• Home
  • »
  • News
  • »
  • coronavirus-latest-news
  • »
  • Coronavirus: ಮಾನಸಿಕ ತಜ್ಞರ ಬಳಿ ಸಹಾಯ ಕೇಳ್ತಿದ್ದಾರೆ ಕೋವಿಡ್ ವೈದ್ಯರು, ರೋಗಿಗಳ ಸಾವು ಇವರನ್ನು ತಲ್ಲಣಗೊಳಿಸುತ್ತಿದೆ !

Coronavirus: ಮಾನಸಿಕ ತಜ್ಞರ ಬಳಿ ಸಹಾಯ ಕೇಳ್ತಿದ್ದಾರೆ ಕೋವಿಡ್ ವೈದ್ಯರು, ರೋಗಿಗಳ ಸಾವು ಇವರನ್ನು ತಲ್ಲಣಗೊಳಿಸುತ್ತಿದೆ !

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವೈದ್ಯರೆಲ್ಲಾ ವಿಪರೀತ ಮಾನಸಿಕ ಒತ್ತಡದಲ್ಲಿದ್ದಾರೆ, ಸುಸ್ತಾಗಿದ್ದಾರೆ, ಸದಾ ಆತಂಕದಲ್ಲಿರ್ತಾರೆ ಜೊತೆಗೆ ನಿದ್ರಾಹೀನತೆ ಮತ್ತು ಸುಸ್ತಿನಿಂದಲೂ ಬಳಲುತ್ತಿದ್ದಾರೆ. ಕೆಲವರಂತೂ ಐಸಿಯುಗಳಲ್ಲೇ ಕುಸಿದು ಕುಳಿತು ಅಲ್ಲೇ ಒಂದು ಮಾತ್ರೆ ನುಂಗಿ ಸುಧಾರಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗುವಂಥಾ ಉದಾಹರಣೆಗಳೂ ಸಾಕಷ್ಟಿವೆ.

ಮುಂದೆ ಓದಿ ...
  • Share this:

Covid Effect: ಇಡೀ ಪ್ರಪಂಚವೇ ನಡುಗುವಂತೆ ಮಾಡಿರೋ ಕೊರೊನಾ ವೈರಸ್ ಜೊತೆ ಪ್ರತಿದಿನ ಮುಖಾಮುಖಿಯಾಗೋದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ. ಇದೆಲ್ಲದ್ರಿಂದ ಕೋವಿಡ್ ಡ್ಯೂಟಿಯಲ್ಲಿರುವ ವೈದ್ಯರ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ಎಷ್ಟರಮಟ್ಟಿಗೆ ಅಂದ್ರೆ ಮಾನಸಿಕ ತಜ್ಞರನ್ನು ಕಂಡು ಅವರ ಸಹಾಯ ಪಡಯಬೇಕಾದ ಪರಿಸ್ಥಿತಿ ತಲುಪಿದ್ದಾರೆ ವೈದ್ಯರು.


ಸಾವು ವೈದ್ಯರಿಗೆ ಚಿರಪರಿಚಿತ, ಆದ್ರೆ ಈಗ ಎಲ್ಲೆಡೆ ನಡೆಯುತ್ತಿರುವುದು ಮೃತ್ಯುನರ್ತನ. “ಬೆಳಗ್ಗೆಯಷ್ಟೇ ರೋಗಿಯನ್ನು ಗಮನಿಸಿ, ನಿಮ್ಮ ಆರೋಗ್ಯ ಸುಧಾರಿಸ್ತಿದೆ..ಬೇಗನೇ ಮನೆಗೆ ಹೋಗುವ ದಿನ ಬರುತ್ತೆ ಅಂತ ರೋಗಿಗೆ ಭರವಸೆ ನೀಡಿರುತ್ತೇನೆ. ಸಂಜೆ ಡ್ಯೂಟಿ ಮುಗಿಸಿ ಹೋಗುವುದರೊಳಗಾಗಿ ಆ ರೋಗಿಯ ಆರೋಗ್ಯ ಧಿಡೀರನೆ ಹದಗೆಟ್ಟು ಸಾವನ್ನಪ್ಪಿಬಿಟ್ಟಿರುತ್ತಾರೆ. ಇದನ್ನು ನೋಡಿ ನನಗೆ ಬಹಳ ಅಸಹಾಯಕತೆ ತೋರುತ್ತದೆ” ಎಂದು ಬೇಸರದಿಂದಲೇ ನುಡಿಯುತ್ತಾರೆ ಮಂಗಳೂರಿನ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿಯಲ್ಲಿ ಅನಸ್ತೇಸಿಯಾ ವಿಚಾರದಲ್ಲಿ ಸ್ನಾತ್ತಕೋತ್ತರ ಪದವಿ ಮಾಡುತ್ತಿರುವ, ಸದ್ಯ ಆಸ್ಪತ್ರೆಯ ವೆಂಟಿಲೇಟರ್ ವಿಭಾಗ ಮತ್ತು ಕೋವಿಡ್ ಐಸಿಯುನಲ್ಲಿ ಕೆಲಸ ಮಾಡುತ್ತಿರುವ ಡಾ ಕೀರ್ತಿ ಕರ್ನೂಲ್.


ಎರಡನೇ ಅಲೆ ಇರುತ್ತೆ ಎನ್ನುವುದು ನಮಗೆ ಗೊತ್ತಿತ್ತು, ಆದ್ರೆ ಅದು ಇಷ್ಟು ತೀವ್ರವಾಗಿ ಬರಬಹುದು ಎನ್ನುವ ಅಂದಾಜಿರಲಿಲ್ಲ. ಹೆಚ್ಚು ಜನ ವೈರಸ್​ ಸಂಪರ್ಕಕ್ಕೆ ಬರುವುದನ್ನು ತಡೆಯಲು ಅತೀ ಕಡಿಮೆ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಪ್ರತೀ ವೈದ್ಯರೂ ಒಮ್ಮೆಗೆ 20ರಿಂದ 25 ರೋಗಿಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಇಡೀ ದಿನ ನಾನು ಪಿಪಿಇ ಕಿಟ್, ಮಾಸ್ಕ್​ ಧರಿಸಿಯೇ ಇರುತ್ತೇನೆ. ಉಸಿರುಗಟ್ಟಿದಂತೆನಿಸಿ ಬಹಳ ಆತಂಕವೆನಿಸುತ್ತದೆ. ಆ ದಿನದ ಕೆಲಸ ಮುಗಿಸಿ ಮನೆಗೆ ಹೋದ ನಂತರ ಸುಮ್ಮನೆ ಮಲಗಿದ್ರೆ ಸಾಕು ಎನಿಸುತ್ತದೆ. ಬೆಂಗಳೂರಿನಲ್ಲಿರುವ ತಂದೆ ತಾಯಿಗೆ ಕರೆ ಮಾಡಿ ನಾನು ಹುಷಾರಾಗಿದ್ದೇನೆ ಎಂದು ಹೇಳುವಷ್ಟೂ ಶಕ್ತಿ ನನ್ನಲ್ಲಿ ಉಳಿದಿರುವುದಿಲ್ಲ. ದಿನಕ್ಕೆ ಕಡಿಮೆ ಅಂದ್ರೂ ನಾಲ್ಕೈದು ರೋಗಿಗಳ ಸಾವು ನೋಡ್ತಿದ್ದೇನೆ…ಬೆಳಗ್ಗೆಯಷ್ಟೇ ನಗುತ್ತಿದ್ದ ರೋಗಿ ಸಂಜೆ ಹೊತ್ತಿಗೆ ಹೆಣವಾಗಿ ಪ್ಯಾಕ್ ಆಗಿ ಹೊರಬಂದಾಗ ನನ್ನ ತಲೆಯೊಳಗೆ ಏನೆಲ್ಲಾ ಆಲೋಚನೆಗಳು ಬರುತ್ತವೆ ಎನ್ನುವುದನ್ನು ನಾನು ವಿವರಿಸಲೂ ಸಾಧ್ಯವಿಲ್ಲ” ಎಂದು ಆತಂಕದಿಂದಲೇ ಹೇಳ್ತಾರೆ ಡಾ ಕೀರ್ತಿ.


ಇದನ್ನೂ ಓದಿhttps://kannada.news18.com/news/coronavirus-latest-news/not-just-visa-vaccine-passports-may-be-asked-for-international-travel-in-post-corona-world-557331.html


ಇದು ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ಬಹುತೇಕ ವೈದ್ಯರ ಪರಿಸ್ಥಿತಿ ಎಂದು ವಿವರಿಸ್ತಾರೆ ಹುಬ್ಬಳ್ಳಿಯ ಮಾನಸ್ ನರ್ಸಿಂಗ್ ಹೋಮ್​ನ ಹಿರಿಯ ಮನಶಾಸ್ತ್ರಜ್ಞ ಡಾ ಅಲೋಕ್ ಕುಲಕರ್ಣಿ. ತಮ್ಮದೇ ಸ್ನೇಹಿತರು, ಸಹಪಾಠಿಗಳು ಈಗ ಇವರ ಬಳಿ ಚಿಕಿತ್ಸೆಗಾಗಿ ಬರ್ತಿದ್ದಾರಂತೆ. ಈ ವೈದ್ಯರೆಲ್ಲಾ ವಿಪರೀತ ಮಾನಸಿಕ ಒತ್ತಡದಲ್ಲಿದ್ದಾರೆ, ಸುಸ್ತಾಗಿದ್ದಾರೆ, ಸದಾ ಆತಂಕದಲ್ಲಿರ್ತಾರೆ ಜೊತೆಗೆ ನಿದ್ರಾಹೀನತೆ ಮತ್ತು ಸುಸ್ತಿನಿಂದಲೂ ಬಳಲುತ್ತಿದ್ದಾರೆ. ಕೆಲವರಂತೂ ಐಸಿಯುಗಳಲ್ಲೇ ಕುಸಿದು ಕುಳಿತು ಅಲ್ಲೇ ಒಂದು ಮಾತ್ರೆ ನುಂಗಿ ಸುಧಾರಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗುವಂಥಾ ಉದಾಹರಣೆಗಳೂ ಸಾಕಷ್ಟಿವೆ. ನೂರಾರು ರೋಗಿಗಳಿಗೆ ಇನ್ಟ್ಯುಬೇಶನ್ ಮಾಡಿ ಅಭ್ಯಾಸವಿರುವ ಪರಿಚಿತ ವೈದ್ಯರೊಬ್ಬರು ಈಗ ರೋಗಿಗೆ ಚಿಕತ್ಸೆ ಕೊಡುವಾಗ ಕೈ ನಡುಗುತ್ತದೆ ಎನ್ನುತ್ತಾರೆ ಎಂದರೆ ಅವರ ಮೇಲೆ ಅದಿನ್ನೆಷ್ಟು ಒತ್ತಡವಿರಬಹುದು ಎನ್ನುವುದನ್ನು ಊಹಿಸಬಹುದು ಎನ್ನುತ್ತಾರೆ ಡಾ ಅಲೋಕ್.


ಪ್ರತಿದಿನ ಸಾವಿನ ಪ್ರಕರಣಗಳನ್ನು ಹೆಚ್ಚು ನೋಡ್ತಾ ಇರೋದು ವೈದ್ಯರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಾನಸಿಕ ತಜ್ಞರ ಸಹಾಯ ಬೇಕು ಎಂದು ಅವರಿಗೆ ತಿಳಿದಿದ್ದರೂ ಸಮಯದ ಅಭಾವದಿಂದ ಹಾಗೇ ಉಳಿದುಬಿಡ್ತಾರೆ. ಆರಾಮಾಗಿ ಒಂದು ಫೋನ್ ಕಾಲ್ ಮಾಡಿ ಆನ್​ಲೈನ್ ಕನ್ಸಲ್ಟೇಶನ್ ತೆಗೆದುಕೊಂಡರೂ ಬಹಳ ಉಪಯೋಗವಾಗುತ್ತೆ, ಆದ್ರೆ ಅಷ್ಟು ಸಮಯವೂ ಅವರಿಗೆ ಸಿಗುತ್ತಿಲ್ಲ. ಇನ್ನು ವೃತ್ತಿಬದುಕಿನ ಈ ಒತ್ತಡದಿಂದ ವೈದ್ಯರ ಖಾಸಗಿ ಬದುಕು ಕೂಡಾ ಹದಗೆಟ್ಟಿದೆ. ಅನೇಕ ಸಂದರ್ಭಗಳಲ್ಲಿ ಕುಟುಂಬಸ್ಥರಿಗೇ ಚಿಕಿತ್ಸೆ ಕೊಡಲು ಸಾಧ್ಯವಾಗದೇ, ಐಸಿಯು ವ್ಯವಸ್ಥೆ ಮಾಡಲು ಸಾಧ್ಯವಾಗದೇ ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗುತ್ತದೆ. ಪ್ರತಿದಿನ ಕೊರೊನಾ ರೋಗಿಗಳ ನಡುವೆ ಕೆಲಸ ಮಾಡಬೇಕಾದ ಈ ವೃತ್ತಿಯನ್ನೇ ಬಿಟ್ಟುಬಿಡುವಂತೆ ಅನೇಕ ವೈದ್ಯರ ಮೇಲೆ ಕುಟುಂಬಸ್ಥರ ಒತ್ತಡವೂ ಇದೆ. ಜೀವದ ಜೊತೆಗಿನ ಚೆಲ್ಲಾಟ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಶೀಘ್ರದಲ್ಲೇ ಅನೇಕ ವೈದ್ಯರು ರೋಗಿಗಳಾಗಿ ಬದಲಾದರೂ ಆಶ್ಚರ್ಯವಿಲ್ಲ.

Published by:Soumya KN
First published: