ನವದೆಹಲಿ, ಜೂ. 1: ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗುವ ಲಕ್ಷಣಗಳು ಗೋಚರಿಸತೊಡಗಿವೆ. 54 ದಿನದ ಬಳಿಕ 1.27 ಲಕ್ಷ ಕೇಸುಗಳು ದಾಖಲಾಗಿರುವುದು ಇಂಥದೊಂದು ಆಶಾವಾದ ಮೂಡಿಸಿದೆ. ಅಲ್ಲದೆ 43 ದಿನಗಳ ಬಳಿಕ ಮೊದಲ ಬಾರಿಗೆ ಸಕ್ರೀಯ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕಿಂತ ಕಡಿಮೆ ಆಗಿರುವುದು ಮತ್ತು ಒಂದೇ ದಿನ 1,30,572 ಸಕ್ರೀಯ ಪ್ರಕರಣಗಳು ಇಳಿಕೆ ಆಗಿರುವುದು ತುಸು ಸಮಾಧಾನ ಮೂಡಿಸಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು. ಮೇ 30ರಂದು ಕೇಸುಗಳ ಸಂಖ್ಯೆ ಒಂದೂವರೆ ಲಕ್ಷದ (1,52,734) ಸಮೀಪ ಬಂದಿದೆ. ಈಗ ಮೇ 31ರಂದು 1,27,510 ಪ್ರಕರಣಗಳು ಪತ್ತೆ ಆಗಿವೆ.
ಮಂಗಳವಾರ 1,27,510 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,81,75,044ಕ್ಕೆ ಏರಿಕೆ ಆಗಿದೆ. ಮಂಗಳವಾರ 2,795 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,31,895ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 21 ಕೋಟಿ ದಾಟಿದೆ. ಈವರೆಗೆ 21,60,46,638 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ಇನ್ನೂ 20,26,092 ಆಕ್ಟಿವ್ ಕೇಸುಗಳಿವೆ. ಈವರೆಗೆ 2,59,47,629 ಮಂದಿ ಕೊರೋನಾದಿಂದ ಗುಣಮುಖ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,55,287 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸತತವಾಗಿ 19ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಗುಣ ಆಗುವವರ ಸಂಖ್ಯೆ ಹೆಚ್ಚಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ 9.04ರಷ್ಟಾಗಿದೆ. ದೈನಂದಿನ ಪಾಸಿಟಿವಿಟಿ ದರ 6.62ರಷ್ಟಾಗಿದ್ದು ಸತತವಾಗಿ 8 ದಿನಗಳವರೆಗೆ ಶೇಕಡಾ 10ಕ್ಕಿಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ