ಬೆಂಗಳೂರು (ಮಾರ್ಚ್ 24); ಮಾರಣಾಂತಿಕ ಕೊರೋನಾ ವೈರಸ್ ಹಡುವ ಸಲುವಾಗಿ ಇಡೀ ರಾಷ್ಟ್ರದಾದ್ಯಂತ ಈಗಾಗಲೇ ಲಾಕ್ಡೌನ್ ಘೋಷಿಸಲಾಗಿದೆ. ಕರ್ನಾಟಕದಲ್ಲೂ ಎಲ್ಲಾ 30 ಜಿಲ್ಲೆಗಳನ್ನೂ ಲಾಕ್ಡೌನ್ ಮಾಡಲಾಗಿದೆ. ಅಲ್ಲದೆ ಜನರನ್ನು ರಸ್ತೆಗೆ ಇಳಿಯದೆ ಮನೆಯಲ್ಲೇ ಇರಿ ಎಂದು ಸೂಚನೆ ನೀಡಲಾಗಿದೆ. ಆದರೂ, ಇದನ್ನು ಜನ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.
ಇಂದಿನಿಂದ ರಾಜ್ಯಾದ್ಯಂತ ಲಾಕ್ಡೌನ್ ಮಾಡಿದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದ ಹಲವಾರು ಜನ ರಾಜ್ಯ ರಾಜಧಾನಿಯಲ್ಲಿ ರಸ್ತೆಗೆ ಇಳಿದಿದ್ದಾರೆ. ಪರಿಣಾಮ ಬೆಂಗಳೂರಿ ಪೊಲೀಸರು ಮೂವರನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪ್ರತ್ಯೇಕ ಕೊಠಡಿಯಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಲಕ್ಷ್ಮೀದೇವಮ್ಮ ಎಂಬ ಮಹಿಳೆಯೊಬ್ಬರನ್ನು ಮತ್ತು ಅಲಸೂರು ಮೈನ್ ಚಾನೆಲ್ ರಸ್ತೆಯಲ್ಲಿ ಓಡಾಡ್ತಿದ್ದ ಇಬ್ಬರು ಆಸ್ಟ್ರೇಲಿಯಾದಿಂದ ಮರಳಿದ ಎನ್ಆರ್ಐಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೆ, ಅವರ ವಿರುದ್ಧ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊರೋನಾ ಭೀತಿ ಹಿನ್ನೆಲೆ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದರೂ ಸಹ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ರಸ್ತೆಗೆ ಇಳಿಯುವ ಎಲ್ಲರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಜನ ಸುರಕ್ಷಿತವಾಗಿ ಮನೆಯಲ್ಲೇ ಇದ್ದರೆ ಒಳತು. ಅಕಸ್ಮಾತ್ ರಸ್ತೆಗೆ ಇಳಿದರೆ ಅನಗತ್ಯ ಕೇಸುಗಳನ್ನು ಮೈಮೇಳೆ ಎಳೆದುಕೊಂಡಂತಾಗುತ್ತದೆ. ಒಮ್ಮೆ ಈ ಪ್ರಕರಣಕ್ಕೆ ಈಡಾದರೆ ಕನಿಷ್ಟ 6 ತಿಂಗಳಿನಿಂದ 2 ವರ್ಷದ ವರೆಗೆ ಜೈಲುವಾಸ ಖಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ : ಏನಿದು ಕೊರೋನಾ ಸ್ಟೇಜ್ 3?; ಈ ಹಂತಕ್ಕೆ ಹೋಗಲು ಸಜ್ಜಾಗಿದೆಯಾ ಕರ್ನಾಟಕ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ