• Home
  • »
  • News
  • »
  • coronavirus-latest-news
  • »
  • ಕೊರೋನಾ ನಡುವೆಯೂ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ಬರೆದ ಭಾರತ: ಆಹಾರ ಶೃಂಗಸಭೆಗೆ ಶೋಭಾ ಕರಂದ್ಲಾಜೆ ಸಿದ್ಧತೆ

ಕೊರೋನಾ ನಡುವೆಯೂ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ಬರೆದ ಭಾರತ: ಆಹಾರ ಶೃಂಗಸಭೆಗೆ ಶೋಭಾ ಕರಂದ್ಲಾಜೆ ಸಿದ್ಧತೆ

ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಪಿಎಂ-ಕಿಸಾನ್ ಯೋಜನೆಯ ಮೂಲಕ 110 ಮಿಲಿಯನ್ ರೈತರ ಬ್ಯಾಂಕ್ ಖಾತೆಗಳಿಗೆ 18 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಜಮೆ ಮಾಡಲಾಗಿದೆ. ಭಾರತ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರ ಮೂಲಕ ಪ್ರತಿಯೊಂದು ಗ್ರಾಮೀಣ ಕುಟುಂಬ ಸ್ವಯಂಪ್ರೇರಿತವಾಗಿ ವರ್ಷದಲ್ಲಿ 100 ದಿನ ದುಡಿಯುವ ಸಾಂವಿಧಾನಿಕ ಹಕ್ಕನ್ನು ಒದಗಿಸಿಕೊಡಲಾಗಿದೆ ಎಂದರು.

ಮುಂದೆ ಓದಿ ...
  • Share this:

ನವದೆಹಲಿ, ಜು. 28: ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆಗಳ ಶೃಂಗಸಭೆ 2021ರ “ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಆಹಾರ ವ್ಯವಸ್ಥೆಗಳ ಪರಿವರ್ತನೆ; ಸವಾಲುಗಳಿಗೆ ಸನ್ನದ್ಧ” ಕುರಿತ ಸಚಿವರ ಪೂರ್ವಭಾವಿ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ವರ್ಚುವಲ್ ಮೂಲಕ ಮಾತನಾಡಿದರು. ನಮ್ಮ ಆಹಾರ ವ್ಯವಸ್ಥೆಗಳನ್ನು ಆರ್ಥಿಕವಾಗಿ, ಸಮಾಜಿಕವಾಗಿ ಪರಿಸರಾತ್ಮಕವಾಗಿ ಸುಸ್ಥಿರ ವ್ಯವಸ್ಥೆಗಳನ್ನಾಗಿ ಪರಿವರ್ತಿಸಿಕೊಳ್ಳಲು ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆಗಳ ಶೃಂಗಸಭೆ ನಮಗೆ ರಾಷ್ಟ್ರೀಯ ಮಾರ್ಗೋಪಾಯಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು. 


ರೈತರಿಗೆ ಆದಾಯ ಬೆಂಬಲ, ಗ್ರಾಮೀಣ ಜನರ ಆದಾಯ ಸುಧಾರಣೆ ಜೊತೆಗೆ ದೇಶದಲ್ಲಿನ ಪೌಷ್ಟಿಕಾಂಶ ಕೊರತೆ ಮತ್ತು ಅಪೌಷ್ಟಿಕತೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳೂ ಸೇರಿದಂತೆ ಕೃಷಿ ಆಹಾರ ವ್ಯವಸ್ಥೆಗಳನ್ನು ಸುಸ್ಥಿರ ವ್ಯವಸ್ಥೆಗಳನ್ನಾಗಿ ಪರಿವರ್ತಿಸಲು ಭಾರತ ಕೈಗೊಂಡಿರುವ ಹಲವು ಕ್ರಮಗಳ ಕುರಿತು ಸಚಿವರು ಶೃಂಗಸಭೆಗೆ ವಿವರಿಸಿದ ಅವರು ಕೃಷಿ ವಲಯದ ಪ್ರಾಮುಖ್ಯ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದ ಕರಂದ್ಲಾಜೆ ಅವರು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕೃಷಿ ಸಾಮಾಜಿಕ, ಆರ್ಥಿಕ ಪರಿವರ್ತನೆಯಲ್ಲಿ ಮತ್ತು ಭವಿಷ್ಯದದಲ್ಲಿ ಭೂಮಿಯ ಸುಸ್ಥಿರ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂಬುದು ಭಾರತದ ದೃಢ ನಿಶ್ಚಯವಾಗಿದೆ ಎಂದರು.


ಭಾರತದಲ್ಲಿ ಕೃಷಿ ದೊಡ್ಡ ಯಶೋಗಾಥೆಯಾಗಿದೆ. 1960ರ ದಶಕದ ಹಸಿರು ಕ್ರಾಂತಿಯಿಂದಾಗಿ ದೇಶ ಆಹಾರ ಕೊರತೆ ಎದುರಿಸುತ್ತಿದ್ದ ಸ್ಥಾನದಿಂದ ಆಹಾರ ರಫ್ತು ಕಣಜವಾಗಿ ಇಂದು ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.


ಭಾರತದಲ್ಲಿ ಕೃಷಿ ವಲಯಕ್ಕೆ ನೀಡಿರುವ ಆದ್ಯತೆಯನ್ನು ಕುರಿತು ಮಾತನಾಡಿದ ಸಚಿವರು, ಭಾರತ ಸರ್ಕಾರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಂಭೀರವಾಗಿ ಸ್ಪಂದಿಸುತ್ತಿದೆ. ಅವರು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಲು ಹಲವು ಸಕ್ರಿಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಭಾರತ ಇದೀಗ ಉತ್ಪಾದನೆ ಹೆಚ್ಚಳ, ಉತ್ಕೃಷ್ಟ ತಂತ್ರಜ್ಞಾನದ ಮೂಲಕ ಕಟಾವಿನ ನಂತರದ ನಿರ್ವಹಣೆ ಮತ್ತು ರೈತರು ಹಾಗೂ ಖರೀದಿದಾರರಿಗೆ ಏಕರೂಪದ ರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಮೂಲಕ ಇಬ್ಬರಿಗೂ ಗರಿಷ್ಠ ಲಾಭ ಮಾಡಿಕೊಡುವತ್ತ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.


ಮುಂಬರುವ ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಭಾರತ ಕೃಷಿ ವಲಯದಲ್ಲಿ ಹಲವು ಮಹತ್ವಾಕಾಂಕ್ಷೆಯ ಸುಧಾರಣೆಗಳನ್ನು ಜಾರಿಗೊಳಿಸುತ್ತಿದೆ ಎಂದ ಕರಂದ್ಲಾಜೆ ಅವರು, ಇತ್ತೀಚಿನ ದಿನಗಳಲ್ಲಿ ಕೈಗೊಂಡ ಹಲವು ಮಧ್ಯ ಪ್ರವೇಶಗಳಿಂದಾಗಿ ಭಾರತೀಯ ಕೃಷಿ ವಲಯ ಸಾಂಕ್ರಾಮಿಕದ ಬಿಕ್ಕಟ್ಟಿನ ನಡುವೆಯೂ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಅತ್ಯುತ್ತಮ ಸಾಧನೆ ಮಾಡಿದೆ.


ಸುಮಾರು 14 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ನಿರ್ದಿಷ್ಟ ಕೃಷಿ ಮೂಲಸೌಕರ್ಯ ನಿಧಿಯನ್ನು ಸೃಷ್ಟಿಸಿದೆ. ಅದರಡಿ ಕೃಷಿ ತೋಟದ ಬಾಗಿಲಿನಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಮಾರುಕಟ್ಟೆ ಮೂಲಸೌಕರ್ಯ ಒದಗಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಬಡ್ಡಿ ವಿನಾಯಿತಿ ಮತ್ತು ಉದ್ಯಮಿಗಳಿಗೆ ಸಾಲ ಖಾತ್ರಿಯನ್ನು ಒದಗಿಸಲಾಗುತ್ತಿದ್ದು, ಇದರಿಂದ ಕಟಾವಿನ ನಂತರದ ಬೆಳೆಹಾನಿ ಹೆಚ್ಚಿನ ಪ್ರಮಾಣದಲ್ಲಿ ತಗ್ಗುವುದರ ಮೂಲಕ ನೇರವಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.


2023ನೇ ವರ್ಷವನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವನ್ನಾಗಿ ಆಚರಿಸುವ ಭಾರತದ ಪ್ರಸ್ತಾವವನ್ನು ಒಪ್ಪಿದ ವಿಶ್ವಸಂಸ್ಥೆ ಹಾಗೂ ಇತರೆ ಎಲ್ಲ ರಾಷ್ಟ್ರಗಳಿಗೆ ಸಚಿವರು ಧನ್ಯವಾದಗಳನ್ನು ಹೇಳಿದರು. ಪೌಷ್ಟಿಕಾಂಶ ಸವಾಲುಗಳನ್ನು ಎದುರಿಸಲು ಮತ್ತು ಕೃಷಿ ಆಹಾರ ವ್ಯವಸ್ಥೆಯಲ್ಲಿ ವೈವಿಧ್ಯವನ್ನು ತರಲು ಸರ್ಕಾರ ಆಹಾರಧಾನ್ಯ ಆಧಾರಿತ ವ್ಯವಸ್ಥೆಯಿಂದ ಅಧಿಕ ಮೌಲ್ಯದ ಬೆಳೆಗಳಾದ ಹಣ್ಣು ಮತ್ತು ತರಕಾರಿ ಬೆಳೆಯುವಂತಹ ಮಿಶ್ರ ಕೃಷಿಗೆ ಹೆಚ್ಚಿನ ಬೆಂಬಲ ನೀಡುತ್ತಿದೆ ಎಂದರು.


ಭಾರತದ ಹಲವು ಸುಧಾರಣೆಗಳ ಕುರಿತಂತೆ ಮಾತನಾಡಿದ ಸಚಿವರು ಸಣ್ಣ ಮತ್ತು ಮಧ್ಯಮ ರೈತರಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸಿ ಕೊಡುವ ಉದ್ದೇಶದಿಂದ ರೈತರ ಉತ್ಪನ್ನ ಸಂಸ್ಥೆಗಳನ್ನು ರಚಿಸಲು ಮತ್ತು ಉತ್ತೇಜಿಸಲು ಯೋಜನೆಯನ್ನು ಆರಂಭಿಸಿದೆ ಎಂದರು. ಕೃಷಿ ಮಾರುಕಟ್ಟೆ ಸುಧಾರಣೆಗಳನ್ನು ಕೈಗೊಂಡಿರುವ ಪರಿಣಾಮ ಅಂತಾರಾಜ್ಯ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ.


ಪಿಎಂ-ಕಿಸಾನ್ ಯೋಜನೆಯ ಮೂಲಕ 110 ಮಿಲಿಯನ್ ರೈತರ ಬ್ಯಾಂಕ್ ಖಾತೆಗಳಿಗೆ 18 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಜಮೆ ಮಾಡಲಾಗಿದೆ. ಭಾರತ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರ ಮೂಲಕ ಪ್ರತಿಯೊಂದು ಗ್ರಾಮೀಣ ಕುಟುಂಬ ಸ್ವಯಂಪ್ರೇರಿತವಾಗಿ ವರ್ಷದಲ್ಲಿ 100 ದಿನ ದುಡಿಯುವ ಸಾಂವಿಧಾನಿಕ ಹಕ್ಕನ್ನು ಒದಗಿಸಿಕೊಡಲಾಗಿದೆ ಎಂದರು.


ಇದನ್ನೂ ಓದಿ:ಠೇವಣಿ ವಿಮೆ 5 ಲಕ್ಷಕ್ಕೆ ಹೆಚ್ಚಳ: ಬ್ಯಾಂಕ್ ದಿವಾಳಿಯಾದರೆ 90 ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ ಹಣ


ಸುಸ್ಥಿರ ಉತ್ಪಾದನೆ, ಆಹಾರ ಭದ್ರತೆ ಮತ್ತು ಮಣ್ಣಿನ ಆರೋಗ್ಯ ರಕ್ಷಣೆ ಖಾತ್ರಿಗೆ ಭಾರತ ಸಾವಯವ ಕೃಷಿಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ ಎಂದು ಸಚಿವರು ಹೇಳಿದರು. ಅಮೂಲ್ಯವಾದ ಜಲ ಸಂರಕ್ಷಣೆಗಾಗಿ ಭಾರತ ತೋಟದ ಹಂತದಲ್ಲಿ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ನೀರಿನ ಬಳಕೆ, ದಕ್ಷತೆಯನ್ನು ಹೆಚ್ಚಿಸಲು ಯೋಜನೆಯನ್ನು ರೂಪಿಸಿದೆ. ಅದಕ್ಕಾಗಿ 672 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಸೂಕ್ಷ್ಮ ನೀರಾವರಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಭಾರತ 262 ಒತ್ತಡವನ್ನು ಸಹಿಸಿಕೊಳ್ಳುವಂತಹ ತಳಿಯ ನಾನಾ ಬೆಳೆಗಳನ್ನು ಅಭಿವೃದ್ಧಿಪಡಿಸಿದೆ ಎಂದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: