ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಈಗ ಇಡೀ ವಿಶ್ವವನ್ನೇ ವೇಗವಾಗಿ ವ್ಯಾಪಿಸುತ್ತಿದೆ. ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲೇ 15ಕ್ಕೂ ಹೆಚ್ಚು ಮಂದಿಗೆ ಸೋಂಕಿರುವುದು ಗೊತ್ತಾಗಿದೆ. ಬಹುತೇಕ ಎಲ್ಲಾ ಕಡೆ ಜನರು ಭಯಭೀತಗೊಂಡಿದ್ದಾರೆ. ಜನರಿಗೆ ವೈರಸ್ ಬಗ್ಗೆ ಜಾಗೃತಿಯ ಕೊರತೆ ಇರುವುದರ ಜೊತೆಗೆ ಕೆಲ ಕಪೋಲಕಲ್ಪಿತ ಅನುಮಾನಗಳು ಸಹಜವಾಗಿಯೇ ಮನೆ ಮಾಡಿವೆ.
ಏನಿದು ಕೊರೊನಾ ವೈರಸ್?
ಕೋವಿಡ್-19 ಎಂದು ಹೆಸರಿಸಲಾಗಿರುವ ಕೊರೊನಾ ವೈರಸ್ ಒಂದು ಸೂಕ್ಷ್ಮ ಜೀವಿ. ಇದು ಮಾನವನ ಕೂದಲ ಗಾತ್ರಕ್ಕಿಂತ 900 ಪಟ್ಟು ಸಣ್ಣದಿರುತ್ತದೆ. ಈ ವೈರಸ್ನ ಪೊರೆಯಿಂದ (Membrane) ಕಡ್ಡಿಗಳಂತೆ ಹೊರಚಾಚಿರುತ್ತದೆ. ಇದು ನೋಡುವುದಕ್ಕೆ ಸೂರ್ಯನ ಕೊರೊನಾಗೆ (ಮೇಲ್ಮೈ) ಹೋಲುತ್ತದೆ. ಹೀಗಾಗಿ, ಆರಂಭದಲ್ಲಿ ಈ ವೈರಸ್ಗೆ ಕೊರೊನಾ ಎಂದು ಹೆಸರಿಡಲಾಗಿದೆ. ಇದು ಸಾರ್ಸ್ (SARS) ವೈರಸ್ನ ಕುಟುಂಬಕ್ಕೆ ಸೇರಿದ ಒಂದು ಸೂಕ್ಷ್ಮಜೀವಿ.
ಕೊರೊನಾ ವೈರಸ್ ಎಲ್ಲಾ ವೈರಸ್ನಂತೆಯೇ ಸೂಕ್ಷ್ಮಜೀವಿ. ಬೇರೆ ವೈರಸ್ಗಳಂತೆ ಇದೂ ಕೂಡ ಪರಾವಲಂಬಿಯಾಗಿರುತ್ತದೆ. ಒಂದು ಕೋಶಕ್ಕೆ ನುಸುಳಿ ಅದನ್ನು ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ಬಳಿಕ ಅದು ಬೇರೆ ಕಡೆ ಪಸರಿಸುತ್ತದೆ. ಒಂದು ವೈರಸ್ ತನ್ನ ಮೂಲಸ್ವರೂಪದಲ್ಲೇ ಎಲ್ಲಿಯೂ ಹರಡಲು ಸಾಧ್ಯವಿಲ್ಲ. ಅದಕ್ಕೆ ಒಂದು ಧ್ರವದ ಹನಿ ಬೇಕು. ಎಂಜಲು, ಸಿಂಬಳ ಇತ್ಯಾದಿ ದ್ರವದ ಹನಿಯಲ್ಲಿ ಬೆರೆತು ಅದು ಪಸರುತ್ತದೆ.
ಇದನ್ನೂ ಓದಿ: ಕೊರೋನಾ ಪ್ರಹಾರಕ್ಕೆ 3 ಸಾವಿರ ಬಲಿ; ಇಲ್ಲಿದೆ ಜಗತ್ತಿನ ಮಾರಕ ವೈರಸ್ಗಳ ಟಾಪ್5 ಪಟ್ಟಿ!
ಯಾಕಿಷ್ಟು ಭಯ?
ಕೊರೋನಾ ವೈರಸ್ ಈಗ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು. ಮಾಮೂಲಿಯ ಫ್ಲೂಗೆ ಕೊರೊನಾ ವೈರಸ್ ಅನ್ನು ಹೋಲಿಸಬಹುದು. ಕೆಮ್ಮು, ಸೀನು ಇತ್ಯಾದಿಯಿಂದ ಇದು ಹರಡುತ್ತದೆ. ಇದಕ್ಕೆ ಈಗಷ್ಟೇ ಕಾಣಿಸಿಕೊಂಡಿರುವುದರಿಂದ ಮದ್ದು ಇನ್ನೂ ಕಂಡುಹಿಡಿದಿಲ್ಲ. ಅದಕ್ಕೆ ವೈದ್ಯಕೀಯ ಜಗತ್ತು ಬಹಳ ಎಚ್ಚರಿಕೆಯಲ್ಲಿದೆ. ನಾವಿರುವ ಜೀವನಶೈಲಿ, ವಾತಾವರಣದಿಂದಾಗಿ ಈ ಸೋಂಕು ಬಹಳ ಬೇಗ ವ್ಯಾಪಿಸುತ್ತದೆ. ಆದರೆ, ಮಾಹಿತಿ ಕೊರತೆಯಿಂದಾಗಿ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಕಪೋಲಕಲ್ಪಿತ ಭಯಗಳೂ ಸೃಷ್ಟಿಯಾಗಿವೆ. ಹಾಗೆಯೇ ಒಂದಷ್ಟು ಭಂಡ ದೈರ್ಯಗಳೂ ಇವೆ.
ರೋಗ ಲಕ್ಷಣ ಮತ್ತು ಹರಡುವಿಕೆ:
* ಫ್ಲೂ ಅಥವಾ ಶೀತ ಬಂದಾಗ ಕಾಣಿಸುವ ಲಕ್ಷಣಗಳೇ ಕೊರೋನಾ ವೈರಸ್ ಸೋಂಕಿನಲ್ಲೂ ಇರುತ್ತವೆ. ಸೋಂಕಿತ ವ್ಯಕ್ತಿಯಲ್ಲಿ ಜ್ವರ, ವಿಪರೀತ ಕೆಮ್ಮು, ಉಸಿರಾಟ ತೊಂದರೆ ಇರುತ್ತದೆ. ಕೆಲವರಿಗೆ ಹೊಟ್ಟೆ ನೋವು, ಬೇಧಿ ಇರುತ್ತದೆ.
* ಸೋಂಕು ತಗುಲಿದ ಕೂಡಲೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಮೂರ್ನಾಲ್ಕು ದಿನಗಳ ನಂತರ ತೊಂದರೆಗಳು ಗೋಚರಿತವಾಗುತ್ತವೆ. ಕೆಲವರಿಗೆ ಎರಡು ವಾರ ಬಳಿಕ ಸಿಂಪ್ಟಮ್ಸ್ ಬರಬಹುದು. ಹೀಗಾಗಿ, ರೋಗಲಕ್ಷಣ ತೋರುವ ಮುಂಚೆಯೇ ಆ ವ್ಯಕ್ತಿ ವೈರಸ್ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯೂ ಇರುತ್ತದೆ. ಅವರಿಂದ ಬೇರೆ ವ್ಯಕ್ತಿಗಳಿಗೂ ಹರಡಿರುವ ಸಾಧ್ಯತೆಯೂ ಇರುತ್ತದೆ.
* ಸೋಂಕು ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ದ್ರವದಲ್ಲಿ ಈ ವೈರಾಣುಗಳಿರುತ್ತವೆ. ಆ ದ್ರವ ಬೇರೆ ವ್ಯಕ್ತಿಯ ಬಾಯಿ, ಮೂಗು ಅಥವಾ ಕಣ್ಣಿನ ಮೂಲಕ ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ. ಹಾಗೆಯೇ, ಮುತ್ತು ಕೊಡುವುದರಿಂದಲೂ ಇದು ಹರಡುತ್ತದೆ. ಸೋಂಕಿತ ವ್ಯಕ್ತಿಯ ಮೂಲಕ ಕೊರೋನಾ ವೈರಾಣು ಗಾಳಿಯಲ್ಲಿಯೂ ಇರುವುದರಿಂದ ಉಸಿರಾಟದಿಂದಲೂ ಇದು ಹರಡುತ್ತದೆ.
* ಸೋಂಕಿತ ವ್ಯಕ್ತಿಯ ಕೈ ಅಥವಾ ಮೈ ಮುಟ್ಟಿದಾಕ್ಷಣ ರೋಗ ಅಂಟಿಕೊಳ್ಳುವುದಿಲ್ಲ. ಆ ವ್ಯಕ್ತಿಯ ಕೈಯಿಂದ ನಮ್ಮ ಕೈಗೆ ವೈರಾಣು ಬರಬಹುದು. ಆದರೆ, ನಾವು ಆ ಕೈಯಿಂದ ನಮ್ಮ ಬಾಯಿ, ಕಣ್ಣು ಅಥವಾ ಮೂಗಿನ ಒಳಗೆ ತಾಗಿಸಿದರೆ ಮಾತ್ರ ನಮ್ಮ ದೇಹಕ್ಕೆ ವೈರಾಣು ಪ್ರವೇಶವಾಗುತ್ತದೆ. ಹೀಗಾಗಿ, ನೀವು ಕಣ್ಣು, ಬಾಯಿ, ಮೂಗು ಮುಟ್ಟುವ ಮುನ್ನ ಕೈಯನ್ನು ಸ್ಯಾನಿಟೈಸರ್ನಿಂದ ತೊಳೆದುಕೊಂಡರೆ ಯಾವುದೇ ಭೀತಿ ಇರುವುದಿಲ್ಲ.
* ಇನ್ನು, ಆಹಾರದ ಮೂಲಕ ವೈರಸ್ ಹರಡುವ ಸಾಧ್ಯತೆ ಕಡಿಮೆ. ನೀವು ಆಹಾರವನ್ನು ಕೆಲ ಹೊತ್ತು ತೆರೆದಿಟ್ಟಿದ್ದರೆ ಮೊದಲು ಅದನ್ನು ಮತ್ತೊಮ್ಮೆ ಬಿಸಿ ಮಾಡಿ ನಂತರ ಸೇವಿಸಬಹುದು. ಬಿಸಿ ಮಾಡಿದಾಗ ವೈರಸ್ ಸತ್ತುಹೋಗುತ್ತದೆ.
* ಏಡ್ಸ್ ರೋಗದಲ್ಲಿ ಆಗುವಂತೆ ಸಂಭೋಗ ಕ್ರಿಯೆಯಿಂದ ಕೊರೋನಾ ವೈರಸ್ ಹರಡುತ್ತಾ ಎಂಬುದು ಹಲವರ ಅನುಮಾನ. ಆದರೆ, ಮುತ್ತು ಕೊಡದೇ ನೇರ ಸಂಭೋಗ ಮಾಡಿದರೆ ಏನೂ ತೊಂದರೆ ಇರುವುದಿಲ್ಲ. ಇದು ಲೈಂಗಿಕವಾಗಿ ಹರಡುವ ರೋಗವಲ್ಲ. ಎಂಜಲು ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕಷ್ಟೇ.
* ಸೋಂಕಿತ ವ್ಯಕ್ತಿಯಿಂದ ಕೆಮ್ಮು, ಸೀನು, ಉಗುಳುವ ಮೂಲಕ ನೆಲ ಅಥವಾ ಯಾವುದಾದರೂ ಜಾಗಕ್ಕೆ ಬೀಳುವ ವೈರಾಣು ಕೆಲ ಗಂಟೆಗಳಷ್ಟೇ ಜೀವಂತವಾಗಿರುತ್ತದೆ. ಆ ನಂತರ ಅದು ಸತ್ತು ಹೋಗುತ್ತದೆ. ಅಷ್ಟರೊಳಗೆ ಅದು ಬೇರೆ ವ್ಯಕ್ತಿಯ ದೇಹ ಪ್ರವೇಶ ಮಾಡಿದರೆ ಬದುಕುಳಿಯುತ್ತದೆ.
* ಯಾವುದೇ ವ್ಯಕ್ತಿಗಾದರೂ ಇದು ಸೋಂಕಬಹುದು. ಆದರೆ, ವಯಸ್ಸಾದವರು, ದುರ್ಬಲ ರೋಗ ನಿರೋಧಕ ಶಕ್ತಿ ಇರುವವರು ಬೇಗ ಸೋಂಕು ಹೊಂದುತ್ತಾರೆ. ಆಸ್ತಮಾ, ಶುಗರ್, ಹೃದಯ ರೋಗ ಇತ್ಯಾದಿ ತೊಂದರೆಯಲ್ಲಿರುವವರಿಗೂ ಬೇಗ ಸೋಂಕು ತಗುಲಬಹುದು.
* ಬೆಳ್ಳುಳ್ಳಿ ತಿನ್ನುವುದರಿಂದ, ಗೋಮೂತ್ರ ಸೇವಿಸುವುದರಿಂದ ಕೊರೊನಾ ವೈರಸ್ ಸೋಂಕು ನಿಯಂತ್ರಿಸಬಹುದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
ಇದನ್ನೂ ಓದಿ: ಕೊರೋನಾ ಭೀತಿ; ಚೀನಾ, ಮಲೇಷಿಯಾ, ಇರಾನ್, ಜಪಾನ್, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಪ್ರವೇಶವಿಲ್ಲ
ಮುನ್ನೆಚ್ಚರಿಕೆ ಕ್ರಮಗಳು:
* ಮುಖಕ್ಕೆ ಮಾಸ್ಕ್ ಧರಿಸಬೇಕು. ಮಾಮೂಲಿಯ ಮಾಸ್ಕ್ ಬದಲು ಸರ್ಜಿಕಲ್ ಮಾಸ್ಕ್ ಬಳಕೆ ಮಾಡುವುದು ಇದ್ದುದರಲ್ಲಿ ಉತ್ತಮ. ಹೊರಗಿನಿಂದ ನೇರವಾಗಿ ಗಾಳಿ ಒಳ ಪ್ರವೇಶ ಮಾಡುವುದನ್ನು ತಡೆದು ಫಿಲ್ಟರ್ ಮಾಡುವಂಥ ಮಾಸ್ಕ್ ಅಗತ್ಯವಿದೆ.
* ನಿಮ್ಮ ಕಣ್ಣು, ಬಾಯಿ, ಮೂಗು ಮುಟ್ಟಿಕೊಳ್ಳುವ ಮುನ್ನ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಿ.
* ಯಾರಾದರೂ ಕೆಮ್ಮಿದಾಗ, ಸೀನಿದಾಗ ಸ್ವಲ್ಪ ದೂರ ಹೋಗಿರಿ.
* ನಿಮ್ಮ ಕುಟುಂಬದವರಲ್ಲಿ ಯಾರಿಗಾದರೂ ಒಬ್ಬರಿಗೆ ರೋಗಲಕ್ಷಣಗಳು ಕಾಣಿಸಿದರೆ, ಎಲ್ಲರೂ ತತ್ಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.
* ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ಇರುವ ಕಡೆ ಹೋಗುವುದನ್ನು ಆದಷ್ಟೂ ತಪ್ಪಿಸಿ. ರೋಗಾಣು ಹೆಚ್ಚೆಚ್ಚು ಇದ್ದ ಕಡೆ ನೀವು ಏನೇ ಮಾಸ್ಕ್ ಧರಿಸಿದರೂ ಸೋಂಕು ತಗುಲುವ ಸಾಧ್ಯತೆ ಸ್ವಲ್ಪವಾದರೂ ಇರುತ್ತದೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ