ಕೊರೋನಾ ಭೀತಿ: ಬಾದಾಮಿಯಲ್ಲಿ ಪ್ರವಾಸಿಗರಿಲ್ಲದೆ ಆಹಾರಕ್ಕಾಗಿ ಪರದಾಡುತ್ತಿರುವ ಮಂಗಗಳು

ಇಲ್ಲಿಗೆ ಬರುವ ದೇಶ-ವಿದೇಶಗಳ ಪ್ರವಾಸಿಗರು ಕೋತಿಗಳಿಗೆ ಆಹಾರ ನೀಡುತ್ತಿದ್ದರು. ಇದೀಗ ಪ್ರವಾಸಿಗರು ಬಾರದಿದ್ದಕ್ಕೆ ತುತ್ತು ಅನ್ನಕ್ಕೂ ಕೋತಿಗಳು ಪರದಾಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಾಗಲಕೋಟೆ(ಮಾ.20) : ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಐತಿಹಾಸಿಕ ತಾಣಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೊರೋನಾ ವೈರಸ್ ಎಫೆಕ್ಟ್ ಕೇವಲ ಜನಸಾಮಾನ್ಯರಿಗೆ ಮಾತ್ರ ತಟ್ಟಿಲ್ಲ. ಮೂಕ ಪ್ರಾಣಿಗಳಿಗೂ ತಟ್ಟಿದೆ. ಐತಿಹಾಸಿಕ ತಾಣ ಬಾದಾಮಿಯಲ್ಲಿ ಸಾವಿರಾರು ಕೋತಿಗಳು ಆಹಾರಕ್ಕಾಗಿ ಪರದಾಡುತ್ತಿವೆ.


  ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದಕ್ಕೆ ಮೂಕ ಪ್ರಾಣಿಗಳು ಹೊರತಾಗಿಲ್ಲ. ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.

  ಐತಿಹಾಸಿಕ ಬಾದಾಮಿ ಗುಹಾಂತರ ದೇಗುಲ ಮ್ಯೂಸಿಯಂ ಬಳಿ ಸಾವಿರಕ್ಕೂ ಹೆಚ್ಚು ಕೋತಿಗಳಿವೆ. ಇಲ್ಲಿಗೆ ಬರುವ ದೇಶ-ವಿದೇಶಗಳ ಪ್ರವಾಸಿಗರು ಕೋತಿಗಳಿಗೆ ಆಹಾರ ನೀಡುತ್ತಿದ್ದರು. ಇದೀಗ ಪ್ರವಾಸಿಗರು ಬಾರದಿದ್ದಕ್ಕೆ ತುತ್ತು ಅನ್ನಕ್ಕೂ ಕೋತಿಗಳು ಪರದಾಡುವಂತಾಗಿದೆ.

  ಇನ್ನು ಕೋತಿಗಳ ಪರದಾಟ ಕಂಡು ಸ್ಥಳೀಯ ಕೆಲ ಯುವಕರು ಕೋತಿಗಳಿಗೆ ಬಿಸ್ಕತ್ತು ನೀಡಿ ಮಾನವೀಯತೆ ತೋರಿದ್ದಾರೆ. ಇನ್ನು ಕೋತಿಗಳಲ್ಲಿ ಬೇರೆ ಬೇರೆ ಗುಂಪುಗಳಿದ್ದು. ಆಯಾ ಏರಿಯಾಗೆ ಮತ್ತೊಂದು ಗುಂಪು ಹೋಗುವುದಿಲ್ಲ. ಆಹಾರಕ್ಕೆ ಅರಸಿ ಹೋದರೇ ಕೋತಿಗಳ ಮಧ್ಯೆ ಕಚ್ಚಾಟ ಶುರುವಾಗಿ ಗಾಯಗಳಾಗುತ್ತಿವೆ.

  ಮಾರ್ಚ್ 15ರಿಂದ ಐತಿಹಾಸಿಕ ಬಾದಾಮಿ ಗುಹಾಂತರ ದೇಗುಲ ಮ್ಯೂಸಿಯಂಗೆ ಬೀಗ ಹಾಕಲಾಗಿದೆ. ಕೇವಲ ಭದ್ರತಾ ಸಿಬ್ಬಂದಿಗಳೇ ಕಾವಲು ಕಾಯುತ್ತಿದ್ದಾರೆ. ಆದರೆ ಗುಡ್ಡದಲ್ಲಿರುವ ಕೋತಿಗಳು ಆಹಾರವಿಲ್ಲದೆ ಬಳಲಿ ಶೋಚನೀಯ ಸ್ಥಿತಿಯಲ್ಲಿವೆ.

  ಇದನ್ನೂ ಓದಿ :  ಕೊರೋನಾ ಭೀತಿ: ಸರಳವಾಗಿ ಮಗಳ ಮದುವೆ ಮಾಡಿ ಮಾದರಿಯಾದ ಮಾಜಿ ಶಾಸಕ

  ಜಿಲ್ಲಾಡಳಿತ, ಅರಣ್ಯ ಇಲಾಖೆ, ಪುರಾತತ್ವ ಇಲಾಖೆ ಅಧಿಕಾರಿಗಳು ಕೋತಿಗಳಿಗೆ ಆಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ..

  ಒಟ್ಟಿನಲ್ಲಿ ಕೊರೋನಾ ಪರಿಣಾಮ ಮೂಕ ಪ್ರಾಣಿಗಳಿಗೂ ತಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಕೋತಿಗಳಿಗೆ ಆಹಾರ ವ್ಯವಸ್ಥೆ ಕಲ್ಪಿಸಿ, ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಿದೆ.

   (ವರದಿ : ರಾಚಪ್ಪ ಬನ್ನಿದಿನ್ನಿ)
  First published: