ಕೊರೋನಾ ವೇಳೆಯಲ್ಲಿಯೂ ಕಾಳಸಂತೆಕೋರರ ಅಟ್ಟಹಾಸ ; 1200 ಕ್ವಿಂಟಲ್ ಪಡಿತರ ಅಕ್ಕಿ ವಶ

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕಲಬುರ್ಗಿಯ ಎರಡು ಕಡೆ ದಾಳಿ ಮಾಡಲಾಗಿದೆ. ಎಪಿಎಂಸಿ ಹಾಗೂ ಫಿಲ್ಟರ್ ಬೆಡ್ ಪ್ರದೇಶದ ತಾಜ್ ನಗರ ಗಳಲ್ಲಿ ದಾಳಿ ಮಾಡಲಾಗಿದೆ.

ಪಡಿತರ ಅಕ್ಕಿ

ಪಡಿತರ ಅಕ್ಕಿ

 • Share this:
  ಕಲಬುರ್ಗಿ(ಮೇ.11): ಲಾಕ್ ಡೌನ್ ವೇಳೆಯಲ್ಲಿ ಬಡವರಿಗೆ ತೊಂದರೆಯಾಗಬಾರೆಂದು ಸರ್ಕಾರ ಎರಡೂ ತಿಂಗಳ ಪಡಿತರ ಅಕ್ಕಿಯನ್ನು ಒಮ್ಮೆಯೇ ವಿತರಿಸಿದೆ. ಆದರೆ, ಇಂತಹ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಾಳಸಂತೆಕೋರರು ಮಾತ್ರ ತಮ್ಮ ಚಾಳಿ ಬಿಟ್ಟಿಲ್ಲ. ಎರಡು ತಿಂಗಳಿಗೆ ಏಕಕಾಲಕ್ಕೆ ನೀಡಲಾಗಿದ್ದ ಪಡಿತರ ಅಕ್ಕಿಯಲ್ಲಿಯೇ ಅವ್ಯವಹಾರ ಮಾಡಿ, ಅಕ್ರಮವಾಗಿ ಸಂಗ್ರಹಿಸಿಟ್ಟ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ. ಕಲಬುರ್ಗಿಯ ಎಪಿಎಂಸಿ ಹಾಗೂ ಫಿಲ್ಟರ್ ಬೆಡ್ ಏರಿಯಾದಲ್ಲಿ ದಾಳಿ ಮಾಡಿ ಸಾವಿರಾರು ಕ್ವಿಂಟಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

  ಕೊರೋನಾ ನಿಯಂತ್ರಣಕ್ಕಾಗಿ ದೇಶದೆಲ್ಲೆಡೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ಕಾರಣದಿಂದಾಗಿ ಕೆಲಸವಿಲ್ಲದೆ, ಜನರಿಗೆ ರೇಷನ್ ಖರೀದಿಗೆ ದುಡ್ಡಿಲ್ಲದೆ ಸಂಕಷ್ಟಕ್ಕೆ ಗುರಿಯಾಗಬಾರದೆಂದು ಕೇಂದ್ರ ಸರ್ಕಾರ ಎರಡು ತಿಂಗಳ ಪಡಿತರವನ್ನು ಒಮ್ಮೆಗೆ ಉಚಿತವಾಗಿ ನೀಡಲು ತೀರ್ಮಾನಿಸಿತ್ತು. ಅದಕ್ಕೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತವಾಗಿ ಹಂಚಿಕೆಯನ್ನೂ ಮಾಡಿತ್ತು. ಆದರೆ ಕಾಳಸಂತೆಕೋರರು ಮಾತ್ರ ಕೊರೋನಾ ಸಂಕಷ್ಟದಲ್ಲಿಯೂ ತಮ್ಮ ಚಾಳಿ ಬಿಟ್ಟಿಲ್ಲ. ಬಡವರಿಗೆ ಉಚಿತವಾಗಿ ಸಿಗಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ.

  ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕಲಬುರ್ಗಿಯ ಎರಡು ಕಡೆ ದಾಳಿ ಮಾಡಲಾಗಿದೆ. ಎಪಿಎಂಸಿ ಹಾಗೂ ಫಿಲ್ಟರ್ ಬೆಡ್ ಪ್ರದೇಶದ ತಾಜ್ ನಗರಗಳಲ್ಲಿ ದಾಳಿ ಮಾಡಲಾಗಿದೆ. ತಾಜ್ ನಗರದಲ್ಲಿ ಸುಮಾರು 900 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾದರೆ, ಎಪಿಎಂಸಿಯ ಗೋದಾಮನಲ್ಲಿ ಸುಮಾರು 300 ಕ್ವಿಂಟಲ್ ಅಕ್ಕಿ ದಾಸ್ತಾನು ಪತ್ತೆಯಾಗಿದೆ.

  ಬಡವರಿಗೆ ಹಂಚಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು, ಕಾಳಸಂತೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಠಿಮ ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ದೇವೇಂದ್ರಪ್ಪ ಎಚ್ಚರಿಸಿದ್ದಾರೆ.

  ಹೀಗೆ ಸಂಗ್ರಹಿಸಿಟ್ಟ ಅಕ್ಕಿಯನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಲಾಕ್ ಡೌನ್ ವೇಲೆಯಲ್ಲಿ ಬಡವರಿಗೆ ನೆರವಾಗಲೆಂದು ಬಿಡುಗಡೆ ಮಾಡಿದ ಅಕ್ಕಿಯೂ ಕಾಳಸಂತೆಕೋರರ ಹೊಟ್ಟೆಗೆ ಸೇರುತ್ತಿವೆ. ಅಕ್ರಮ ಎಸಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದೆ.

  ಇದನ್ನೂ ಓದಿ : ಶಾಂತವಾಗಿದ್ದ ಉತ್ತರ ಕನ್ನಡದಲ್ಲಿ ಕೊರೋನಾ ರುದ್ರನರ್ತನ; ಮೂರೇ ದಿನದಲ್ಲಿ 28 ಪಾಸಿಟಿವ್ ಪ್ರಕರಣ

  ಮತ್ತೊಂದೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟ ಗೋದಾಮುಗಳಿಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರರ ಮತ್ತಿತರ ಮುಖಂಡರು ಭೇಟಿಯಾಗಿದ್ದಾರೆ. ಬಡವರಿಗೆ ಸೇರಬೇಕಾದ ಅಕ್ಕಿಯನ್ನು ಲೂಟಿ ಮಾಡಲು ಮುಂದಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
  First published: