕೊರೋನಾ ಇತ್ತೆನ್ನುತ್ತಿದೆ ಡ್ರಾಗನ್ ದೇಶ
ಕೊರೋನಾ ವೈರಸ್ ಚೀನಾದಲ್ಲಿ ಹುಟ್ಟಿದ್ದು ಎಂಬುದು ಸುಳ್ಳು, ಕಳೆದ ವರ್ಷವೇ ವಿಶ್ವದ ಹಲವೆಡೆ ಕೋವಿಡ್ ಸೋಂಕು ಉದ್ಭವಿಸಿತ್ತು. ಇದನ್ನು ಮೊದಲು ಪತ್ತೆ ಹಚ್ಚಿ ವಿಶ್ವಕ್ಕೆ ತೋರಿಸಿದ್ದು ಚೀನಾ ಅಷ್ಟೇ ಎಂದು ಆ ದೇಶ ಹೇಳಿಕೊಂಡಿದೆ.
ನವದೆಹಲಿ(ಅ. 09): ಕೊರೋನಾ ಮೊದಲು ಶುರುವಾಗಿದ್ದು ನಮ್ಮಲ್ಲಲ್ಲ. ಕಳೆದ ವರ್ಷವೇ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್ ರೋಗ ಇತ್ತು. ಆದರೆ, ಪ್ರಕರಣವನ್ನು ಮೊದಲು ಹೊರಗೆ ತಿಳಿಸಿದ್ದು ನಾವಷ್ಟೇ ಎಂದು ಚೀನಾ ಹೇಳಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಚೀನಾ ವುಹಾನ್ ನಗರಿಯಲ್ಲಿ ಮೊದಲ ಕೊರೋನಾ ಪ್ರಕರಣ ಬೆಳಕಿಗೆ ಬಂದಿದ್ದು ಹೌದು. ಚೀನಾ ಇದನ್ನು ಒಪ್ಪಿದೆಯಾದರೂ ಬೇರೆ ದೇಶಗಳಲ್ಲಿ ಅದಾಗಲೇ ಪ್ರಕರಣಗಳಿದ್ದವು. ಯಾವುದೂ ಆಚೆ ಬಂದಿರಲಿಲ್ಲ. ನಾವು ಪ್ರಕರಣವನ್ನ ಮೊದಲು ಪತ್ತೆ ಹಚ್ಚಿ ವಿಶ್ವವನ್ನ ಎಚ್ಚರಿಸಿದೆವು ಎಂದು ಚೀನಾ ತಿಳಿಸಿದೆ. ಇದೇ ವೇಳೆ, ವುಹಾನ್ ಬಯೋಲ್ಯಾಬ್ನಿಂದ ಕೊರೋನಾ ವೈರಸ್ ಸೋರಿಕೆಯಾಗಿರಬಹುದು ಮತ್ತು ಬಾವಲಿ ಅಥವಾ ಪ್ಯಾಂಗೋಲಿನ್ಗಳ ಮಾಂಸದ ಮೂಲಕ ಮನುಷ್ಯರಿಗೆ ಇದು ಹರಡಿರಬಹುದು ಎಂಬ ವಾದವನ್ನು ಇದೇ ವೇಳೆ ಚೀನಾ ಅಲ್ಲಗಳೆದಿದೆ.
“ಕೊರೋನಾ ವೈರಸ್ ಒಂದು ಹೊಸ ರೀತಿಯ ವೈರಸ್ ಆಗಿದ್ದು, ದಿನಗಳೆದಂತೆ ಅದರ ಹೊಸ ಹೊಸ ವಿಚಾರಗಳು ತಿಳಿಯುತ್ತಿವೆ. ಕಳೆದ ವರ್ಷ ವಿಶ್ವದ ಹಲವೆಡೆ ಈ ವೈರಸ್ ಹರಡಿರುವುದು ನಮಗೆಲ್ಲಾ ಗೊತ್ತಿದೆ. ಆದರೆ, ಇದನ್ನು ಮೊದಲು ವರದಿ ಮಾಡಿದ್ದು ಚೀನಾ. ಈ ವೈರಸ್ ಅನ್ನು ಗುರುತಿಸಿ, ಅದರ ಜಿನೋಮ್ ಸೀಕ್ವೆನ್ಸ್ ಅನ್ನು ಜಗತ್ತಿಗೆ ತಿಳಿಸಿದೆವು” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ಧಾರೆ.
ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ಕ್ವಾಡ್ ಗುಂಪಿನ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಅವರು ಕೊರೋನಾ ವೈರಸ್ ರೋಗ ಇಡೀ ಜಗತ್ತಿಗೆ ಶಾಪವಾಗಿ ಪರಿಣಮಿಸಲು ಚೀನಾದ ಕಮ್ಯೂನಿಸ್ಟ್ ಪಾರ್ಟಿಯೇ ಕಾರಣ. ಕೊರೋನಾ ವೈರಸ್ ಬಗ್ಗೆ ಜಗತ್ತಿಗೆ ಸಕಾಲಕ್ಕೆ ಸರಿಯಾಗಿ ಮಾಹಿತಿ ನೀಡದೇ ಹೋದ್ದರಿಂದ ಪರಿಸ್ಥಿತಿ ಕೈಮೀರಿ ಹೋಯಿತು ಎಂದು ಪಾಂಪಿಯೋ ಝಾಡಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸಾಕಷ್ಟು ಬಾರಿ ಚೀನಾವನ್ನು ಕೋವಿಡ್ ರೋಗ ಪಸರಿಸಲು ಕಾರಣ ಎಂದು ದೂರಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಇದೀಗ ಕೊರೋನಾ ವೈರಸ್ ಎಲ್ಲಿಂದ ಪ್ರಾರಂಭವಾಯಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲು ಅಣಿಗೊಂಡಿದೆ. ಈ ಕಾರ್ಯಕ್ಕೆ ನಿಯೋಜಿಸಲಾಗಿರುವ ಜಾಗತಿಕ ಪರಿಣಿತರ ಪಟ್ಟಿಯನ್ನು ಚೀನಾಗೆ ನೀಡಿದೆ. ಚೀನಾ ಇದಕ್ಕೆ ಒಪ್ಪಿದಲ್ಲಿ ತಜ್ಞರ ತಂಡವು ಚೀನಾದಲ್ಲಿ ತನಿಖೆ ನಡೆಸಲಿದೆ. ಭಾರತ ಅಧ್ಯಕ್ಷನಾಗಿರುವ ವಿಶ್ವ ಆರೋಗ್ಯ ಸಭೆಯಲ್ಲಿ (ಡಬ್ಲ್ಯೂಎಚ್ಎ) ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ