ಕೊಪ್ಪಳ(ಮೇ.12): ರಾಜ್ಯದ ಪ್ರತಿಯೊಬ್ಬ ಬಡವನು ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಲಾಕ್‌ಡೌನ್ ಪರಿಹಾರವಾಗಿ ಇತ್ತೀಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡಿದೆ. ಆದರೆ, ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಮೇ 6 ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಗದಗ ನಗರ ಠಾಣೆ ಪೊಲೀಸರು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿಯೊಂದನ್ನು ಕಳಸಾಪುರ ರಿಂಗ್ ರಸ್ತೆಯಲ್ಲಿ ತಡೆಯುತ್ತಾರೆ. ಲಾರಿ ಚಾಲಕ ಸೋಮಲಿಂಗಪ್ಪ ಶಿರೂರನ್ನು ವಿಚಾರಿಸಿದಾಗ ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ಕಿರಣ್ ಟ್ರೇಡರ್ಸ್‌ನಿಂದ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್‌ಗೆ ಸುಮಾರು 600 ಚೀಲ (ಚೀಲವೊಂದರಲ್ಲಿ 50 ಕೆಜಿ ಅಕ್ಕಿ) ಅಂದರೆ 7.35 ಲಕ್ಷ ರೂಪಾಯಿ ಮೌಲ್ಯದ 300 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುತ್ತಿರುವುದು ಬಯಲಿಗೆ ಬಂದಿದೆ.
ಈ ಕುರಿತು ವಿಚಾರಣೆ ನೆಪದಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡಿರುವ ಪೊಲೀಸ್ ಅಧಿಕಾರಿಗಳು ಸಂಜೆ ಹೊತ್ತಿಗೆ ಲಾರಿ ಚಾಲಕ ಸೋಮಲಿಂಗಪ್ಪ ಶಿರೂರು ಹಾಗೂ ಕೊಪ್ಪಳದ ಕಿರಣ್ ಟ್ರೇಡರ್ಸ್‌ನ ಅಬ್ದುಲ್ ರೆಹಮಾನ್ ಮುನ್ಷಿಯನ್ನು ನ್ಯಾಯಾಂಗದ ವಶಕ್ಕೆ ನೀಡಿ ಎಫ್ಐಆರ್ ದಾಖಲಿಸಿದ್ದಾರೆ.
ಅಧಿಕಾರಿಗಳ ಮೇಲೆ ಅನುಮಾನ:
ಇಷ್ಟು ದೊಡ್ಡ ಮೊತ್ತದ ಅಕ್ಕಿಯನ್ನು ಅಧಿಕಾರಿಗಳ ಸಹಕಾರವಿಲ್ಲದೇ ಪಡಿತರ ಕೇಂದ್ರದಿಂದಾಗಲೀ ಅಥವಾ ಭಾರತೀಯ ಆಹಾರ ನಿಗಮದ ಗೋದಾಮನಿಂದ ಖಾಸಗಿ ವ್ಯಕ್ತಿಗಳ ಗೋದಾಮಗೆ ಸಾಗಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ.
ಇದರಲ್ಲಿ ಪೊಲೀಸರು ಶಾಮೀಲಾದರೆ ಕಾಟಾಚಾರದ ತನಿಖೆ ನಡೆಸಿ ಚಾರ್ಜ್‌ಶೀಟ್‌ನಲ್ಲಿ (ದೋಷಾರೋಪಣೆ ಪಟ್ಟಿಯಲ್ಲಿ) ಖುಲಾಸೆಯಾಗಲು ಸಹಕಾರಿಯಾಗುವ ಅಂಶಗಳನ್ನು ಸೇರಿಸಿ ಬಡವರ ಅನ್ನ ಕಸಿದು ಮಾರಾಟ ಮಾಡುವವರನ್ನು ರಾಜಾರೋಷವಾಗಿ ನಿರ್ದೋಷಿ ಪಟ್ಟ ಕಟ್ಟಬಹುದು.
ಪೊಲೀಸರ ಮೇಲೂ ಅನುಮಾನ.! :
ಈ ಪ್ರಕರಣದಲ್ಲಿ ಪೊಲೀಸರ ಮೇಲೂ ಅನುಮಾನ ಶುರುವಾಗಿದೆ. ಯಾಕೆಂದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್‌ನಲ್ಲಿ ಕೊಪ್ಪಳದ ಕಿರಣ್ ಟ್ರೇಡರ್ಸ್ ಹೆಸರಿದೆ. ಆದರೆ, ಎಲ್ಲೂ ಸಹ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್ ಹೆಸರಿಲ್ಲ. ಬಡವರ ಅನ್ನಭಾಗ್ಯವನ್ನ ಕಸಿದುಕೊಂಡದ್ದು ಎಷ್ಟು ಅಪರಾಧವೊ ಅದನ್ನ ಖರೀದಿಸುವುದು ಸಹ ಅಷ್ಟೇ ಅಪರಾಧ ಎನ್ನುವ ಅಂಶವನ್ನು ಪೊಲೀಸರು ಮರೆತಂತಿದೆ. ಅಥವಾ ಉದ್ದೇಶಪೂರ್ವಕವಾಗಿ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್‌ನ ಹೆಸರನ್ನ ಮರೆ ಮಾಚಿರುವ ಸಾಧ್ಯತೆಯೂ ಇದೆ.
ಈ ಬಗ್ಗೆ ಪ್ರಶ್ನಿಸಿದರೆ ಎಲ್ಲವನ್ನೂ ಎಫ್ಐಆರ್‌ನಲ್ಲೇ ದಾಖಲಿಸಬೇಕು ಅಂತೇನಿಲ್ಲ. ಎಫ್ಐಆರ್ ದಾಖಲಾದ 90 ದಿನಗಳೊಳಗೆ ಚಾರ್ಜ್ ಶೀಟ್‌ನ್ನು ಕೋರ್ಟ್‌ಗೆ ಸಲ್ಲಿಸಬೇಕು. ಆ ದೋಷಾರೋಪಣೆ ಪಟ್ಟಿಯಲ್ಲಿ ಎಲ್ಲ ಅಂಶಗಳನ್ನು ದಾಖಲಿಸುತ್ತೇವೆ ಎನ್ನುವ ಜಾಣ್ಮೆ ಉತ್ತರ ಪೊಲೀಸ್ ಇಲಾಖೆಯದಾಗಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ಜನಪ್ರತಿನಿಧಿಗಳ ಕಸದ ಕಿತ್ತಾಟ ; ಶಾಸಕ, ಸಂಸದರ ಜಟಾಪಟಿಗೆ ಮಾಜಿ ಶಾಸಕರ ಎಂಟ್ರಿ
ಕೊಪ್ಪಳ ಜಿಲ್ಲೆಯಿಂದ ಸರಕಾರದ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ವಿಚಾರವೂ ಗೊತ್ತಿಲ್ಲ. ಈ ಬಗ್ಗೆ ಗದಗ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ನನಗೆ ಗೊತ್ತಿಲ್ಲ. ಜೊತೆಗೆ ಯಾವ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ, ನಮ್ಮಿಂದ ಮಾಹಿತಿ ಪಡೆದಿಲ್ಲ. ಕಿರಣ್ ಟ್ರೇಡರ್ಸ್ ಮೇಲೆ ದಾಳಿ ನಡೆಯೋದು ಖಚಿತ. ಮಾಲೀಕ ಯಾವನೇ ಆಗಿರಲಿ, ಅವನ ವಿರುದ್ಧ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ನಾರಾಯಣರಡ್ಡಿ ಕನಕರಡ್ಡಿ ಹೇಳುತ್ತಾರೆ.
(ವರದಿ : ಬಸವರಾಜ ಕರುಗಲ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ