ಚಾಮರಾಜನಗರ(ಮಾ.20): ಕೊರೋನಾ ಭೀತಿಗೆ ಒಳಗಾಗಿರುವ ಫಿಲಿಫೈನ್ಸ್ ನಿಂದ ವಾಪಸ್ ಬರಲಾಗದೆ ಕೊಳ್ಳೇಗಾಲ ಹಾಗೂ ಬೆಂಗಳೂರಿನ ವಿದ್ಯಾರ್ಥಿನಿಯರಿಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ರಶ್ಮಿ ಬೆಂಗಳೂರಿನ ಸಹನಾ ಫಿಲಿಫೈನ್ಸ್ ದೇಶದಲ್ಲಿ ಕಳೆದ 2 ವರ್ಷಗಳಿಂದ ಮೆಡಿಸಿನ್ ತರಬೇತಿ ಪಡೆಯುತ್ತಿದ್ದಾರೆ .
ಇದೀಗ ಫಿಲಿಫೈನ್ಸ್ ದೇಶದಲ್ಲಿ ಕೊರೋನಾ ಹರಡತೊಡಗಿದ್ದು 180ಕ್ಕೂ ಹೆಚ್ಚು ಮಂದಿಗೆ
ಕೊರೊನಾ ಸೋಂಕು ತಗುಲಿದೆ. ಅಲ್ಲಿನ ಸರ್ಕಾರ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಿದೆ. ಕೊರೋನಾ ಭೀತಿಯಿಂದ ಕಳೆದ ಮೂರು ದಿನಗಳಿಂದ ಫಿಲಿಫೈನ್ಸ್ ದೇಶ ಲಾಕ್ ಡೌನ್ ಆಗಿದೆ. ಕಳೆದ ಮೂರು ದಿನಗಳಿಂದ ತಾವು ಮನೆಯಲ್ಲೇ ಇದ್ದು ಎಲ್ಲಿಗೂ ಹೋಗುವಂತಿಲ್ಲ ಜೈಲೇ ಎಷ್ಟೋ ವಾಸಿ ಎನ್ನಿಸಿಬಿಟ್ಟಿದೆ ಎಂದು ಈ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಭಾರತಕ್ಕೆ ಮರಳಲು ತಮಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದೆವು. ಆದರೆ ಭಾರತ ಸರ್ಕಾರ ಏಕಾಏಕಿ ವಿಮಾನ ಯಾನ ರದ್ದುಗೊಳಿಸಿದೆ. ಹಾಗಾಗಿ ಇಲ್ಲಿಂದ ಬರಲಾಗದೆ ತಾವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಫಿಲಿಪೈನ್ಸ್ ನಲ್ಲಿ ಪರದಾಡುವಂತಾಗಿದೆ ಎಂದು ಈ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ
ಫಿಲಿಫೈನ್ಸ್ ನಿಂದಲೇ ವಿಡಿಯೋ ಮಾಡಿ ಕಳುಹಿಸಿರುವ ಈ ವಿದ್ಯಾರ್ಥಿನಿಯರು ದಯಮಾಡಿ ತಮನ್ನು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಎಂದು ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ :
ಕೆಎಫ್ಡಿ ಭೀತಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಓಡಿಹೋದ ಸೋಂಕಿತ ಮಹಿಳೆ; ಪೇಚಿಗೆ ಸಿಕ್ಕ ಸಿಬ್ಬಂದಿ
ಈ ನಡುವೆ ವಿದ್ಯಾರ್ಥಿನಿ ರಶ್ಮಿ ಅವರ ತಂದೆ ಕೊಳ್ಳೇಗಾಲದ ಸಿದ್ದಲಿಂಗೇಗೌಡ,
'ಕೈ ಮುಗಿದು ಕೇಳುತ್ತೇವೆ ನಮ್ಮ ಮಗಳನ್ನ ಭಾರತಕ್ಕೆ ವಾಪಸ್ಸು ಕರೆಸಿಕೊಡಿ' ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ