ಮಾಸ್ಕ್, ಗ್ಲೋವ್ಸ್​ನಿಂದ ಸೋಂಕು ಹೆಚ್ಚಾದೀತು ಜೋಕೆ; ಕೈ ತೊಳೆಯುವುದೇ ಪರಿಣಾಮಕಾರಿ ಕ್ರಮ ಎನ್ನುತ್ತಾರೆ ತಜ್ಞರು

ಒಬ್ಬ ವ್ಯಕ್ತಿ ಒಂದು ಗಂಟೆಗೆ ಸರಾಸರಿ 20 ಬಾರಿ ತನ್ನ ಮುಖ ಮುಟ್ಟಿಕೊಳ್ಳುತ್ತಾನೆ. ನೀವು ಮುಖ ಮುಟ್ಟಿಕೊಳ್ಳುವ ಸಹಜ ಚಟ ನಿಲ್ಲಿಸದೇ ಇದ್ದಲ್ಲಿ ಏನೇ ಮಾಸ್ಕ್ ಹಾಕಿಕೊಂಡರೂ ಕೊರೋನಾ ವೈರಸ್ ಸೋಂಕು ತಡೆಯಲು ಅಪ್ರಯೋಜಕವಾಗುತ್ತದೆ.

news18
Updated:March 26, 2020, 4:32 PM IST
ಮಾಸ್ಕ್, ಗ್ಲೋವ್ಸ್​ನಿಂದ ಸೋಂಕು ಹೆಚ್ಚಾದೀತು ಜೋಕೆ; ಕೈ ತೊಳೆಯುವುದೇ ಪರಿಣಾಮಕಾರಿ ಕ್ರಮ ಎನ್ನುತ್ತಾರೆ ತಜ್ಞರು
ಪ್ರಾತಿನಿಧಿಕ ಚಿತ್ರ
  • News18
  • Last Updated: March 26, 2020, 4:32 PM IST
  • Share this:
ಕೊರೋನಾ ವೈರಸ್ ಸೋಂಕಿನ ಭೀತಿ ಎಲ್ಲರಿಗೂ ಆವರಿಸಿದೆ. ಜನರು ಮಾಸ್ಕ್ ಧರಿಸಲು ಮುಗಿಬೀಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್, ಕೈಗೆ ಗ್ಲೋವ್ಸ್ ಹಾಕಿಕೊಂಡು ನಿರಾತಂಕವಾಗಿ ತಿರುಗಾಡುತ್ತಿರುವವ ಸಂಖ್ಯೆ ದೊಡ್ಡದೇ ಇದೆ. ಆದರೆ, ಈ ಮಾಸ್ಕ್ ಮತ್ತು ಗ್ಲೌಸ್​ನಿಂದ ಕೊರೋನಾ ಸೋಂಕು ತಡೆಯಲು ಸಾಧ್ಯವಿಲ್ಲ. ಇವುಗಳ ಅಗತ್ಯವೂ ಇಲ್ಲ ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ ನೋಡಿದರೆ ಮಾಸ್ಕ್ ಮತ್ತು ಗ್ಲೌಸ್​ನಿಂದ ಕೊರೋನಾ ಸೋಂಕು ಇನ್ನಷ್ಟು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸುತ್ತಾರೆ. ಆಗಾಗ ಚೆನ್ನಾಗಿ ಕೈ ತೊಳೆದು ದೇಹವನ್ನು ಪರಿಶುಭ್ರವಾಗಿ ಇಟ್ಟುಕೊಳ್ಳಿ ಎಂದು ಸಲಹೆ ಕೊಡುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದೇ ಸಲಹೆ ನೀಡುತ್ತದೆ. ಕೈ ತೊಳೆದುಕೊಳ್ಳಿರಿ. ಮುಖ ಮುಟ್ಟಿಕೊಳ್ಳದಿರಿ. ಜನರಿಂದ ಅಂತರ ಕಾಯ್ದುಕೊಳ್ಳಿ. ಇದು ಡಬ್ಲ್ಯೂಎಚ್​ಒ ಮೊದಲಿಂದಲೂ ಹೇಳಿಕೊಂಡು ಬಂದಿರುವ ಮಂತ್ರವಾಗಿದೆ. ಈಗಲೂ ಇದೇ ಮಂತ್ರ ಬೋಧಿಸುತ್ತಿದೆ.

ಇದನ್ನೂ ಓದಿ: ಅಚಲತೆ - 21 ದಿನಗಳ ದಿಗ್ಬಂಧನದಲ್ಲಿ ಕಲಿಯಬಹುದಾದ 21 ಸಂಗತಿ: ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಿವಿಮಾತು

ನಿಮಗೆ ಸೋಂಕು ತಗುಲಿದ್ದರೆ, ಅಥವಾ ನಿಮ್ಮ ಜೊತೆಯಲ್ಲಿರುವವರಿಗೆ ಸೋಂಕು ತಗುಲಿದ್ದರೆ ಮಾತ್ರ ನೀವು ಮುಖಕ್ಕೆ ಮಾಸ್ಕ್ ಧರಿಸಬೇಕು. ನಿಮಗೆ ಸೋಂಕು ತಗುಲಿದ್ದರೆ ಯಾರೊಂದಿಗೂ ನೇರ ಸಂಪರ್ಕವಾಗದಂತೆ ಎಚ್ಚರ ವಹಿಸಬೇಕು. ಸಂಪೂರ್ಣವಾಗಿ ಐಸೋಲೇಶನ್​ನಲ್ಲಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಅಗತ್ಯ ಇರುತ್ತದೆ. ಒಂದು ಅಂದಾಜು ಪ್ರಕಾರ ಇವರಿಗೆ ತಿಂಗಳಿಗೆ ಒಟ್ಟು 9 ಕೋಟಿಗಿಂತ ಹೆಚ್ಚು ಮಾಸ್ಕ್​ಗಳು ಬೇಕಾಗುತ್ತದೆ. ಇಡೀ ವಿಶ್ವದಲ್ಲಿ ಮಾಸ್ಕ್​ಗಳಿಗೆ ಕೊರತೆ ಇದೆ. ಈ ಸಂದರ್ಭದಲ್ಲಿ ಜನಸಾಮಾನ್ಯರೆಲ್ಲರೂ ಮಾಸ್ಕ್ ಖರೀದಿಗೆ ಮುಗಿಬಿದ್ದರೆ ಅಗತ್ಯವಿದ್ದವರಿಗೆ ಮಾಸ್ಕ್ ಇಲ್ಲದಂತಾಗುತ್ತದೆ.

ಅಲ್ಲದೇ, ಮಾಸ್ಕ್ ತೊಟ್ಟಾಗ ಜನರು ತಮಗೆ ಇದು ಕೊರೋನಾದಿಂದ ರಕ್ಷಣೆ ದೊರೆಯುವ ರಕ್ಷಣಾ ಕವಚ ಎಂದು ತಪ್ಪಾಗಿ ಭಾವಿಸಬಹುದು. ಇದು ಬಹಳ ಅಪಾಯಕಾರಿ. ಮಾಸ್ಕ್ ತೊಟ್ಟು ಹೊರಗೆ ಹೋದಾಗ ವೈರಸ್ ಈ ಮಾಸ್ಕ್ ಮೇಲೆ ಕೂರಬಹುದು. ಮಾಸ್ಕ್ ಸರಿಪಡಿಸಲು ನಾವು ಅದನ್ನು ಮುಟ್ಟುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಇದರಿಂದ ನಿಮ್ಮ ಕೈಗೆ ಆ ವೈರಸ್ ಅಂಟಬಹುದು. ನೀವು ಕೈನಿಂದ ಬಾಯಿಯನ್ನೋ ಅಥವಾ ಮೂಗನ್ನೋ ಮುಟ್ಟಿಕೊಂಡರೆ ವೈರಸ್ ನಿಮ್ಮ ದೇಹ ಪ್ರವೇಶಿಸಬಹುದು. ಎಲ್ಲಾ ಮಾಸ್ಕ್​ಗಳೂ ಪರಿಣಾಮಕಾರಿಯಾಗಿರುವುದಿಲ್ಲ. ಸರಿಯಾದ ಮಾಸ್ಕನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಳಗೆ ಗಾಳಿ ನುಸುಳದಷ್ಟು ಬಿಗಿಯಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಈ ನಿಯಮ ಪಾಲಿಸುವ ಎಷ್ಟು ಮಂದಿ ಸಿಗುತ್ತಾರೆ? ತತ್​ಪರಿಣಾಮವಾಗಿ ಸಡಿಲ ಮಾಸ್ಕ್ ಮೂಲಕ ವೈರಾಣು ಸುಲಭವಾಗಿ ಒಳಪ್ರವೇಶಿಸಬಹುದು. ಹಾಗಾಗಿ, ಮಾಸ್ಕ್ ವಿಫಲವಾಗುವ ಪ್ರಮಾಣ ಹೆಚ್ಚೇ ಇರುತ್ತದೆ.

ಇದನ್ನೂ ಓದಿ: Covid-19 ನಿವಾರಣೆಗೆ ಲಾಕ್‌ಡೌನ್ ಮೂಲಕ ಎರಡನೇ ಅವಕಾಶವನ್ನು ರಚಿಸಿದ್ದೀರಿ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಒಂದು ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿ ಒಂದು ಗಂಟೆಗೆ ಸರಾಸರಿ 20 ಬಾರಿ ತನ್ನ ಮುಖ ಮುಟ್ಟಿಕೊಳ್ಳುತ್ತಾನೆ. ನೀವು ಮುಖ ಮುಟ್ಟಿಕೊಳ್ಳುವ ಸಹಜ ಚಟ ನಿಲ್ಲಿಸದೇ ಇದ್ದಲ್ಲಿ ಏನೇ ಮಾಸ್ಕ್ ಹಾಕಿಕೊಂಡರೂ ಕೊರೋನಾ ವೈರಸ್ ಸೋಂಕು ತಡೆಯಲು ಅಪ್ರಯೋಜಕವಾಗುತ್ತದೆ.

ನೀವು ಆಗಾಗ ಕೈ ಸ್ವಚ್ಛಗೊಳಿಸಬೇಕು. ಹೊರಗೆ ಹೋಗಿ ಬರುವಾಗ ಕೈಕಾಲು ಶುಭ್ರಗೊಳಿಸಿಕೊಳ್ಳಬೇಕು. ಹೊರಗೆ ಹೋಗಲು ಉಪಯೋಗಿಸಿದ ಬಟ್ಟೆಯನ್ನು ತಪ್ಪದೇ ಒಗೆಯಬೇಕು. ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ಮನೆಯನ್ನು ಡಿಸ್​ಇನ್ಫೆಕ್ಟೆಂಟ್​ನಿಂದ ಆಗಾಗ ಶುಭ್ರಗೊಳಿಸಬೇಕು. ಇವಿಷ್ಟೂ ಪಾಲಿಸಿದರೆ ಕೊರೋನಾ ವೈರಸ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಬಹುದು ಎನ್ನುತ್ತಾರೆ ಕೆಲ ತಜ್ಞರು.

First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ