ರಾಜ್ಯಕ್ಕೆ ಮಾದರಿಯಾಯ್ತು ರಾಮನಗರದ ಈ ಗ್ರಾ.ಪಂ: ಕೂಲಿಕಾರ್ಮಿಕರು, ನಿರ್ಗತಿಕರಿಗೆ ದಿನಸಿ ಕಿಟ್ ವಿತರಣೆ

ಅಕ್ಕಿ, ಬೇಳೆ, ಗೋದಿ, ಎಣ್ಣೆ, ರವಾ, ಸಾಂಬಾರ್ ಪೌಡರ್ ಜೊತೆಗೆ ವಿವಿಧ ಬಗೆಯ ಕಾಳುಗಳನ್ನು ನೀಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.

ಗ್ರಾ. ಪಂ ಸದಸ್ಯರು ಕೂಲಿಕಾರ್ಮಿಕರರಿಗೆ ಸಾಮಗ್ರಿಗಳನ್ನು ವಿತರಿಸಿದರು

ಗ್ರಾ. ಪಂ ಸದಸ್ಯರು ಕೂಲಿಕಾರ್ಮಿಕರರಿಗೆ ಸಾಮಗ್ರಿಗಳನ್ನು ವಿತರಿಸಿದರು

 • Share this:
  ರಾಮನಗರ(ಮಾ. 30): ಕೊರೋನಾದಿಂದ ರಾಜ್ಯದ ಸಾವಿರಾರು ಜನ ಕೂಲಿ ಕಾರ್ಮಿಕರಿಗೆ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗಿದೆ. ಆದರೆ, ಇಲ್ಲೊಂದು ಗ್ರಾಮ ಪಂಚಾಯತಿ ಸರಿಸುಮಾರು 150 ಕ್ಕೂ ಹೆಚ್ಚು ಕೂಲಿಕಾರ್ಮಿಕರ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಿದೆ. ಈ ಮೂಲಕ ಇಡೀ ರಾಜ್ಯಕ್ಕೆ ಈ ಗ್ರಾಮ ಪಂಚಾಯಿತಿ ಮಾದರಿಯಾಗಿದೆ. 

  ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಓ ಸೇರಿ ಈ ಕಾರ್ಯಕ್ರಮವನ್ನ ರೂಪಿಸಿದ್ದಾರೆ. ಕೊರೋನಾದಿಂದ ರಾಜ್ಯದ ಸಾವಿರಾರು ಕೂಲಿಕಾರ್ಮಿಕರಿಗೆ ಊಟದ ಸಮಸ್ಯೆ ಎದುರಾಗಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊರಗಿನಿಂದ ಬಂದಿರುವ ಕೂಲಿ ಕೆಲಸಗಾರರು ಹಾಗೂ ನಿರ್ಗತಿಕರಿಗೆ 580 ರೂಪಾಯಿ ವೆಚ್ಚದ ದಿನಸಿ ಸಾಮಗ್ರಿಗಳನ್ನ ನೀಡಿ ಸಹಾಯಹಸ್ತ ಚಾಚಿದ್ದಾರೆ.

  ಅಕ್ಕಿ, ಬೇಳೆ, ಗೋದಿ, ಎಣ್ಣೆ, ರವೆ, ಸಾಂಬಾರ್ ಪುಡಿ ಜೊತೆಗೆ ವಿವಿಧ ಬಗೆಯ ಕಾಳುಗಳನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಸಹ ಇಂತಹ ಕಾರ್ಯಕ್ರಮವನ್ನ ರೂಪಿಸಿದರೆ ಕೂಲಿಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಸಹಾಯವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

  ಮತ್ತೊಂದೆಡೆ ರಾಮನಗರ ತಾಲೂಕಿನ ನಂಜಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿ ಗ್ರಾಮದ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ಮಾಡಿದ್ದಾರೆ. ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿದೆ. ಆದರೆ, ನಮ್ಮ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವಲ್ಲಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಕಿಡಿಕಾರಿದ್ದಾರೆ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

  ಇದನ್ನೂ ಓದಿ : ಕಿಮ್ಸ್ ನಲ್ಲಿ ಮಾಸ್ಕ್ ಕಳ್ಳತನ; ನರ್ಸ್​ಗೆ ಆಡಳಿತ ಮಂಡಳಿಯಿಂದ ನೋಟೀಸ್

  ಕೊರೋನಾ ಭೀತಿಯ ಸಮಯದಲ್ಲಿ ರಾಮನಗರ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪರವಾದ ಕೆಲಸಗಳನ್ನ ಮಾಡುತ್ತಿದ್ದಾರೆ. ಆದರೆ ಮತ್ತೆ ಕೆಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಕೊರೋನಾ ನೆಪದಲ್ಲಿ ಮನೆಯಿಂದ ಹೊರಗೆ ಬಾರದೇ ಬೇಕಾಬಿಟ್ಟಿ ಕೆಲಸಕಾರ್ಯ ಮಾಡುತ್ತಿದ್ದಾರೆ. ಆದರೆ, ಇನ್ನು ಮುಂದಾದರೂ ಸರ್ಕಾರಿ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡಬೇಕಿದೆ.

   (ವರದಿ ಎ ಟಿ ವೆಂಕಟೇಶ್)
  First published: