ನವದೆಹಲಿ (ಮಾ.09): ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಣಾಂತಿಕ ಕೊರೋನಾ ವೈರಸ್ಗೆ ಲಕ್ಷಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, 3,800 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿಯೂ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಈವರೆಗೆ 43 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಕೇರಳದ ಮೂರು ವರ್ಷದ ಕಂದಮ್ಮ ಕೂಡ ಈ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ತಮ್ಮ ಪೋಷಕರೊಂದಿಗೆ ಇಟಲಿಗೆ ತೆರಳಿದ್ದ ಈ ಮಗು ಶನಿವಾರ ಕೇರಳಕ್ಕೆ ವಾಪಸ್ಸಾಗಿತ್ತು. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಗು ಸೇರಿದಂತೆ ಪೋಷಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೊರೋನಾ ಸೋಂಕು ಮಗುವಲ್ಲಿ ದೃಢಪಟ್ಟಿದೆ. ಅವರ ತಂದೆ-ತಾಯಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗಿದೆ. ಈ ಮೂಲಕ ಕೇರಳದಲ್ಲಿ ಪತ್ತೆಯಾದ ಆರನೇ ಪ್ರಕರಣ ಇದಾಗಿದೆ.
ಕೇರಳದ ಪತ್ತನಮ್ತಿಟ್ಟ ಜಿಲ್ಲೆಯಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಸಾರ್ವಜನಿಕ ಸಮಾರಂಭಗಳನ್ನು ಕೂಡ ರದ್ದು ಮಾಡಲಾಗಿದ್ದು, ಫೆ. 28ರವರೆಗೆ ಕತಾರ್-ದೋಹಾದಿಂದ ಆಗಮಿಸಿದ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಕೂಡ ಮೊದಲ ಕೊರೋನಾ ಸೋಂಕಿತ ಪ್ರಕರಣ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 63 ವರ್ಷದ ವೃದ್ಧೆ ಕೊರೋನಾಗೆ ತುತ್ತಾಗಿದ್ದಾರೆ. ಇರಾನ್ಗೆ ಪ್ರವಾಸ ಬೆಳಸಿದ್ದ ಇವರಲ್ಲಿ ಸೋಂಕಿನ ಲಕ್ಷಣಗಳು ಯಥೇಚ್ಛವಾಗಿದ್ದವು. ಸದ್ಯ ಅವರನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಗೌಪ್ಯ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಇದನ್ನು ಓದಿ: ಹೆಚ್ಚಿದ ಕೊರೋನಾ ಭೀತಿ; ಬಾಂಗ್ಲಾದೇಶದಲ್ಲಿನ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ರದ್ದು
ಶನಿವಾರ ತಮಿಳುನಾಡು ವ್ಯಕ್ತಿ ಕೊರೋನಾ ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೇ ಇನ್ನಿಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಮೇರಿಕದಿಂದ ಬಂದ ಈ ಇಬ್ಬರಲ್ಲಿ ಸದ್ಯ ಯಾವುದೇ ಕೊರೋನಾ ಸೋಂಕು ಇಲ್ಲ ಎಂದು ತಮಿಳು ನಾಡು ಆರೋಗ್ಯ ಸಚಿವ ಡಾ. ಸಿ ವಿಜಯಭಾಸ್ಕರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಮೇಘಾಲಯದಲ್ಲಿ ಕೂಡ ಓರ್ವ ಶಂಕಿತ ಪ್ರಕರಣ ಪತ್ತೆಯಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಇದೇ ವೇಳೆ, ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,800 ದಾಟಿದೆ. 1.1 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಬಾಧೆ ಇದೆ. ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಅಡಿ ಇಟ್ಟಿದ್ದ ಕೊರೋನಾ ಈಗ ಅಲ್ಲಿ ಏಳು ಮಂದಿಗೆ ಆವರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ