ನವದೆಹಲಿ, ಮೇ 15: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 21ರಿಂದ ದಿನ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷದಷ್ಟು ಜನ ಸೋಂಕು ಪೀಡಿತರಾಗುತ್ತಿದ್ದಾರೆ.
ಶುಕ್ರವಾರ 3,26,098 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,53,299 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,43,72,907ಕ್ಕೆ ಏರಿಕೆ ಆಗಿದೆ. ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಶುಕ್ರವಾರ 3,890 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,66,207ಕ್ಕೆ ಏರಿಕೆ ಆಗಿದೆ.
ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ