ಬೆಂಗಳೂರು (ಮಾ. 19): ರಾಜ್ಯದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಹೀಗಾಗಿ, ಆ ಎಲ್ಲ ಸೋಂಕಿತ ಪ್ರಕರಣಗಳೂ ವಿದೇಶಗಳಿಂದ ಆಗಮಿಸಿರುವ ವ್ಯಕ್ತಿಗಳಲ್ಲೇ ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಆದರೆ, ವಿದೇಶಗಳಿಂದ ಬಂದವರನ್ನು ಮತ್ತು ಈಗಾಗಲೇ ಸೋಂಕು ಪತ್ತೆಯಾದವರ ಜೊತೆ ಒಡನಾಟ ಹೊಂದಿದ ಶಂಕಿತರನ್ನು 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೊರೋನಾ ಶಂಕಿತರ ಕೈ ಮೇಲೆ ಸ್ಟಾಂಪಿಂಗ್ ಮಾಡಲು ಮುಂದಾಗಿದೆ.
ಕೊರೋನಾ ಶಂಕಿತರನ್ನು ಆಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲು ಸಾಧ್ಯವಾಗದ ಕಾರಣ ಅವರನ್ನು ಮನೆಯಲ್ಲೇ ಇರಿಸಿ, 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಆದರೆ, ಈ 14 ದಿನಗಳ ಕಾಲ ಯಾರ ಬಳಿಯೂ ಮಾತನಾಡದೆ, ಹೊರಗೆ ಹೋಗದೆ ಮನೆಯಲ್ಲಿ ಏಕಾಂಗಿಯಾಗಿ ಇರಲು ಒಪ್ಪದ ಕೋರೋನಾ ಶಂಕಿತರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡದೆ ಪರಾರಿಯಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ಕೊರೋನಾ ಸೋಂಕಿನ ಶಂಕಿತರು ತಮ್ಮ ಮನೆಗಳಲ್ಲಿ 14 ದಿನಗಳವರಗೆ ಕಡ್ಡಾಯವಾಗಿ ಇರಬೇಕು ಎಂದು ತಿಳಿಸಿದರೂ ಜನರು ಅದನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಕೊರೋನಾ ವೈರಸ್ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಭೀತಿ ಮಾತ್ರವಲ್ಲದೆ, ಅದನ್ನು ನಿಯಂತ್ರಣಕ್ಕೆ ತರುವುದು ಹೇಗೆಂಬ ಚಿಂತೆ ಆರೋಗ್ಯ ಇಲಾಖೆಗೆ ಹೆಚ್ಚಾಗಿದೆ. ಅವರನ್ನು ಮನೆಯಲ್ಲೇ ಇರಿಸಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದರೂ ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಇದನ್ನೂ ಓದಿ: ಕೊರೋನಾ ಆತಂಕ; ಗಾಳಿಸುದ್ದಿಗಳಿಗೆ ಕಿವಿಗೊಡದಂತೆ ರಾಜ್ಯದ ಜನತೆಗೆ ಸಿಎಂ ಬಿಎಸ್ವೈ ವಿಡಿಯೋ ಸಂದೇಶ
ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಸ್ವನಿರ್ಬಂಧ ಹೇರಿಕೊಳ್ಳಲು ಸೂಚಿಸಲಾಗಿರುವ ಕೊರೋನಾ ಶಂಕಿತರು ಆರೋಗ್ಯ ಇಲಾಖೆಯ ಸೂಚನೆಯನ್ನು ಉಲ್ಲಂಘಿಸಿದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ, ಪೊಲೀಸ್ ಕಣ್ಗಾವಲು ಇರಿಸುವುದರ ಜೊತೆಗೆ ಹೊಸ ಮಾರ್ಗ ಅನುಸರಿಸಲು ಚಿಂತಿಸಲಾಗಿದೆ. ಅದಕ್ಕಾಗಿ ಮನೆಯಲ್ಲೇ ಸ್ವನಿರ್ಬಂಧಕ್ಕೆ ಆದೇಶಿಸಲಾಗಿರುವ ಕೊರೋನಾ ಶಂಕಿತರ ಕೈ ಮೇಲೆ ಕ್ವಾರಂಟೈನ್ ಸ್ಟಾಂಪ್ ಹಾಕುವ ಬಗ್ಗೆ ಆದೇಶ ಹೊರಡಿಸಲಾಗಿದೆ.
![]()
ಸರ್ಕಾರದ ಆದೇಶ
ಆ ಸ್ಟಾಂಪ್ನಲ್ಲಿ ಅವರು ಮನೆಯಲ್ಲಿ ಇರಬೇಕಾದ ಕೊನೆಯ ದಿನಾಂಕವನ್ನು ಕೂಡ ಆರೋಗ್ಯ ಇಲಾಖೆ ನಮೂದಿಸಲಿದೆ. ಕೊರೋನಾ ರೋಗಲಕ್ಷಣಗಳು ಕಂಡುಬಾರದ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಏರ್ಪೋರ್ಟ್ನಲ್ಲೇ ಸ್ಟಾಂಪಿಂಗ್ ಮಾಡಲಾಗುತ್ತದೆ. ಎಡಗೈ ಹಿಂಬದಿಯಲ್ಲಿ ಸ್ಟಾಂಪ್ ಮಾಡಲಾಗುವುದು. ಒಂದು ವೇಳೆ ಶಂಕಿತರು ಹೊರಗೆ ಓಡಾಡಿದರೆ ಸಾರ್ವಜನಿಕರಿಗೆ ತಿಳಿದು, ಆರೋಗ್ಯ ಹೆಲ್ಪ್ಲೈನ್ಗೆ ಮಾಹಿತಿ ನೀಡಲು ಅನುಕೂಲವಾಗಲೆಂದು ಈ ರೀತಿ ಮಾಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಭಾರತದಲ್ಲಿ 151ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ; ಜಾಗತಿಕವಾಗಿ 2 ಲಕ್ಷ ಜನರಿಗೆ ಕೋವಿಡ್-19
ಅಷ್ಟೇ ಅಲ್ಲದೆ, ಬಹುತೇಕ ಎಲ್ಲ ಕಡೆ ಕೊರೋನಾ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಿರುವುದರಿಂದ ಅಲ್ಲೂ ಸಿಕ್ಕಿಹಾಕಿಕೊಳ್ಳೋದು ಪಕ್ಕಾ ಎಂಬ ಕಾರಣಕ್ಕೆ ಈ ರೀತಿ ಮಾಡಲು ನಿರ್ಧರಿಸಲಾಗಿದೆ. ಶಂಕಿತರ ಬೇಜವಾಬ್ದಾರಿಯಿಂದ ಸೋಂಕು ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲಿ ಅಳವಡಿಸಲಾಗಿದೆ. ಇದರಿಂದ ಸೋಂಕಿತರಿಂದ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಣಕ್ಕೆ ತರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ