• ಹೋಂ
  • »
  • ನ್ಯೂಸ್
  • »
  • Corona
  • »
  • Coronavirus Bangalore: ಸೋಂಕಿತರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ

Coronavirus Bangalore: ಸೋಂಕಿತರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಸೋಂಕು ಪತ್ತೆ ವೇಳೆ ರೋಗ ಲಕ್ಷಣಗಳಿಲ್ಲದ ಸೋಂಕಿತರು ಪತ್ತೆಯಾದಲ್ಲಿ ಅವರಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯ ಇಲ್ಲದಿರುವುದರಿಂದ ಒಂದಷ್ಟು ಮಾತ್ರೆಗಳನ್ನ ನೀಡಿ ವೈದ್ಯರು ಹೋಂ ಕ್ವಾರಂಟೈನ್‌ಗೆ ಸೂಚಿಸುತ್ತಾರೆ. ಅದರಲ್ಲಿ ಕೆಲವರು ಕಟ್ಟು ನಿಟ್ಟಿನ ಕ್ರಮ ಅನುಸರಿಸಿದರೆ ಕೆಲವರಂತೂ ಜವಾಬ್ದಾರಿ ಮರೆತು ಊರ ಗೂಳಿಗಳಂತೆ ತಿರುಗಾಡುತ್ತಿದ್ದು ಅವರಿಂದಲೂ ಸೋಂಕು ಹರಡುವ ಸಾಧ್ಯತೆಗಳು ಅಧಿಕವಾಗಿವೆ.

ಮುಂದೆ ಓದಿ ...
  • Share this:

ಬೆಂಗಳೂರು ಗ್ರಾಮಾಂತರ (ಏ.30): ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಗುರುವಾರದ ಅಂಕಿ ಅಂಶದ ಪ್ರಕಾರ, ರಾಜ್ಯದಲ್ಲಿ 35,024 ಹೊಸ ಪ್ರಕರಣಗಳು ಕಂಡು ಬಂದಿವೆ.  ಸೋಂಕಿತರ ಪಟ್ಟಿಯಲ್ಲಿ ಅತೀ ಹೆಚ್ಚು ಸೋಂಕು ದಾಖಲಾಗುತ್ತಿರುವ ಪೈಕಿ ಮೊದಲ ಸ್ಥಾನದಲ್ಲಿ ಬೆಂಗಳೂರು ನಗರ ಇದ್ದರೆ, ಐದನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದೆ.


ಮೊದಲ ಸ್ಥಾನ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 19,637, ಎರಡನೇ ಸ್ಥಾನ ಮೈಸೂರು ಸೋಂಕಿತರ ಸಂಖ್ಯೆ 1219, ಮೂರನೇ ಸ್ಥಾನ ತುಮಕೂರು ಸೋಂಕಿತರ ಸಂಖ್ಯೆ 1195, ‌ನಾಲ್ಕನೇ ಸ್ಥಾನ ದಕ್ಷಿಣ ಕನ್ನಡ ಹಾಗೂ 1129 ಸೋಂಕಿತರು ಧೃಡಪಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ.


ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಲು ಕಾರಣಗಳು 


ಬೆಂಗಳೂರಿನೊಂದಿಗೆ ನಿರಂತರ ಸಂಪರ್ಕ:


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ಬೆಂಗಳೂರು ನಗರ ಜಿಲ್ಲೆಯೊಂದಿಗೆ ತನ್ನ ಗಡಿರೇಖೆಯನ್ನ ಹಂಚಿಕೊಂಡಿದ್ದು ಉದ್ಯೋಗ, ವ್ಯಾಪಾರ, ಶೈಕ್ಷಣಿಕ ಉದ್ದೇಶ ಸೇರಿದಂತೆ ಗ್ರಾಮಾಂತರ ಜಿಲ್ಲೆಯ ನಾಗರೀಕರು ಪ್ರತಿದಿನ ನಗರ ಜಿಲ್ಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಪ್ರತಿದಿನ ತಮ್ಮ ಸ್ವಂತ ವಾಹನಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿಗರ ಜೊತೆ ನಿರಂತರ ಸಂಪರ್ಕ ಇರುವುದರಿಂದ ಸೋಂಕು ಏರಿಕೆಯಾಗುತ್ತಿದೆ ಎನ್ನಲಾಗಿದೆ.


ಸೋಂಕಿತರನ್ನ ಪತ್ತೆ ಹಚ್ಚುವಲ್ಲಿ ವಿಳಂಬ


ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರನ್ನ ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿರುವುದರಿಂದ ಸೋಂಕು ಏರಿಕೆಯಾಗುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಿದ ಸೋಂಕಿತರು ಸ್ಥಳದಲ್ಲೇ ಪತ್ತೆ ಆಗುತ್ತಿದ್ದು, ಅವರಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೆ RT-PCR ನಲ್ಲಿ ಟೆಸ್ಟ್ ಮಾಡಿಸಿದವರ ವರದಿ ಮೂರರಿಂದ ನಾಲ್ಕು ದಿನಗಳ ಕಾಲ ತಡವಾಗುತ್ತಿರುವುದು ಸೋಂಕು  ಹೆಚ್ಚಳವಾಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.


ಗಂಟಲು ದ್ರವ ಮಾದರಿ ಕೊಟ್ಟು ಬಂದ ನಂತರ ಸೋಂಕಿತರು ಊರ ತುಂಬಾ ಓಡಾಡಿರುತ್ತಾರೆ, ಕೆಲವರೊಂದಿಗೆ ಹತ್ತಿರದಿಂದ ಸಂಪರ್ಕ ಬೆಳೆಸಿರುತ್ತಾರೆ ಹಾಗೂ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಅವರಿಗೆ ಮೂರು ದಿನಗಳ ನಂತರ ವರದಿ ಪಾಸಿಟಿವ್ ಬರುವಷ್ಟರಲ್ಲಿ ಒಂದಷ್ಟು ಜನರಿಗೆ ಸೋಂಕು ಹರಡಿರುತ್ತದೆ. ಈ ಒಂದು ಕಾರಣದಿಂದಲೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.


ಮೊಬೈಲ್ ನಂಬರ್ ಸಮಸ್ಯೆ:


ಗ್ರಾಮಾಂತರ ಜಿಲ್ಲೆ ಬಹುಶಃ ರೈತಾಪಿ ವರ್ಗದವರಿಂದ ಕೂಡಿದ್ದು ಬಹುಪಾಲು ರೈತರಿಗೆ ಮೊಬೈಲ್ ಬಳಕೆಯೇ ಗೊತ್ತಿಲ್ಲ. ಈ ವೇಳೆ ಯಾವುದೋ ಕಾರಣದಿಂದಲೋ ಅಥವಾ ಕ್ಯಾಂಪ್‌ಗಳಲ್ಲೋ ಕೋವಿಡ್ ಪರೀಕ್ಷೆ ಮಾಡಿಸಿದ ರೈತರಿಗೆ ಮೊಬೈಲ್‌ಗಳು ಇಲ್ಲವಾದಲ್ಲಿ ಸ್ವಾಬ್ ಕಲೆಕ್ಟ್ ಮಾಡೋ ಟೆಕ್ನಿಷಿಯನ್ ಅಥವಾ ಸಹಾಯಕರು ಆನ್ಲೈನ್‌ನಲ್ಲಿ ತಮ್ಮ ನಂಬರ್ ನಮೂದಿಸಿ ಒಟಿಪಿ ಪಡೆದು ಸ್ವಾಬ್ ಪಡೆದುಕೊಳ್ಳುತ್ತಾರೆ. ಮೂರ್ನಾಲ್ಕು ದಿನದ ನಂತರ ವರದಿ ಪಾಸಿಟಿವ್​ ಬಂದಲ್ಲಿ ಟೆಕ್ನಿಷಿಯನ್ ಬರೆದುಕೊಳ್ಳುವ ಅಡ್ರೆಸ್ ಮೂಲಕ ಹುಡುಕಲು ಪ್ರಾರಂಭಿಸುತ್ತಾರೆ. ಮೊಬೈಲ್ ನಂಬರ್ ಇರುವ ಸೋಂಕಿತರನ್ನ ಪತ್ತೆ ಹಚ್ಚುವುದೇ ತಲೆ ನೋವಾಗಿದ್ದು. ಮೊಬೈಲ್ ನಂಬರ್ ಇಲ್ಲದಿರುವುದು ಸೋಂಕಿತರ ಪತ್ತೆಗೆ ಮಾರಕವಾಗಿದೆ.


ಚಿತ್ರದುರ್ಗದ ಪ್ರತಿ ತಾಲ್ಲೂಕಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿ; ಸಚಿವ ಬಿ.ಶ್ರೀರಾಮುಲು


ರೋಗಲಕ್ಷಣಗಳಿಲ್ಲದ ಸೋಂಕಿತರಿಂದ ಹರಡುವಿಕೆ:


ಸೋಂಕು ಪತ್ತೆ ವೇಳೆ ರೋಗ ಲಕ್ಷಣಗಳಿಲ್ಲದ ಸೋಂಕಿತರು ಪತ್ತೆಯಾದಲ್ಲಿ ಅವರಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯ ಇಲ್ಲದಿರುವುದರಿಂದ ಒಂದಷ್ಟು ಮಾತ್ರೆಗಳನ್ನ ನೀಡಿ ವೈದ್ಯರು ಹೋಂ ಕ್ವಾರಂಟೈನ್‌ಗೆ ಸೂಚಿಸುತ್ತಾರೆ. ಅದರಲ್ಲಿ ಕೆಲವರು ಕಟ್ಟು ನಿಟ್ಟಿನ ಕ್ರಮ ಅನುಸರಿಸಿದರೆ ಕೆಲವರಂತೂ ಜವಾಬ್ದಾರಿ ಮರೆತು ಊರ ಗೂಳಿಗಳಂತೆ ತಿರುಗಾಡುತ್ತಿದ್ದು ಅವರಿಂದಲೂ ಸೋಂಕು ಹರಡುವ ಸಾಧ್ಯತೆಗಳು ಅಧಿಕವಾಗಿದೆ.


ಪ್ರಾಥಮಿಕ ಸಂಪರ್ಕಿತರಿಂದ ಸೋಂಕು:


ಸೊಂಕಿತರ ಪ್ರಾಥಮಿಕ ಸಂಪರ್ಕಿತರು ಕ್ವಾರಂಟೈನ್ ಆಗದೆ ನಾಲ್ಕೈದು ದಿನಗಳ ನಂತರ ರೋಗಲಕ್ಷಣಗಳಿದ್ದರೆ ಮಾತ್ರ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟು ವರದಿ ಬರುವಷ್ಟರಲ್ಲಿ ಸೊಂಕಿತರು ಮತ್ತಷ್ಟು ಜನರಿಗೆ ಸೋಂಕು ಹರಡಿಸುತ್ತಿದ್ದಾರೆ ಎನ್ನಲಾಗಿದೆ.


ಹಾಟ್ ಸ್ಪಾಟ್ ಆಗುತ್ತಿವೆ ಪರೀಕ್ಷಾ ಕೇಂದ್ರಗಳು:


ಜಿಲ್ಲೆಯ ಬಹುತೇಕ ಪರೀಕ್ಷಾ ಕೇಂದ್ರಗಳು ಕೊರೋನಾ ಹಾಟ್‌ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿವೆ. ಪರೀಕ್ಷಾ ಕ್ಷೇಂದ್ರಗಳಿಗೆ ಬರುವ ನಾಗರೀಕರು ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಆರೋಗ್ಯ ಇಲಾಖೆಯವರ ಮಾತನ್ನು ಸಹ ಕೇಳದೆ ಗುಂಪುಗೂಡುತ್ತಿದ್ದಾರೆ. ಇದರಿಂದ ಸೋಂಕಿತರು ಹಾಗೂ ಸೋಂಕು ರಹಿತರು ಒಂದೇ ಕಡೆ ಗುಂಪು ಗುಂಪಾಗಿ ಸೇರಿಕೊಳ್ಳುವುದರಿಂದ ಪರೀಕ್ಷಾ ಕೇಂದ್ರಗಳ ಬಳಿಯೇ ಸೋಂಕು ಹೆಚ್ಚಳವಾಗುತ್ತಿದೆ ಎನ್ನಬಹುದು.


ಆಸ್ಪತ್ರೆಗಳಲ್ಲಿ ಸೋಂಕಿತರನ್ನ ಭೇಟಿ ಮಾಡುತ್ತಿರುವ ಕುಟುಂಬಸ್ಥರು:


ಜಿಲ್ಲೆಯ ಬಹುತೇಕ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರ ಕುಟುಂಬಸ್ಥರು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನ ಆಗ್ಗಾಗ್ಗೆ ಭೇಟಿ ಮಾಡುತ್ತಿರುತ್ತಾರೆ. ಸೋಂಕಿತರಿಗೆ ಊಟ, ಬಟ್ಟೆ, ಬಿಸಿನೀರು ಕೊಡುವ ನೆಪದಲ್ಲಿ ಸೋಂಕಿತರ ನೇರ ಸಂಪರ್ಕಕ್ಕೆ ಬರುತ್ತಿದ್ದಾರೆ. ಆಸ್ಪತ್ರೆ ಬಳಿ ಆಸ್ಪತ್ರೆಯ ಸಿಬ್ಬಂದಿಗೆ ತಾವು ತಂದಿರುವ ಸಾಮಾಗ್ರಿಗಳನ್ನ ನೀಡಿದರೆ ಅವರು ಸೂಕ್ತ ಸೋಂಕಿತರಿಗೆ ಕುಟುಂಬಸ್ಥರು ಕೊಟ್ಟ ಸಾಮಾಗ್ರಿಗಳನ್ನ ಒದಗಿಸುತ್ತಾರೆ, ಆದ್ರೆ ಸೋಂಕಿತರ ಕುಟುಂಬಸ್ಥರು ಯಾರ ಮಾತನ್ನೂ‌ ಕೇಳದೇ ಕಿಟಕಿಗಳ ಮೂಲಕ‌ ಸೋಂಕಿತರನ್ನ ಭೇಟಿ ಮಾಡುತ್ತಿದ್ದು ಆಸ್ಪತ್ರೆಗಳಲ್ಲಿ ವೈರಸ್ ಸಾಂದ್ರತೆ ಹೆಚ್ಚಿದ್ದು ವೈರಸ್ ಅತೀ ವೇಗವಾಗಿ ಹರಡುತ್ತಿದೆ, ಸೋಂಕಿತರನ್ನ ಕುಟುಂಬಸ್ಥರು ಭೇಟಿಯಾಗುವುದನ್ನ ನಿಲ್ಲಿಸಿದರೆ ಸೋಂಕು ಹೆಚ್ಚಳವಾಗುವುದನ್ನ ತಡೆಗಟ್ಟಬಹುದು.‌


ಅನಾವಶ್ಯಕ ಓಡಾಟ:


ರಾಜ್ಯದಲ್ಲಿ ಕೋವಿಡ್ ಚೈನ್ ಲಿಂಕ್ ಬ್ರೇಕ್ ಮಾಡಲು ಸರ್ಕಾರ ಲಾಕ್‌ಡೌನ್‌ ನಂತಹ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಆದ್ರೆ ಜನ ಮಾತ್ರ ಸರ್ಕಾರದ ಯಾವುದೇ ನಿಯಮಗಳನ್ನ‌ ಪಾಲಿಸದೆ ಅನವಶ್ಯಕವಾಗಿ ಎಲ್ಲೆಂದರಲ್ಲೆ ಓಡಾಡುತ್ತಿದ್ದಾರೆ. ಡಾಕ್ಟರ್ ಬರೆದ ಹಳೆಯ ಯಾವುದೋ ಒಂದು ಪ್ರಿಸ್ಕ್ರಿಕ್ಷನ್, ಎರಡು ಶೀಟ್ ಮಾತ್ರೆ, ಒಂದು ಟಾನಿಕ್ ಬಾಟೆಲ್ ಜೇಬಿನಲ್ಲಿ ಇಟ್ಟುಕೊಂಡು ಎಲ್ಲೆಂದರಲ್ಲೇ ಅಲೆದಾಡುತ್ತಿದ್ದಾರೆ. ಪೊಲೀಸರ ಪರಿಶೀಲನೆ ವೇಳೆ ಔಷಧಿ ತರೋದಕ್ಕೆ ಹೋಗುತ್ತಿದ್ದೋ ಎಂದು ಕೆಲವರು ಹೇಳುದ್ರೆ ಮತ್ತೆ ಹಲವರು ಕೋವಿಡ್ ಟೆಸ್ಟ್ ಮಾಡ್ಸೋಕೆ ವ್ಯಾಕ್ಸಿನ್ ಹಾಕ್ಸೋಕೆ ಹೋಗ್ತಿದ್ದೇವೆ ಎಂದು ಸುಳ್ಳುಗಳನ್ನ ಹೇಳುತ್ತಾ ತಿರುಗಾಡುತ್ತಿದ್ದಾರೆ.


ಬೆಂಗಳೂರಿನಿಂದ ಬಂದವರೇ ಹೆಚ್ಚು:


ಇಷ್ಟು ದಿನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಜನ ಕಟ್ಟುನಿಟ್ಟಿನ ನಿಯಮಗಳನ್ನ ಸರ್ಕಾರ ಏರುತ್ತಲೇ ಬೆಂಗಳೂರು ತೊರೆದು ಗಂಟು ಮೂಟೆ ಕಟ್ಟಿಕೊಂಡು ಹಳ್ಳಿಗಳತ್ತ ವಲಸೆ ಹೊರಟರು. ಹಳ್ಳಿಗಳಿಗೆ ಹೋದವರು ಅಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದು ಹಲವರದ್ದು ಪಾಸಿಟಿವ್ ಬಂದಿದೆ. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.


ಕರ್ಫ್ಯೂ ಸಡಿಲಿಕೆ ವೇಳೆ ಜನಸಂದಣಿ:


ಇನ್ನೂ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಿರುವ ಸರ್ಕಾರ ಅಗತ್ಯ ವಸ್ತುಗಳ ಖರೀದಿಗೆ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೂ ಕರ್ಫ್ಯೂ ಸಡಿಲಿಕೆ ಮಾಡಿದೆ. ದಿನಸಿ, ಹಾಲು, ತರಕಾರಿ ಹಣ್ಣುಗಳ ಖರೀದಿ, ಮದ್ಯ ಮಾರಾಟ, ಕಟ್ಟಡ ನಿರ್ಮಾಣ ವಸ್ತುಗಳ ಮಾರಾಟ ಮಳಿಗೆಗಳಿಗೆ ವಿನಾಯಿತಿ ನೀಡಿದ್ದು, ಈ ವೇಳೆ ಜನರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಾ ಅಂಗಡಿ ಮುಂಗಟ್ಟುಗಳ ಬಳಿ ಸರಿಯಾಗಿ ನಿಯಮ ಪಾಲಿಸದೆ ಸೋಂಕು ಹರಡುವಿಕೆಗೆ ಕಾರಣೀಭೂತರಾಗುತ್ತಿದ್ದಾರೆ.


ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತರಲು ಸಾಕಷ್ಟು ನಿಯಮಗಳನ್ನ ಜಾರಿಗೊಳಿಸಿದ್ದು, ಜನ ಜವಾಬ್ದಾರಿಯಿಂದ ವರ್ತಿಸುವುದರ ಮೂಲಕ ಕೋವಿಡ್ ಹರಡುವಿಕೆಯನ್ನ ಕಡಿಮೆ ಮಾಡಬಹುದಾಗಿದೆ.

Published by:Latha CG
First published: