ಕೊರೋನಾ ಭೀತಿ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದನ್ನು ನಿಯಂತ್ರಣ ಮಾಡಲು ಯಾವ ದೇಶದಿಂದಲೂ ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಈ ಭೀಕರ ವೈರಸ್ ಅನ್ನು ನಿಯಂತ್ರಣ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬಹುತೇಕ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿದೆ. ಇನ್ನು, ಕರ್ನಾಟಕ ಕೂಡ ಈ ಸೋಂಕನ್ನು ತಡೆಯುವ ಉದ್ದೇಶದಿಂದ ಬಹುತೇಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಇಂಥ ಭೀಕರ ಸ್ಥಿತಿಯಲ್ಲೂ ಹಬ್ಬದ ಅನೇಕರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಇದನ್ನು ನೋಡಿದರೆ ಜನತೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ಚೀನಾದಲ್ಲಿ ಕಳೆದ ಡಿಸೆಂಬರ್ನಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಜನವರಿಯಲ್ಲಿ ತನ್ನ ಪ್ರಭಾವ ತೋರಲು ಆರಂಭಿಸಿತ್ತು. ಜನವರಿ ಅಂತ್ಯಕ್ಕೆ ಈ ವೈರಸ್ಗೆ ಚೀನಾದಲ್ಲಿ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಇದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿತ್ತು. ನಂತರ ಚೀನಾ ಎಚ್ಚೆತ್ತುಕೊಂಡಿತ್ತಾದರೂ ಕಾಲ ಮಿಂಚಿ ಹೋಗಿತ್ತು. ಕಾಡ್ಗಿಚ್ಚಿನಂತೆ ಈ ಸೋಂಕು ಹಬ್ಬಿತ್ತು.
ಚೀನಾದಲ್ಲಿ ಈ ಸೋಂಕಿಗೆ ಈವರೆಗೆ 3277 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 80 ಸಾವಿರದ ಗಡಿ ತಲುಪಿದೆ. ಇನ್ನು ಇಟಲಿಯನ್ನು ಕೊರೋನಾ ವೈರಸ್ ಭೀಕರವಾಗಿ ಕಾಡುತ್ತಿದ್ದು 6 ಸಾವಿರ ಮಂದಿ ಬಲಿಯಾಗಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಅಲ್ಲಿನ ಸ್ಮಶಾನಗಳಲ್ಲಿ ಹೂಳಲೂ ಜಾಗವಿಲ್ಲದಂತೆ ಮಾಡಿಬಿಟ್ಟಿದೆ ಕೊರೋನಾ. ಇನ್ನು, ಅಮೆರಿಕ, ಇರಾನ್ ಭಾಗದಲ್ಲೂ ಈ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ.
ಭಾರತದಲ್ಲೂ ನಿಧಾನವಾಗಿ ಕೊರೋನಾ ವೈರಸ್ ತನ್ನ ಪ್ರಭಾವನ್ನು ತೋರಿಸಲು ಆರಂಭಿಸಿದೆ. ಈವರೆಗೆ 470ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, 9ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆಸ್ಪತ್ರೆಗಳು ಅಷ್ಟಾಗಿ ಸುಸಜ್ಜಿತವಾಗಿಲ್ಲ. ಇನ್ನು ಕೊರೋನಾ ಕೈ ಮೀರಿದರೆ ಚಿಕಿತ್ಸೆ ಸಿಗದೆ ಸಾಯಬೇಕಾಗುತ್ತದೆ. ಹೀಗಾಗಿ, ಸರ್ಕಾರ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ಹೆಚ್ಚಿದ ಕೊರೋನಾ ಭೀತಿ: 30 ರಾಜ್ಯಗಳ 548 ಜಿಲ್ಲೆಗಳು ಲಾಕ್ಡೌನ್
ಈಗಾಗಲೇ
ಕೇಂದ್ರ ಸರ್ಕಾರ 30 ರಾಜ್ಯಗಳ 548 ಜಿಲ್ಲೆಗಳಲ್ಲಿ ಲಾಕ್ಡೌನ್ ಆದೇಶವನ್ನು ಹೊರಡಿಸಿದೆ. ಕೊರೋನಾ ಭೀತಿ ಹಿನ್ನೆಲೆ, ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಡೀ ದೇಶಾದ್ಯಂತ 30 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, 548 ಜಿಲ್ಲೆಗಳು ಬಂದ್ ಆಗಿವೆ. ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳು ಕರ್ಫ್ಯೂ ವಿಧಿಸಿವೆ.
ಈ ರೀತಿಯ ಆದೇಶದಿಂದ ದೇಶದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರ ಆದೇಶದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿ ಬಿಡುತ್ತದೆ. ಹೀಗಿದ್ದರೂ ಸರ್ಕಾರ ಇಂಥ ಕಠಿಣ ಕ್ರಮ ಕೈಗೊಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಸರ್ಕಾರ ಗಂಭೀರವಾದಷ್ಟು ದೇಶದ ಜನರು ಗಂಭೀರವಾದಂತೆ ಕಾಣುತ್ತಿಲ್ಲ. ನಾಳೆ ಯುಗಾದಿ ಹಬ್ಬ. ಸರ್ಕಾರ ಈ ಬಾರಿ ಯುಗಾದಿ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸುವಂತೆ ಕೋರಿದೆ. ಹೀಗಿದ್ದರೂ ಜನರು ಹಬ್ಬದ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಎಲ್ಲ ಜಿಲ್ಲೆಗಳಲ್ಲೂ ಖರೀದಿ ಜೋರು:
ಲಾಕ್ಡೌನ್ ಆದೇಶ ಹೊರತಾಗಿಯೂ ಇಂದು ಮುಂಜಾನೆಯಿಂದಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ನಗರದ ಮಾರುಕಟ್ಟೆಗಳಿಗೆ ತೆರಳಿ ಜನರು ಹೂವು ಹಣ್ಣು ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಕೊರೋನಾ ವೈರಸ್ಗೆ ಡೋಂಟ್ ಕೇರ್ ಎನ್ನುವ ಮೂಲಕ ತಾವು ಬೇಕಿದ್ದರೆ ಸಾಯಲು ಸಿದ್ಧರಿದ್ದೇವೆ ಆದರೆ ಎಂದಿಗೂ ಬದಲಾಗುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಸುಲಭವಾಗಿ ಹರಡಬಹುದು
ಜನಸಂದಣಿ ಸೇರಿದ ಭಾಗದಲ್ಲಿ ಕೊರೋನಾ ಸುಲಭವಾಗಿ ಹರಡಬಹುದು. ಈ ಕಾರಣಕ್ಕಾಗಿಯೇ ಸರ್ಕಾರ ಲಾಕ್ಡೌನ್ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ ಮನೆಯಲ್ಲೇ ಇರುವಂತೆ ಕೋರಿದೆ. ಆದರೆ, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಜನರು ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಮಾಡಿಕೊಂಡು ಹಾಯಾಗಿ ತಿರುಗಾಡುತ್ತಿದ್ದಾರೆ. ಇದರಿಂದ ಕೊರೋನಾ ವೈರಸ್ ಸುಲಭವಾಗಿ ಹರಡಬಹುದು.
ಊರಿಗೆ ದಂಡಿಯಾಗಿ ಹೊರಟ ಜನತೆ
ಬೆಂಗಳೂರಿನಲ್ಲಿ ಸಾಕಷ್ಟು ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಹೀಗಾಗಿ ಕೊರೋನಾ ವೈರಸ್ ಹರಡದಂತೆ ನೋಡಿಕೊಳ್ಳಲು ಬಸ್ಗಳ ಸಂಚಾರ ಸ್ಥಗಿತ ಮಾಡಿದೆ. ಆದಾಗ್ಯೂ ನಿನ್ನೆ ಬೆಂಗಳೂರಿನಿಂದ ಜನರು ದಂಡಿ ದಂಡಿಯಾಗೆ ತಮ್ಮ ಊರುಗಳಿಗೆ ಖಾಸಗಿ ವಾಹನಗಳಲ್ಲಿ ತೆರಳಿದ ದೃಶ್ಯ ಕಂಡುಬಂತು.
ಒಂದೊಮ್ಮೆ ಬೆಂಗಳೂರಿನಿಂದ ತೆರಳಿದ ಜನರಲ್ಲಿ ಕೊರೋನಾ ಇದ್ದರೆ ಅದು ಬೇರೆ ಊರುಗಳಿಗೂ ಹಬ್ಬುವ ಸಾಧ್ಯತೆ ಇರುತ್ತದೆ. ಬೆಂಗಳೂರಿನಲ್ಲಾದರೆ ಸುಲಭವಾಗಿ ಚಿಕಿತ್ಸೆ ಸಿಗಬಹುದು. ಆದರೆ, ಹಳ್ಳಿಗಳಿಗೂ ಕೊರೋನಾ ತಲುಪಿದರೆ ಅದಕ್ಕೆ ಚಿಕಿತ್ಸೆ ನೀಡುವುದು ಹೊಸ ಸವಾಲಾಗಬಹುದು.
ಕಂಪನಿಗಳಲ್ಲಿಲ್ಲ ಕಠಿಣ ಆದೇಶ:
ಕೊರೋನಾ ವೈರಸ್ ಹರಡದಂತೆ ತಡೆಯಲು ಮನೆಯಲ್ಲೇ ಉಳಿಯಬೇಕು. ಹೀಗಾಗಿ ಬಹುತೇಕ ಕಂಪನಿಗಳು ವರ್ಕ್ ಫ್ರಾಮ್ ಹೋಮ್ ಆಪ್ಶನ್ ಕೊಟ್ಟಿವೆ. ಇದರ ದುರ್ಬಳಕೆ ಮಾಡಿಕೊಂಡ ಅನೇಕರು ತಮ್ಮತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಕಂಪನಿಗಳು ಕಟ್ಟುನಿಟ್ಟಿನ ನಿಯಮ ತರುವಲ್ಲಿ ವಿಫಲವಾಗಿವೆ. ಇದು ಕೂಡ ಕೊರೋನಾ ಹರಡಲು ಪ್ರಮುಖ ಕಾರಣವಾಗಬುದು.
ಸರ್ಕಾರ ಎಚ್ಚೆತ್ತುಕೊಂಡಿದೆ, ನಾವು ಎಚ್ಚೆತ್ತುಕೊಳ್ಳೋಣ
ಕೊರೋನಾ ವೈರಸ್ ಹಬ್ಬಲು ತಾವು ಮಾಡಿದ ನಿರ್ಲಕ್ಷ್ಯವೇ ಕಾರಣ ಎಂದು ಇಟಲಿ ಹಾಗೂ ಚೀನಾ ಸರ್ಕಾರ ಒಪ್ಪಿಕೊಂಡಿದೆ. ಬೇರೆ ದೇಶಗಳು ಮಾಡಿದ ತಪ್ಪಿನಿಂದ ಅನೇಕ ರಾಷ್ಟ್ರಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳುತ್ತಿವೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಸರ್ಕಾರ ಎಷ್ಟೇ ಮುಂಜಾಗೃತ ಕ್ರಮ ಕೈಗೊಂಡರೂ ಜನರ ಸಹಕಾರವಿಲ್ಲದೆ ಅದನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಚೀನಾ, ಇಟಲಿ ಮಾದರಿಯ ಪರಿಸ್ಥಿತಿ ಬಂದೊದಗುವ ಮುನ್ನ ನಾವು ಎಚ್ಚೆತ್ತುಕೊಳ್ಳೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ