Bangalore: ಆಸ್ಪತ್ರೆ ಸೇರಿದ ಐದೇ ನಿಮಿಷಕ್ಕೆ ಪ್ರಾಣ ಬಿಟ್ಟ ಸೋಂಕಿತ; ಬೆಡ್ ಸಿಗದೆ ಕಂಗಾಲಾದ ಮತ್ತೊಂದು ಕುಟುಂಬ; ಕರುಳು ಹಿಂಡುವ ಬೆಂಗಳೂರಿನ ಕಥೆಗಳಿವು...!

ನಗರದ ಉದ್ದಗಲಕ್ಕೂ ಕೊರೋನಾ ಭಿನ್ನ-ಭಿನ್ನ ರೀತಿಯಲ್ಲಿ ಸಾವು ನೋವುಗಳನ್ನು ಉಂಟು ಮಾಡುತ್ತಿದೆ. ಇದರ ಜೊತೆಗೆ ಸರ್ಕಾರವೂ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗದೆ ಹೈರಾಣಾಗಿ ಹೋಗ್ತಿದೆ. ದಿಕ್ಕು ತಪ್ಪಿದ ಹಡಗಿನಂತೆ ಕೊರೋನಾ ನಿಯಂತ್ರಣ ಮಾಡಲಾಗದೆ ಕಂಗಾಲಾಗಿ ಹೋಗಿದೆ.

ಆ್ಯಂಬುಲೆನ್ಸ್​ನಲ್ಲಿ ಕೊರೋನಾ ಸೋಂಕಿತ

ಆ್ಯಂಬುಲೆನ್ಸ್​ನಲ್ಲಿ ಕೊರೋನಾ ಸೋಂಕಿತ

  • Share this:
ಬೆಂಗಳೂರು(ಏ.20): ಕೊರೋನಾ ಎರಡನೇ ಅಲೆ ಆರಂಭದಲ್ಲೇ ಸಾಲು ಸಾಲು ಕಣ್ಣೀರ ಕಥೆಗಳನ್ನು ಕಟ್ಟಿಕೊಡುತ್ತಿದೆ. ಮೊದಲ ಅವಧಿಯ ಕೊನೆಯಲ್ಲಿ ಯಾವ ರೀತಿ ಕರುಳು ಹಿಂಡುವ ಕಥೆಗಳು ಹೊರ ಹೊಮ್ಮಿದ್ವೋ ಅದೇ ರೀತಿಯ ಕರುಣಾಜನಕ ವೃತ್ತಾಂತಗಳು ಸೃಷ್ಟಿಯಾಗ್ತಿದೆ. ವಾಸ್ತವದಲ್ಲಿ ಸಿಲಿಕಾನ್ ಸಿಟಿ ಕೊರೋನಾ ಎರಡನೇ ಹೊಡೆತಕ್ಕೆ ಕಂಗಾಲಾಗಿ ಹೋಗ್ತಿದೆ.

ಕ್ಷಣಾರ್ಧದಲ್ಲಿ ಉರುಳುತ್ತಿದೆ ಹೆಣ, ಬೆಡ್ ಇಲ್ಲ. ಆಕ್ಸಿಜನ್ ಇಲ್ಲದೆ ಏರಿಕೆಯಾಗ್ತಿದೆ ಸಾವು. ಈ ದಿನಗಳಲ್ಲಿ ಬೆಂಗಳೂರು ಅಕ್ಷರಶಃ ನಲುಗಿ ಹೋಗುತ್ತಿದೆ. ಕಣ್ಣಂಚು ತೇವಗೊಳ್ಳುವ ಘಟನೆಗಳು ಜರುಗುತ್ತಿವೆ. ಹೌದು, ಕೊರೋನಾ ಮತ್ತೆ ಮನುಕುಲವನ್ನು ಹಿಂಡಿ ಹಿಪ್ಪೆ ಮಾಡಿ ಹಾಕ್ತಿದೆ. ಕ್ಷಣಾರ್ಧದಲ್ಲಿ ಸೋಂಕಿತರು ಸಾವನ್ನಪ್ಪುವ ಘಟನೆಗಳು ನಡೆಯುತ್ತಿವೆ. ಇಂದು ಬೆಂಗಳೂರಿನ ವಿವಿಧ ಭಾಗದಲ್ಲಿ ನಡೆದ ಘಟನೆಗಳೇ ಇದಕ್ಕಿರುವ ಸಾಕ್ಷ್ಯ. ಕೊರೋನಾ ಸಾಮಾನ್ಯದ್ದಲ್ಲ ಎಂಬುವುದು ಮತ್ತೆ ಜನರಿಗೆ ಅರ್ಥವಾಗತೊಡಗಿದೆ. ಪರಿಣಾಮ ಬೆಂಗಳೂರು ಮಂದಿ ಕಣ್ಣೀರಲ್ಲಿ ಕೈತೊಳೆಯುವ ಸನ್ನಿವೇಶ ನಿರ್ಮಾಣವಾಗಿದೆ.

ಶಿವಾಜಿನಗರದ ಚರಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಮುಂಜಾನೆ 6ಗಂಟೆಯಿಂದಲೇ ಸೋಂಕಿತರನ್ನು ಹಿಡಿದುಕೊಂಡು ಆಂಬ್ಯಲೆನ್ಸ್‌ಗಳು ಕಾಯುತ್ತಿದ್ದವು. ಸಂಜೆಯಾದರೂ ಸೋಂಕಿತರಿಗೆ ಹಾಸಿಗೆ ಸಿಗದೆ ನರಳಾಡಿ ಹೋದರು. ಇದರ ಜೊತೆಯಲ್ಲಿ ನೆಲಮಂಗಲದ ಅರಶಿನಕುಂಟೆ ನಿವಾಸಿಯಾದ 56 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡು ನಾಲ್ಕನೇ ದಿನವಾದ ಇಂದು ಕೊನೆಯುಸಿರೆಳೆದರು. ವೆಂಟಿಲೇಟರ್ ಇರುವ ಬೆಡ್ ಸಿಗದ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಅಲೆದಾಡಿ ಇಂದು ಕೊನೆಗೆ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಯಸ್ಸು ಅಲ್ಲೇ ಮುಗಿದು ಹೋಗಿತ್ತು. ಆ 56 ವರ್ಷದ ಮಹಿಳೆಯೂ ಕೊರೋನಾಗೆ ಬಲಿಯಾಗಿದ್ದಾರೆ.

Coronavirus India: ವಡೋದರಾದಲ್ಲಿ ಕೋವಿಡ್-19 ಕೇರ್‌ ಸೆಂಟರ್‌ ಆಗಿ ಬದಲಾದ ಮಸೀದಿ

ಒಂದೇ ಸ್ಪಾಟ್.. ಎರಡು ಮನಕಲಕುವ ದೃಶ್ಯಗಳು.. ನರಳಾಡಿ ಸಾವನ್ನಪ್ಪಿದ ಸೋಂಕಿತರು.!!

ಇನ್ನು ಇತ್ತ ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಒಂದೇ ಕಡೆ ಎರಡು ಕರುಳುಹಿಂಡುವ ಘಟನೆಗಳು ನಡೆದು ಹೋಗಿದೆ. ಆ ಸೋಂಕಿತನಿಗೆ 65 ವರ್ಷ. ನಿನ್ನೆ ರಾತ್ರಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಕುಟುಂಬಸ್ಥರು ಸೋಂಕಿತನನ್ನು ಪಿಕಪ್ ವಾಹನಕ್ಕೆ ತುಂಬಿ ನಗರದ ನಾಲ್ಕೈದು ಆಸ್ಪತ್ರೆಗಳಿಗೆ ಹೊತ್ತೊಯ್ದಿದ್ದಾರೆ. ಆದರೆ ಎಲ್ಲೂ ಕೂಡ ಹಾಸಿಗೆ ಸಿಗದೆ ಕೊನೆಗೆ ಕೆಸಿ ಜನರಲ್ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಬಂದು ತಲುಪಿದ ಮೇಲೂ 65 ವರ್ಷದ ಸೋಂಕಿತ ಬದುಕುಳಿಯಲಿಲ್ಲ. ಕುಟುಂಬಸ್ಥರು ಹಾಸಿಗೆಗಾಗಿ ವೈದ್ಯರ ಬಳಿ ಅಂಗಲಾಚುವ ಹೊತ್ತಿಗೆ ಪಿಕಪ್ ವಾಹನದಲ್ಲೇ ಸೋಂಕಿತ ಪ್ರಾಣ ಬಿಟ್ಟಿದ್ದಾನೆ.

ಆಸ್ಪತ್ರೆ ಸೇರಿದ ಐದೇ 5 ನಿಮಿಷದಲ್ಲಿ ಪ್ರಾಣ ಕಳೆದುಕೊಂಡ 48 ವರ್ಷದ ಸೋಂಕಿತ.!!

ಇದಾದ ಬೆನ್ನಲ್ಲೇ ಅದೇ ಜಾಗಕ್ಕೆ ಆಟೋದಲ್ಲಿ ಬಂದ ಮತ್ತೊಬ್ಬ ಸೋಂಕಿತ ಬಂದ ಬೆನ್ನಲ್ಲೇ ನೆಲದ ಮೇಲೆ ಬಿದ್ದು ನರಳಾಡುತ್ತಿದ್ದ. ಕೊರೋನಾದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ 48 ವರ್ಷದ ಸೋಂಕಿತನನ್ನು ಸಿಬ್ಬಂದಿಗಳು ಆಸ್ಪತ್ರೆಯೊಳಕ್ಕೆ ಕೊಂಡೊಯ್ದರು. ಆದರೆ ಆಸ್ಪತ್ರೆ ಒಳಕ್ಕೆ ಕೊಂಡೊಯ್ದ ಐದೇ ಐದು ನಿಮಿಷಕ್ಕೆ ಸೋಂಕಿತ ಪ್ರಾಣ ಬಿಟ್ಟಿದ್ದಾನೆ. ಕ್ಷಣಾರ್ಧದಲ್ಲಿ ಪತಿ ಪ್ರಾಣ ಬಿಟ್ಟಿದ್ದನ್ನು ಕಣ್ಣಾರೆ ಕಂಡ ಪತ್ನಿ ಸ್ಥಳದಲ್ಲೇ ಗೋಳಾಡಿ‌ ಹೋದರು.

ಹೀಗೆ ನಗರದ ಉದ್ದಗಲಕ್ಕೂ ಕೊರೋನಾ ಭಿನ್ನ-ಭಿನ್ನ ರೀತಿಯಲ್ಲಿ ಸಾವು ನೋವುಗಳನ್ನು ಉಂಟು ಮಾಡುತ್ತಿದೆ. ಇದರ ಜೊತೆಗೆ ಸರ್ಕಾರವೂ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗದೆ ಹೈರಾಣಾಗಿ ಹೋಗ್ತಿದೆ. ದಿಕ್ಕು ತಪ್ಪಿದ ಹಡಗಿನಂತೆ ಕೊರೋನಾ ನಿಯಂತ್ರಣ ಮಾಡಲಾಗದೆ ಕಂಗಾಲಾಗಿ ಹೋಗಿದೆ. ಇದೇ ರೀತಿ ಮುಂದುವರೆದರೆ ಹೆಣಗಳ ರಾಶಿ ಬೀಳಲಿದೆ. ಅದಕ್ಕೂ ಮೊದಲು ಸರ್ಕಾರ ಹಾಗೂ ಬೆಂಗಳೂರು ಆಡಳಿತ ಯಂತ್ರ ಬಿಬಿಎಂಪಿ ಎಚ್ಚೆತ್ತುಕೊಳ್ಳಲೇಬೇಕು.
Published by:Latha CG
First published: