ನವದೆಹಲಿ(ಏ. 9): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಕಳೆದ ಭಾನುವಾರ ಮತ್ತು ಮಂಗಳವಾರ ಒಂದೇ ದಿನ ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಈಗ ಬುಧವಾರದಿಂದ ದಿನ ಒಂದರಲ್ಲಿ ಒಂದೂಕಾಲು ಲಕ್ಷಕ್ಕೂ ಹೆಚ್ಚು ಕೊರೋನಾ ಸೋಂಕು ಪೀಡಿತರು ಪತ್ತೆಯಾಗಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಗುರುವಾರ 1,31,968 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 61,899 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,30,60,542ಕ್ಕೆ ಏರಿಕೆ ಆಗಿದೆ. ಅಂದರೆ ಈವರೆಗೆ ಸುಮಾರು 1.3 ಕೋಟಿ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಗುರುವಾರ ಒಂದೇ ದಿನ ಕೊರೋನಾಗೆ 780 ಜನರು ಬಲಿ ಆಗಿದ್ದಾರೆ. ಸದ್ಯ ಮಹಾಮಾರಿ ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,67,642ಕ್ಕೆ ಏರಿಕೆ ಆಗಿದೆ.
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಹಾಕುವ ಕೆಲಸವನ್ನು ಕೂಡ ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಈವರೆಗೆ ದೇಶಾದ್ಯಂತ ಒಟ್ಟು 9,43,34,262 ಜನರಿಗೆ ಲಸಿಕೆ ಹಾಕಲಾಗಿದೆ. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲಾಗುತ್ತಿದೆ.
ಇದನ್ನೂ ಓದಿ: Night Curfew - ನೈಟ್ ಕರ್ಫ್ಯೂ ಎಷ್ಟರಮಟ್ಟಿಗೆ ಸಹಾಯಕಾರಿ? ಪ್ರಬಲ ಕಾರಣ ಇದೆಯಾ?
ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು. ಆದರೆ ಈಗ ಎರಡನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಏಪ್ರಿಲ್ 4ರಂದು 1,03,558 ಪ್ರಕರಣಗಳು ಪತ್ತೆಯಾಗಿದ್ದವು. ಏಪ್ರಿಲ್ 6ರಂದು 1,15,736 ಪ್ರಕರಣಗಳು ಕಂಡು ಬಂದಿದ್ದವು. ಏಪ್ರಿಲ್ 7ರಂದು 1,26,789 ಪ್ರಕರಣಗಳು ಪತ್ತೆಯಾಗಿದ್ದವು. ಈಗ ಏಪ್ರಿಲ್ 8ರಂದು 1,31,968 ಹೊಸ ಪ್ರಕರಣಗಳು ಕಂಡು ಬಂದಿವೆ.
ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇಕಡಾ 90ರಷ್ಟು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್ಗಡ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡು ಬರುತ್ತಿವೆ. ಆದುದರಿಂದ ಈ 11 ರಾಜ್ಯಗಳ ಆರೋಗ್ಯ ಸಚಿವರ ಜೊತೆ ಮಂಗಳವಾರ (ಏಪ್ರಿಲ್ 6) ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಜೊತೆ ನಿನ್ನೆ (ಏಪ್ರಿಲ್ 8ರಂದು) ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ.
ಕೆಲ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ವಿವಿಧ ನಿರ್ಬಂಧಗಳನ್ನ ಹೇರಲಾಗಿದೆ. ಕರ್ನಾಟಕದಲ್ಲಿ ಕೆಲ ದಿನಗಳಿಂದ ಕೊರೋನಾ ಸೋಂಕು ಬಹಳ ವೇಗವಾಗಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ (ಏ. 10) ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ. ಇದು ಎಷ್ಟರಮಟ್ಟಕ್ಕೆ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುತ್ತದೆ ಎಂದು ಕಾದುನೋಡಬೇಕು.
ವರದಿ: ಧರಣೀಶ್ ಬೂಕನಕೆರೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ