HOME » NEWS » Coronavirus-latest-news » CORONAVIRUS DEATH TOLL IN INDIA RISES TO 17 AS FOUR MORE DIE IN KASHMIR GUJARAT RAJASTHAN MAHARASHTRA RH

ಕೊರೋನಾ ವೈರಸ್​ಗೆ ಭಾರತದಲ್ಲಿ ಮತ್ತೆ ಮೂವರು ಬಲಿ; 16ಕ್ಕೆ ಏರಿದ ಮೃತರ ಸಂಖ್ಯೆ

ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಗುಜರಾತ್ ಮೂರು, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಕರ್ನಾಟಕ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.

HR Ramesh | news18-kannada
Updated:March 26, 2020, 3:15 PM IST
ಕೊರೋನಾ ವೈರಸ್​ಗೆ ಭಾರತದಲ್ಲಿ ಮತ್ತೆ ಮೂವರು ಬಲಿ; 16ಕ್ಕೆ ಏರಿದ ಮೃತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಹಾಗೂ ಗುಜರಾತ್​ನಲ್ಲಿ ಮೂವರು ಕೋವಿಡ್ -19 ರೋಗಿಗಳು ಗುರುವಾರ ಮೃತಪಟ್ಟಿದ್ದಾರೆ. ಈ ಮೂಲಕ ಮಾರಕ ಕೊರೋನಾ ಸೋಂಕಿಗೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೇರಿದೆ. ಇನ್ನು ದೇಶದಲ್ಲಿ 650 ರ ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯವು ಸಾವಿನ ಸಂಖ್ಯೆಯನ್ನು ಬೆಳಿಗ್ಗೆ 10: 15 ರ ಸಮಯದಲ್ಲಿ 13 ಎಂದು ತಿಳಿಸಿತ್ತು. ಆದರೆ ಮೂರು ರಾಜ್ಯಗಳಲ್ಲಿ ಮೂರು ಮಂದಿ ಮೃತಪಟ್ಟಿರುವುದನ್ನು ಆಯಾ ರಾಜ್ಯಗಳ ಅಧಿಕಾರಿಗಳು ದೃಢಪಡಿಸಿದರು. ಇದರೊಂದಿಗೆ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಗುಜರಾತ್​ನಲ್ಲಿ ಭಾವನಗರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ 70 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾವನಗರದ ಸರ್ಕಾರಿ ಆಸ್ಪತ್ರೆಯಲ್ಲಿ 70 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 43 ಕ್ಕೆ ಏರಿದ್ದು, ಈವರೆಗೆ ಮೂವರು ಬಲಿಯಾಗಿದ್ದಾರೆ. ಇದಕ್ಕೂ ಮೊದಲು ಅಹಮದಾಬಾದ್ ಮತ್ತು ಸೂರತ್​ನಲ್ಲಿ ತಲಾ ಒಬ್ಬ ರೋಗಿ ವೈರಲ್ ಸೋಂಕಿಗೆ ಬಲಿಯಾಗಿದ್ದರು ಎಂದು ರವಿ ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿನಿಂದ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವೈರಸ್​ಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಇನ್ನೂ ನಾಲ್ಕು ಜನರರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ 11 ಪ್ರಕರಣಗಳು ವರದಿಯಾಗಿವೆ. ಇವರೆಲ್ಲರೂ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಿಧನರಾದ ರೋಗಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ 55ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ; ಇಂದು 4 ಹೊಸ ಪ್ರಕರಣಗಳು ಪತ್ತೆ

65 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ 48 ಜನರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ ಮತ್ತು ಆತನಿಂದ ಸೋಂಕಿಗೆ ಒಳಗಾದವರನ್ನು ಪತ್ತೆಹಚ್ಚಲು ಆ ವ್ಯಕ್ತಿ ಭೇಟಿ ನೀಡಿದ ರಾಜ್ಯಗಳೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ ಸಾವನ್ನಪ್ಪಿದ ಮಹಿಳೆಯ ಪರೀಕ್ಷಾ ವರದಿಯಲ್ಲಿ ಮಹಿಳೆಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಗುರುವಾರ ಸಾವಿನ ಸಂಖ್ಯೆ ನಾಲ್ಕಕ್ಕೇರಿದ್ದು, ದೇಶದಲ್ಲಿ ಹೆಚ್ಚು ಜನ ಸಾವನ್ನಪ್ಪಿರುವ ರಾಜ್ಯವಾಗಿದೆ. ನವೀ ಮುಂಬೈ ಮೂಲದ ಈ ಮಹಿಳೆಯಲ್ಲಿ ಕೊರೋನಾ ವೈರಸ್ ಸೋಂಕಿನಂತೆಯೇ ರೋಗಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ, ಆಕೆಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ. ಇಂದು ಬೆಳಿಗ್ಗೆ ಪರೀಕ್ಷೆಯ ವರದಿ ಬಂದಿದ್ದು, ಮಹಿಳೆಗೆ ಸೋಂಕು ತಗುಲಿದ್ದು ದೃಢವಾಗಿದೆ. ನಾವು ಈಗ ಅವರ ಸಂಬಂಧಿಕರ ಕುರಿತು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಗುಜರಾತ್ ಮೂರು, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಕರ್ನಾಟಕ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಆರೋಗ್ಯ ಸಚಿವಾಲಯ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೆ ಕನಿಷ್ಠ 42 ಜನರು ಕೊರೋನಾ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು 649 ಸೋಂಕಿತರಲ್ಲಿ 47 ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಇದು ಜನರಲ್ಲಿ ತಲ್ಲಣ ಮೂಡಿಸಿದೆ.

ವರದಿ: ಸಂಧ್ಯಾ ಎಂ
First published: March 26, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories