ಕೊರೋನಾ ಭೀತಿ: ಚಾಮರಾಜನಗರದ ಗ್ರಾಮಗಳಲ್ಲಿ ಬೇಲಿ, ತಡೆಗೋಡೆ ನಿರ್ಮಾಣ; ಚೆಕ್ ಪೋಸ್ಟ್ ಸ್ಥಾಪನೆ

ಚಾಮರಾಜನಗರ ತಾಲೂಕು ಹರದನಹಳ್ಳಿಯಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬೇಲಿ ಹಾಕಿದ್ದಾರೆ

news18-kannada
Updated:March 26, 2020, 10:35 PM IST
ಕೊರೋನಾ ಭೀತಿ: ಚಾಮರಾಜನಗರದ ಗ್ರಾಮಗಳಲ್ಲಿ ಬೇಲಿ, ತಡೆಗೋಡೆ ನಿರ್ಮಾಣ; ಚೆಕ್ ಪೋಸ್ಟ್ ಸ್ಥಾಪನೆ
ಗ್ರಾಮವೊಂದರಲ್ಲಿ ಬೇಲಿ ಹಾಕಿರುವುದು
  • Share this:
ಚಾಮರಾಜನಗರ(ಮಾ. 26): ಮಾರಕ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ  ನಗರ ಪ್ರದೇಶದ ಜನರಿಗಿಂತ ಗ್ರಾಮೀಣ ಜನರೇ ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ. ಗ್ರಾಮಕ್ಕೆ ಬೇಲಿ, ಚೆಕ್ ಪೋಸ್ಟ್ ಸ್ಥಾಪನೆ, ತಡೆಗೋಡೆ ನಿರ್ಮಾಣ, ಗುಂಪುಗೂಡಿದರೆ ದಂಡ, ಮನೆಯಿಂದ ಹೊರಬಾರದಂತೆ ಧ್ವನಿವರ್ಧಕಗಳ ಮೂಲಕ ಅರಿವು, ಇಂತಹ ಮುನ್ನೆಚರಿಕಾ ಕ್ರಮಗಳು ಗಡಿ ಜಿಲ್ಲೆ ಚಾಮರಾಜಗನಗರದಲ್ಲಿ ಕಂಡು ಬರುತ್ತಿವೆ.

ಕೊರೋನಾ ಹರಡುವ ಭಯದಿಂದಾಗಿ ಚಾಮರಾಜನಗರ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಗ್ರಾಮಸ್ಥರೇ ನಾನಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಚಾಮರಾಜನಗರ ತಾಲೂಕು ಹರದನಹಳ್ಳಿಯಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬೇಲಿ ಹಾಕಿದ್ದಾರೆ. ಅಪರಿಚಿತರು ಗ್ರಾಮಕ್ಕೆ ಪ್ರವೇಶ ಮಾಡಬಾರದು, ಅವರಿಂದ ಕೊರೋನಾ ಹರಡಬಾರದು ಎಂಬುದು ಗ್ರಾಮಸ್ಥರ ಉದ್ದೇಶವಾಗಿದೆ. ಜೊತೆಗೆ ಗ್ರಾಮದಲ್ಲಿ ಗುಂಪುಗೂಡಿದರೆ ಅಂತಹವರಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲು ಮುಂದಾಗಿದ್ದಾರೆ.

ಇನ್ನೊಂದೆಡೆ ಯಳಂದೂರು ತಾಲೂಕಿನ ವೈ.ಕೆ. ಮೋಳೆ ಗ್ರಾಮಸ್ಥರು ಹೊರಗಿನವರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ಥಳೀಯರಿಗೆ ಮಾತ್ರ ಪ್ರವೇಶ, ಹೊರಗಿನವರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಗಳನ್ನು ಹಾಕಿ ಚೆಕ್ ಪೋಸ್ಠ್ ಗಳನ್ನು ಸ್ಥಾಪನೆ ಮಾಡಿದ್ದಾರೆ. ಇದನ್ನು ಉಲ್ಲಂಘಿಸಿದವರಿಗೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಇನ್ನು ಇದೇ ತಾಲೂಕಿನ ಗಣಿಗನೂರು ಗ್ರಾಮದಲ್ಲಿ ಮನೆಯಿಂದ ಯಾರು ಹೊರಬಾರದಂತೆ ಹಾಗೂ ಗುಂಪು ಸೇರದಂತೆ ವಿದ್ಯಾವಂತ ಯುವಕರು ಧ್ವನಿವರ್ದಕದ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಮತ್ತೊಂದೆಡೆ ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದಲ್ಲಿ ಮನೆಯಿಂದ ಹೊರಬಂದು ಗುಂಪುಗೂಡಿದವರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಬೀದಿಗಳಲ್ಲಿ ಧ್ವನಿವರ್ಧಕ ಮೂಲಕ ಸಾರಿಸಿದ್ದಾರೆ. ಹೆಂಗಸರಾಗಲಿ, ಗಂಡಸರಾಗಲಿ ಮನೆಯಿಂದ ಹೊರಬಂದು ಗುಂಪು ಸೇರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ

ಕಾಗಲವಾಡಿ ಮೋಳೆ ಗ್ರಾಮಕ್ಕೆ ಹೊರ ಊರಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಗ್ರಾಮದ ಪ್ರವೇಶದ್ವಾರದಲ್ಲೇ ಮರದ ಪೋಲ್​ಗಳಿಂದ ತಡೆಗೋಡೆ ನಿರ್ಮಿಸಿರುವ ಗ್ರಾಮಸ್ಥರು ಗ್ರಾಮದಿಂದಲೂ ಯಾರೂ ಹೊರಹೋಗುವಂತಿಲ್ಲ ಎಂಬ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಆಲೂರು ಗ್ರಾಮದಲ್ಲೂ ಗ್ರಾಮಸ್ಥರು ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆ. ಎಲ್ಲ ಅಂಗಡಿ ಮುಂಗಟ್ಟುಗಳು, ಹೊಟೇಲ್​ಗಳನ್ನು ಮುಚ್ಚುವಂತೆ ಫರ್ಮಾನು ಹೊರಡಿಸಿದ್ದಾರೆ. ಯಾರು ಹೊರ ಹೋಗಬಾರದು ಹಾಗೂ ಹೊರಗಿನವರಿಗೆ ಪ್ರವೇಶ ನೀಡಬಾರದು ಎಂದು ತೀರ್ಮಾನ ಕೈಗೊಂಡಿದ್ದಾರೆ.

ಇದನ್ನೂ ಓದಿ : ಕೊರೋನಾ ಭೀತಿ: ನಾಳೆ ಸಚಿವ ಸಂಪುಟ ಸಭೆ ಕರೆದ ಸಿಎಂ ಬಿಎಸ್​ವೈಒಟ್ಟಾರೆ ಕೊರೋನಾ ಹರಡದಂತೆ ತಡೆಗಟ್ಟಲು ತಾವೆಲ್ಲಾ ಮನೆಯಲ್ಲಿರುವುದೇ ಮದ್ದು ಎಂಬುದನ್ನು ಗ್ರಾಮೀಣ ಭಾಗದ ಜನತೆ ಅರಿತಿದ್ದಾರೆ. ಆ ಮೂಲಕ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದಾರೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading