ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ವೈರಸ್ ಪತ್ತೆ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ

ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಿ, ಅವರೆಲ್ಲರನ್ನೂ ಕಡ್ಡಾಯವಾಗಿ ಅವರ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ. 18): ರಾಜ್ಯಾದ್ಯಂತ ಕೊರೋನಾ ವೈರಸ್ ಬಗ್ಗೆ ಆತಂಕ ಹೆಚ್ಚಾಗಿದೆ. ಇಂದು ಬೆಂಗಳೂರಿನ ಇನ್ನಿಬ್ಬರಿಗೆ ಕೊರೋನಾ ವೈರಸ್ ತಗುಲಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಸೋಂಕಿತರಿಬ್ಬರೂ ಬೆಂಗಳೂರಿನವರೇ ಆಗಿರುವುದರಿಂದ ಸಿಲಿಕಾನ್ ಸಿಟಿಯಲ್ಲಿ ಆತಂಕ ಹೆಚ್ಚಾಗಿದೆ.56 ವಯಸ್ಸಿನ ಒಬ್ಬರು ಹಾಗೂ 25 ವಯಸ್ಸಿನ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಿಬ್ಬರೂ ಬೆಂಗಳೂರಿನವರಾಗಿದ್ದು, ಅವರ ಪ್ರಯಾಣದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 56 ವರ್ಷದ ಒಬ್ಬರು ಮಾರ್ಚ್ 6ರಂದು ಅಮೆರಿಕ ಪ್ರವಾಸದಿಂದ ಹಿಂತಿರುಗಿದ್ದರು. 25 ವರ್ಷದ ಇನ್ನೊಬ್ಬ ಮಹಿಳೆ ಸ್ಪೇನ್ ಪ್ರವಾಸದಿಂದ ಹಿಂದಿರುಗಿದ್ದರು. ಇಬ್ಬರನ್ನೂ ಈಗಾಗಲೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ, ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕೊರೋನಾ ತಗುಲಿದ್ದ ಬೆಂಗಳೂರು ಟೆಕ್ಕಿಯ ಆರೋಗ್ಯದಲ್ಲಿ ಚೇತರಿಕೆ: ಭಾವನಾತ್ಮಕ ಸಂದೇಶದ ಮೂಲಕ ವೈದ್ಯರಿಗೆ ಧನ್ಯವಾದ ಹೇಳಿದ ಹೆಂಡತಿ

ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಿ, ಅವರೆಲ್ಲರನ್ನೂ ಕಡ್ಡಾಯವಾಗಿ ಅವರ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆ ಮಾಡುವ ಕಾರ್ಯ ನಿರಂತರ ಪ್ರಗತಿಯಲ್ಲಿದೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
First published: