ಮುಂಬೈ(ಮಾ. 20): ಕೊರೋನಾ ಮಹಾಮಾರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಇಲ್ಲಿನ ಸರ್ಕಾರ ಬಿಗಿಕ್ರಮ ಕೈಗೊಂಡಿದೆ. ಮುಂಬೈ, ಪುಣೆ ಮತ್ತು ನಾಗಪುರದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮಾರ್ಚ್ 31ರವರೆಗೆ ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಔಷಧಿ ಇತ್ಯಾದಿ ಅಗತ್ಯ ಸೇವೆ ನೀಡುವ ಅಂಗಡಿ, ಮಳಿಗೆಗಳನ್ನ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಅಂಗಡಿಗಳನ್ನ ತಿಂಗಳಾಂತ್ಯದವರೆಗೂ ಮುಚ್ಚುವಂತೆ ಸಿಎಂ ಉದ್ಧವ್ ಠಾಕ್ರೆ ಆದೇಶ ಹೊರಡಿಸಿದ್ದಾರೆ.
ಬ್ಯಾಂಕ್, ಮೆಡಿಕಲ್ ಸ್ಟೋರ್, ಹಾಲು, ದಿನೋಪಯೋಗಿ ವಸ್ತುಗಳು ಇತ್ಯಾದಿ ಮಾರುವ ಅಂಗಡಿಗಳಷ್ಟೇ ತೆರೆಯಬಹುದು. ಖಾಸಗಿ ಕಂಪನಿಗಳಿಗೆ ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುವಂತೆ ಸೂಚಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ. 25 ಸಿಬ್ಬಂದಿ ಮಾತ್ರ ಇರಿಸಿಕೊಳ್ಳಬೇಕು. ಉಳಿದವರಿಗೆ ರಜೆ ನೀಡಬೇಕೆಂದು ತಿಳಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ ಸಿಂಗರ್ ಕನಿಕಾ ಕಪೂರ್ಗೂ ತಗುಲಿದ ಮಾರಕ ಕೊರೋನಾ ವೈರಸ್ ಸೋಂಕು!
“ಸರ್ಕಾರಿ ಕಚೇರಿಗಳಲ್ಲಿ ಶೇ. 25 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಅಗತ್ಯ ವಸ್ತುಗಳನ್ನ ಹೊರತುಪಡಿಸಿ ಉಳಿದ ಅಂಗಡಿಗಳನ್ನೆಲ್ಲಾ ದಯವಿಟ್ಟು ಮುಚ್ಚಿರಿ. ಮಾರ್ಚ್ 31ರವರೆಗೆ ಎಲ್ಲಾ ಕಚೇರಿ ಮತ್ತು ಅಂಗಡಿ ಮುಂಗಟ್ಟುಗಳನ್ನ ಮುಚ್ಚುತ್ತಿದ್ಧೇವೆ. ಮನೆಯಿಂದ ಕಚೇರಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಬಲವಂತವಾಗಿ ಅವರನ್ನ ಮನೆಯಲ್ಲೇ ಕೂರಿಸಬೇಕಾಗುತ್ತದೆ. ನಮಗೆ ಬೇರೆ ದಾರಿ ಇಲ್ಲ. ಬದುಕಬೇಕೆಂದರೆ ಸದ್ಯಕ್ಕೆ ಮನಯಲ್ಲೇ ಇರುವುದು ಅಗತ್ಯವಿದೆ. ವೈದ್ಯಕೀಯ ಚಿಕಿತ್ಸಕರು ಇದೀಗ ದೊಡ್ಡ ಸಮರವನ್ನೇ ಮಾಡುತ್ತಿದ್ಧಾರೆ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂದೇಶ ನೀಡಿದ್ಧಾರೆ.
ಈ ಕ್ರಮದಿಂದಲೂ ವೈರಸ್ ಹರಡುವುದು ತಪ್ಪದಿದ್ದರೆ ಬಸ್, ಟ್ರೈನ್ ಇತ್ಯಾದಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನ ನಿಲ್ಲಿಸಬೇಕಾಗಬಹುದು. ಜನರ ಓಡಾಟಕ್ಕೂ ಕಡಿವಾಣ ಹಾಕಬೇಕಾಗಬಹುದು ಎಂದು ಹೇಳಿರುವ ಮುಖ್ಯಮಂತ್ರಿ, ಜನರು ರಜೆಯನ್ನ ದುರುಪಯೋಗಪಡಿಸಿಕೊಳ್ಳದೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದೂ ಸಲಹೆ ನೀಡಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ