ದಿಲ್ಲಿ ಪೋಸ್ಟ್ | ಕೊರೋನಾ: ರಾಜ್ಯ ರಾಜಕಾರಣದಲ್ಲಿ ಕೆಲವರಿಗೆ ಪಾಸಿಟಿವ್, ಕೆಲವರಿಗೆ ನೆಗೆಟಿವ್!

ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಕಾಪಾಡಲೆಂದೇ ಕೊರೋನಾ ಕಾರಣ ಕೊಟ್ಟು ಅಲ್ಲಿನ ಸ್ಪೀಕರ್ ಸದನ ಮುಂದೂಡಿದ್ದರು. ಅದಕ್ಕೆ ಕೌಂಟರ್ ಆಗಿ ದೆಹಲಿ ಬಿಜೆಪಿ ನಾಯಕರು ಬೇಕಂತಲೇ ಸಂಸತ್ ಅಧಿವೇಶನ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

news18-kannada
Updated:March 21, 2020, 3:49 PM IST
ದಿಲ್ಲಿ ಪೋಸ್ಟ್ | ಕೊರೋನಾ: ರಾಜ್ಯ ರಾಜಕಾರಣದಲ್ಲಿ ಕೆಲವರಿಗೆ ಪಾಸಿಟಿವ್, ಕೆಲವರಿಗೆ ನೆಗೆಟಿವ್!
ದಿಲ್ಲಿ ಪೋಸ್ಟ್.
  • Share this:
ಇಡೀ ದೇಶದಲ್ಲಿ ಈಗ ಕೊರೋನಾತಂಕ ಕಾಡಲಾರಂಭಿಸಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಕೊರೋನಾ ಹೆಸರು ಕೇಳಿದರೆ ನಡುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕೊರೋನಾ ಜನರ ಮೇಲಷ್ಟೇ ಪರಿಣಾಮ ಬೀರುವುದು ಮಾತ್ರವಲ್ಲದೆ ರಾಜ್ಯ ರಾಜಕಾರಣದ ಮೇಲೂ ಅದು  ಪ್ರಭಾವ ಬೀರಿದೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವವರು, ವಿಜಯೇಂದ್ರ ಹಸ್ತಕ್ಷೇಪದಿಂದ ಬೇಸತ್ತಿರುವವರು ತಮ್ಮತಮ್ಮೊಳಗೆ ಚರ್ಚೆ ಮಾಡಿಕೊಂಡು ಕೂಟ ಕಟ್ಟಿಕೊಳ್ಳಲು ಅಣಿಯಾಗುತ್ತಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ರಾಜ್ಯಕ್ಕೆ ಬರುತ್ತಾರೆ ಎಂಬ ಸುದ್ದಿ 'ಸಮಾನ ಮನಸ್ಕರಲ್ಲಿ' ಹುರುಪು ಮೂಡಿಸಿತ್ತು. ನಡ್ಡ ಭೇಟಿ ಮಾಡಿ ಸಡ್ಡು ಹೊಡೆಯುವ ಸುಳಿವು ನೀಡಲು ಸಂಚು ರೂಪಿಸಲಾಗಿತ್ತು.

ಆದರೆ ನಡ್ಡ ಬಂದು‌ ಹೋದ ಮೇಲೆ ಮತ್ತು ಕೊರೋನಾ ಎಫೆಕ್ಟ್​ನಿಂದ ಆ ಹುರುಪು ಹಾರಿಹೋಗಿದೆ. ಅಸಮಾಧಾನವುಳ್ಳ ಸಮಾನಮನಸ್ಕರಿಗೆ ನಡ್ಡ "ಏನೇ ಇದ್ದರೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಬಳಿ ಹೇಳಿ ಸರಿಪಡಿಸಿಕೊಳ್ಳಿ," ಎಂದು ಹೇಳಿದ್ದಾರೆ. ಇದು ಸಮಾನ ಮನಸ್ಕರ ಮನಸ್ಸಿಗಾದ ಮೊದಲ ಆಘಾತ, ನಂತರದ್ದು ಕೊರೋನಾ. ಯಾವಾಗ ನಡ್ಡ ಮೂಲಕ ಯಡಿಯೂರಪ್ಪಗೆ ಖೆಡ್ಡಾ ತೋಡುವ ಆಲೋಚನೆ ಫಲಿಸಲಿಲ್ಲವೋ ಆಗ ಸಮಾನಮನಸ್ಕರೆಲ್ಲಾ ದೆಹಲಿಗೆ ದಂಡೆತ್ತಿ ಹೋಗಲು ನಿರ್ಧರಿಸಿದ್ದರು. ಇದಕ್ಕೆ ಕೇಂದ್ರ ಸಚಿವರೊಬ್ಬರ‌ ಪೌರೋಹಿತ್ಯವೂ ಇತ್ತು.

ದೆಹಲಿಗೆ ಹೋಗಿ ಅಮಿತ್ ಶಾ ಬಳಿಯೇ ತಮ್ಮ ಅಳಲು ತೋಡಿಕೊಳ್ಳಲು ಅಣಿಯಾಗುತ್ತಿದ್ದಂತೆ ಕೊರೋನಾ ಭೀತಿ ಆವರಿಸಿದೆ. ಕೇಂದ್ರ ಸರ್ಕಾರವೇ ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವಾಗ ನಮ್ಮ ಕಷ್ಟ ಹೇಳಿಕೊಳ್ಳುವುದು ಹೇಗೆ? ಎಂಬ ಸಂದಿಗ್ಧತೆ ಶುರುವಾಗಿದೆ. ಹಾಗಾಗಿ ಸದ್ಯಕ್ಕೆ ಸಮಾನ ಮನಸ್ಕರು ಸುಮ್ಮನಾಗಿದ್ದಾರಂತೆ. ಆದರೆ ಎಲ್ಲರೂ ತೆಪ್ಪಗಾಗಿಲ್ಲ, ಮುರುಗೇಶ್ ನಿರಾಣಿ ತಮ್ಮ ಬ್ಯುಸಿನೆಸ್ ನೆಪದಲ್ಲಿ ದೆಹಲಿಗೆ ಬಂದು ಬೆಳಿಗ್ಗೆ ಬೆಳಿಗ್ಗೆಯೇ ನಳೀನ್ ಕುಮಾರ್ ಕಟೀಲ್ ಮನೆಗೆ ಬಂದು ಪಿಟೀಲು ಕುಯ್ದಿದ್ದಾರೆ. ನಳೀನ್ ಕುಮಾರ್ ಕಟೀಲ್ ಮೂಲಕ ಬಿ.ಎಲ್. ಸಂತೋಷ್, ಸಂತೋಷ್ ಮೂಲಕ ಅಮಿತ್ ಶಾ ಭೇಟಿ ಮಾಡಿ ಸಚಿವ ಸ್ಥಾನದ ಬೇಟೆಯಾಡುವುದು ನಿರಾಣಿ ಲೆಕ್ಕಾಚಾರ. ನಿರಾಣಿ ಇಂಥದೊಂದು ಭಿನ್ನಹ ಇಡುತ್ತಿದ್ದಂತೆ ಕಟೀಲ್ ಕೊರೋನಾ ಎಂಬ ಗುರಾಣಿ ಹಿಡಿದುಕೊಂಡುಬಿಟ್ಟರು ಎಂಬುದು ಗುಮಾನಿ.

ಇನ್ನೊಂದೆಡೆ ರಾಜ್ಯ ಬಿಜೆಪಿಯ ಸದ್ಯದ ಮೋಸ್ಟ್ ಓಕಲ್ ಲೀಡರ್ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಅಖಾಡಕ್ಕಿಳಿದಿದ್ದಾರೆ‌. ಯತ್ನಾಳ್ ಗೆ ದೆಹಲಿ ಹೊಸದಲ್ಲ, ಆದರೆ ಪರಿಸ್ಥಿತಿ ಅವರಿಗೀಗ ಪೂರಕವಾಗಿಲ್ಲ. ಹಿಂದೆ ಅನಂತಕುಮಾರ್ ಅಡಿಗಡಿಗೂ ಕಾಡಿದಂತೆ ಈಗ ಪ್ರಹ್ಲಾದ್ ಜೋಶಿ ಬೆನ್ನುಬಿದ್ದಿದ್ದಾರಂತೆ. ಯತ್ನಾಳ್ ಮೊದಲಿಂದಲೂ ಯಡಿಯೂರಪ್ಪ ಬಣದವರೆಂದೇ ಗುರುತಿಸಿಕೊಂಡಿದ್ದ ಕಾರಣ‌ಕ್ಕೆ ಈಗ ಯಡಿಯೂರಪ್ಪ ವಿರುದ್ಧವೇ ಬಂಡೇಳುವುದು‌ ಕಷ್ಟವಾಗುತ್ತಿದೆಯಂತೆ.‌ ಹೊಸ ದಾರಿ ಹುಡುಕುತ್ತಿದ್ದಾರಂತೆ. ಕೊರೋನಾ ಕಾರ್ಮೋಡ ಕರಗಿದ ಮೇಲೆ ಬಿಜೆಪಿಯ ಬಂಡಾಯಗಾರರು ದೆಹಲಿಗೆ ದಾಂಗುಡಿ ಇಡುವುದು ಶತಸಿದ್ದ ಎನ್ನುತ್ತಿವೆ ಬಿಜೆಪಿ ಮೂಲಗಳು.

ಡಿಕೆಶಿ ಆಸೆಗೆ ತಣ್ಣೀರೆರಚಿದ ಕೊರೋನಾ

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಭಾರೀ ಉತ್ಸಾಹದಿಂದ ಪಾದರಸದಂತೆ ಓಡಾಡುತ್ತಿರುವ ಡಿ.ಕೆ. ಶಿವಕುಮಾರ್, ಅಷ್ಟೇ ಅದ್ಧೂರಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕು ಎಂದುಕೊಂಡಿದ್ದರು. ಹೈಕಮಾಂಡ್ ಮುಂದೆ ಬಲಪ್ರದರ್ಶನ ಮಾಡಲು ಎಲ್ಲಾ ಹಿರಿಯ ನಾಯಕರನ್ನು ದೆಹಲಿಗೆ ಕೊಂಡೊಯ್ದು ಖುದ್ದು ಸೋನಿಯಾ ಗಾಂಧಿ ಅವರನ್ನೇ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಬೇಕು ಎಂಬ ಉದ್ದೇಶ ಹೊಂದಿದ್ದರು. ಅನಾರೋಗ್ಯದ ಕಾರಣಕ್ಕೆ ಸೋನಿಯಾ ಗಾಂಧಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬುದು ಡಿಕೆಶಿಗೆ ಗೊತ್ತಿಲ್ಲದ ಸಂಗತಿಯಾಗಿರಲಿಲ್ಲ. ಆದರೂ ತಮಗೆ ಅಧ್ಯಕ್ಷಗಾದಿ ಕೊಡುವಾಗ ಸೋನಿಯಾ ಗಾಂಧಿ ವಿಧಿಸಿದ್ದ 'ಹಿರಿಯರೆಲ್ಲರನ್ನೂ ಗೌರವದಿಂದ ಒಟ್ಟಿಗೆ‌ ಕೊಂಡೊಯ್ಯಬೇಕು' ಎಂಬ ಕಟ್ಟಪ್ಪಣೆಯನ್ನು ಶಿರಸಾವಹಿಸಿ ಪಾಲಿಸಿದ್ದೇನೆ ಎಂದು ಪುರಾವೆ ಸಹಿತ ಸಾಬೀತು ಪಡಿಸಲು ಡಿಕೆಶಿ ಇಂಥದೊಂದು ಸ್ಟ್ರಾಟರ್ಜಿ ಮಾಡಿದ್ದರು. ಅದರಲ್ಲೂ ಅಧ್ಯಕ್ಷಗಾದಿ ವಹಿಸಿಕೊಂಡ ಬಳಿಕ ಆಗುವ ಮೊದಲ ಭೇಟಿಯಲ್ಲೇ ಸೋನಿಯಾ ಗಾಂಧಿ ಅವರ ಮನಗೆಲ್ಲಬೇಕು, ಹಾಗಾದರೆ, ತಮ್ಮ ವಿರುದ್ದ ಮುಂದೆ ಯಾರೂ‌ ಏನೇ ದೂರು ಹೇಳಿದರೂ ಅರಗಿಸಿಕೊಳ್ಳಬಹುದು ಎಂಬ ಅಪ್ಪಟ ಲೆಕ್ಕಾಚಾರ ಅಡಗಿತ್ತು.

ಇದಲ್ಲದೆ ಎಲ್ಲಾ ಮುಖಂಡರೊಂದಿಗೆ ರಾಹುಲ್ ಗಾಂಧಿ ಮುಂದೆ ಪರೆಡ್ ನಡೆಸುವ ಪ್ಲಾನ್ ಕೂಡ ಇತ್ತು. ರಾಹುಲ್ ಗಾಂಧಿ ಅವರನ್ನು ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಜೊತೆಗೆ ಸೋನಿಯಾ ಗಾಂಧಿ ಬರಲು ಸಾಧ್ಯವಿಲ್ಲದ ಕಾರಣ 'ನೀವು ಬರಲೇಬೇಕೆಂದು‌' ಒತ್ತಡ ಹೇರುವ ಯೋಚನೆ ಇತ್ತು. ಮೊದಲಿಂದಲೂ‌ ತಮ್ಮ ಬಗ್ಗೆ ಅಷ್ಟಕ್ಕಷ್ಟೇ ಆಗಿರುವ ರಾಹುಲ್ ಗಾಂಧಿ ಅವರನ್ನು ಈಗಲಾದರೂ ಒಲಿಸಿಕೊಳ್ಳಬಹುದೆಂಬ ಆಸೆ ಇತ್ತು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬಂದರೆ ಅರ್ಧ ಯುದ್ದ ಗೆದ್ದಂತೆ ಎಂದುಕೊಂಡಿದ್ದರು ಡಿ.ಕೆ. ಶಿವಕುಮಾರ್.ಆದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದೇ ಇರುವುದು, ಸೋನಿಯಾ ಗಾಂಧಿ ಕೂಡ ಸದ್ಯಕ್ಕೆ ಇಂಥ ದುಸ್ಸಾಹಸ ಮಾಡಬೇಡಿ ಎಂಬ ಸಂದೇಶ ರವಾನಿಸಿರುವುದು, ರಾಹುಲ್ ಗಾಂಧಿ ಅವರ ಕಡೆಯಿಂದಲೂ ರೆಸ್ಪಾನ್ಸ್ ಬಾರದೆ ಇರುವುದು ಡಿಕೆಶಿ ಆಸೆಗೆ‌ ತಣ್ಣೀರು ಎರಚಿದಂತಾಗಿದೆ. ಡಿಕೆಶಿ ಇನ್ನೂ ಸ್ವಲ್ಪ ದಿನ ಹಿರಿಯ ನಾಯಕರನ್ನು ಹುಡುಕಿ ಹುಡುಕಿ ಭೇಟಿಯಾಗಿ ಮಧ್ಯೆ ಮಧ್ಯೆ ಟೆಂಪಲ್ ರನ್ ಮಾಡುತ್ತಾ ಕಾಯುತ್ತಾರಂತೆ. ಅದ್ಧೂರಿಯಾಗಿಯೇ ಅಧಿಕಾರ ಸ್ವೀಕರಿಸಬೇಕು, ಹೈಕಮಾಂಡ್ ನಾಯಕರ ಸಮ್ಮುಖದಲ್ಲೇ ಆಗಬೇಕು, ಈ ಮೂಲಕ 'ಹವಾ ಸೃಷ್ಟಿಸಬೇಕು' ಎಂಬುದು ಅವರ ಲೆಕ್ಕಾಚಾರವಂತೆ.

ಇದನ್ನು ಓದಿ: ದಿಲ್ಲಿ ಪೋಸ್ಟ್​ | ಡಿಕೆಶಿಯ ಆಪರೇಷನ್ ಸೀನಿಯರ್ಸ್ ಐಡಿಯಾ ಯಾರದ್ದು ಗೊತ್ತಾ?

ದೆಹಲಿ ಬಗ್ಗೆ ಈಗ ತಾತ್ಸಾರ

ಕೊರೋನಾ‌ ಹಿನ್ನೆಲೆಯಲ್ಲಿ ರಾಜಕಾರಣಿಗಳು ದೆಹಲಿ ದಂಡಯಾತ್ರೆಗಳನ್ನು ರದ್ದುಪಡಿಸುತ್ತಿದ್ದಾರೆ. ಕೆಲವರಿಗೆ 'ಹೇಗೋ ಈಗ ನಮ್ಮೂರಿನಲ್ಲಿ ಸೇಫ್ ಆಗಿದ್ದೇವೆ, ದೆಹಲಿಗೆ ಹೋಗಿ ಏನಾದರೂ ಆಗಿಬಿಟ್ಟರೆ...' ಎಂಬ ಭಯ. ಇನ್ನೂ ಕೆಲವರಿಗೆ 'ದೆಹಲಿಗೆ ಹೋದರೂ ಅಲ್ಲಿ ತಾವು‌ ಅಂದುಕೊಂಡವರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ' ಎಂಬ ಅನುಮಾನ. ಇದರಿಂದಾಗಿ ಸಾಮಾನ್ಯವಾಗಿ ಸಂಸತ್ ಅಧಿವೇಶನದ ವೇಳೆ ಚಾಚೂತಪ್ಪದೆ ದೆಹಲಿಗೆ ಬರುತ್ತಿದ್ದವರು ಕೂಡ ಕಾಣೆಯಾಗಿದ್ದಾರೆ.

ಸಂಸದರಿಗೆ ಕೊರೋನಾ ಪಾಸಿಟಿವ್

ಹೊರಗಿನಿಂದ ಬರುವವರ ವಿಷಯ ಬಿಡಿ, ಹಾಲಿ ಸಂಸದರಿಗೂ ಈಗ ದೆಹಲಿ ಎಂದರೆ ಅಷ್ಟಕ್ಕಷ್ಟೇ. ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ಸೋಷಿಯಲ್ ಡಿಸ್ಟೆನ್ಸ್ ಮಾಡಿ...' (ಸಾಮಾಜಿಕ ಅಂತರ ಕಾಯ್ದುಕೊಳ್ಳಿ) ಅಂತಾ ಭಾರೀ ಪ್ರಚಾರ ಮಾಡುತ್ತಿದೆ, ಆದರೆ ಸಂಸತ್ ಅಧಿವೇಶನ ನಡೆಸುತ್ತಿದೆ. ಸಂಸತ್ ಭವನ ನಮ್ಮ ವಿಧಾನಸೌಧದ ರೀತಿಯಲ್ಲೂ ಇಲ್ಲ‌. ವಿಧಾನಸಭೆ ಅಥವಾ ವಿಧಾನ ಪರಿಷತ್​ ನಲ್ಲಿ ಪ್ರತಿ ಸದಸ್ಯರಿಗೂ ಪ್ರತ್ಯೇಕವಾದ ಆಸನ ವ್ಯವಸ್ಥೆ ಇದೆ. ಆದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎಲ್ಲರೂ ಅಕ್ಕಪಕ್ಕ ಒತ್ತಿಕೊಂಡೇ ಕೂರಬೇಕು. 'ಇದ್ಯಾವ ಸೀಮೆ ಸೋಷಿಯಲ್ ಡಿಸ್ಟೆನ್ಸ್?' ಅಂತಾ ಸಂಸದರು‌ ಗೊಣಗಾಡುತ್ತಿದ್ದಾರೆ. ಬರೀ ನಮ್ಮ ರಾಜ್ಯದ ಸಂಸದರು ಮಾತ್ರವಲ್ಲ, ಬೇರೆಯವರೂ ಮೂಗು ಮುರಿಯುತ್ತಿದ್ದಾರೆ.

ದೆಹಲಿ ಅಧಿವೇಶನ ನಡೆಸಲು ಇದೂ ಕಾರಣ ಇರಬಹುದಾ?

ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಕಾಪಾಡಲೆಂದೇ ಕೊರೋನಾ ಕಾರಣ ಕೊಟ್ಟು ಅಲ್ಲಿನ ಸ್ಪೀಕರ್ ಸದನ ಮುಂದೂಡಿದ್ದರು. ಅದಕ್ಕೆ ಕೌಂಟರ್ ಆಗಿ ದೆಹಲಿ ಬಿಜೆಪಿ ನಾಯಕರು ಬೇಕಂತಲೇ ಸಂಸತ್ ಅಧಿವೇಶನ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈಗ ಮಧ್ಯಪ್ರದೇಶದ ರಾಜಕೀಯ ಪ್ರಹಸನ ಮುಗಿದಿದೆ. ಅಲ್ಲದೆ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದೆ. ಕನಿಕಾ ಕಪೂರ್ ಜೊತೆ ಸಂಸದ‌ ದುಷ್ಯಂತ್ ಸಿಂಗ್ ಔತಣಕೂಟವೊಂದರಲ್ಲಿ ಭಾಗವಹಿಸಿದ್ದರು. ಬಳಿಕ ಸಂಸತ್ ಅಧಿವೇಶನದಲ್ಲಿ ಬಂದಿದ್ದರು. ಅರ್ಜುನ್ ರಾಮ್ ಮೇಘ್ವಾಲ್, ಹೇಮಾಮಾಲಿನಿ, ಡೇರಿಕ್ ಓ'ಬ್ರಯೇನ್ ಮತ್ತಿತರರನ್ನು ಭೇಟಿಯಾಗಿದ್ದರು. ಸದ್ಯ ದುಷ್ಯಂತ್ ಸಿಂಗ್ ಅವರನ್ನು ಪರೀಕ್ಷೆ ಒಳಪಡಿಸಲಾಗಿದ್ದು ನೆಗಟೀವ್ ಬಂದಿದೆ. ಆದರೆ ಇದೇ ಹಿನ್ನೆಲೆಯಲ್ಲಿ ಮುಂದಿನ ವಾರ ಸಂಸತ್ ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸಬಹುದು ಎಂದು ಸಂಸದರು ಪಾಸಿಟಿವ್ ಆಗಿದ್ದಾರೆ.
First published:March 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading