• Home
  • »
  • News
  • »
  • coronavirus-latest-news
  • »
  • ಕೋಲಾರದ ಮಾರಿಕಾಂಬ ದೇಗುಲದಿಂದ‌ ಕೊರೋನಾ ಸೇವೆ; ಹುಂಡಿ ಹಣ ಜನರ ಕಲ್ಯಾಣಕ್ಕೆ

ಕೋಲಾರದ ಮಾರಿಕಾಂಬ ದೇಗುಲದಿಂದ‌ ಕೊರೋನಾ ಸೇವೆ; ಹುಂಡಿ ಹಣ ಜನರ ಕಲ್ಯಾಣಕ್ಕೆ

ದೇಗುಲದಿಂದ ನಿರ್ಮಾಣವಾಗಿರುವ ವಾರ್ಡ್​​

ದೇಗುಲದಿಂದ ನಿರ್ಮಾಣವಾಗಿರುವ ವಾರ್ಡ್​​

ಮಾರಿಕಾಂಬ ದೇಗುಲ ಟ್ರಸ್ಟ್ ಕೊರೊನಾ ಕಷ್ಟಕಾಲದಲ್ಲಿ ಸೋಂಕಿತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ

  • Share this:

ಕೋಲಾರ (ಮೇ. 28):  ಜಿಲ್ಲೆಯ ಮಾಲೂರು ಪಟ್ಟಣದ ಶ್ರೀ ಮಾರಿಕಾಂಬ ದೇಗುಲ ಮಾಲೂರು ತಾಲೂಕಿನಲ್ಲೇ ಅಲ್ಲದೆ, ಪಕ್ಕದ ಆಂಧ್ರ, ತಮಿಳುನಾಡು ರಾಜ್ಯದಲ್ಲೂ ಬಲು ಪ್ರಖ್ಯಾತಿ. ಈ ದೇವರಿಗೆ ಹರಕೆ ಹೊರುವ ಅನೇಕ  ಭಕ್ತರಿದ್ದಾರೆ, ದೇಗುಲದಲ್ಲಿ ಪೂಜೆ ಸಲ್ಲಿಸಲು ಆಗಮಿಸುವ ಭಕ್ತರು ಸಲ್ಲಿಸಿದ ಕಾಣಿಯ ಹಣದಿಂದ, ಇದೀಗ ದೇಗುಲ ಟ್ರಸ್ಟ್ ಕೊರೋನಾ ವೇಳೆಯಲ್ಲಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿದೆ. ಶ್ರೀ ಮಾರಿಕಾಂಬ ದೇಗುಲ ಟ್ರಸ್ಟ್ ಕೊರೊನಾ ಕಷ್ಟಕಾಲದಲ್ಲಿ ಸೋಂಕಿತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಕೊರೋನಾ ಮೊದಲ ಅಲೆಯಲ್ಲಿ ಅನ್ನದಾನ ಮಾಡಿದ್ದ ಟ್ರಸ್ಟ್,  ಈಗ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಅನುಮತಿ ಪಡೆದು, ಒಂದು ಸುಸರ್ಜಿತ ಕೊಠಡಿಯಲ್ಲಿ 12 ಆಕ್ಸಿಜನ್ ಕಾನ್ಸಂಟ್ರೇಟರ್ ಇರುವ ಹೈಟೆಕ್ ಬೆಡ್ ವ್ಯವಸ್ತೆಯನ್ನ ಮಾಡಿದೆ. ಜೊತೆಗೆ ಸೋಂಕಿತರ ಚಿಕಿತ್ಸೆಗೆ ಅವಶ್ಯವಿರುವ ಔಷಧಿ, ಇಂಜೆಕ್ಷನ್, ಪಿಪಿಇ ಕಿಟ್, ಮಾಸ್ಕ್, ಹ್ಯಾಂಢ್ ಗ್ಲೌಸ್, ಫೇಸ್ ಶೀಲ್ಡ್ ಸೇರಿದಂತೆ ಹೋಮ್ ಐಸೋಲೇಷನ್ ಇರುವ ಸೋಂಕಿತರಿಗೆ ಮೆಡಿಕಲ್ ಔಷಧಿ ಕಿಟ್ ಗಳನ್ನ ಸಿದ್ದಪಡಿಸಿ, ದೇಗುಲ ಸಮಿತಿಯ ಸದಸ್ಯರ ಮೂಲಕ ಸೋಂಕಿತರ ಮನೆಗೆ ತಲುಪಿಸುತ್ತಿದೆ.


ಅದಷ್ಟೆ ಅಲ್ಲದೆ ಮಾಲೂರು ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆ ಹಾಗು ಎರಡು ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ  250 ಮಂದಿ ಸೋಂಕಿತರಿಗೆ ಪ್ರತಿದಿನ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗು ರಾತ್ರಿಯ ಊಟ ಮತ್ತು ಹಣ್ಣು ಹಂಪಲು ಸೇರಿದಂತೆ, ಆರೋಗ್ಯ ಇಲಾಖೆ ನಿಗದಿ ಮಾಡಿರುವ ಮೆನು ಪ್ರಕಾರ ಉಟೋಪಚಾರವನ್ನ ನೀಡುತ್ತಿದೆ, ಇದಕ್ಕೆ ದೇಗುಲ ಸಮಿತಿ ಸದಸ್ಯರು ಪ್ರತಿದಿನ ಆಹಾರ ಪೊಟ್ಟಣ ಕಟ್ಟಿ ರವಾನಿಸಲು ಯುವತಂಡವನ್ನು ರಚಿಸಿದ್ದಾರೆ, ಈ ಕುರಿತು ಮಾತನಾಡಿರುವ ದೇಗುಲ ಟ್ರಸ್ಟ್ ಅಧ್ಯಕ್ಷ್ಯ ವೆಂಕಟೇಶ್ ಇಂತಹ ಕಷ್ಟಕರ ಸಮಯದಲ್ಲಿ ದೇಗುಲ ವತಿಯಿಂದ ಸೇವೆ ನೀಡುತ್ತಿರುವುದು ನಮ್ಮೆಲ್ಲರ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಮಾರಿಕಾಂಬ ದೇಗುಲ ಮಹಿಮೆಯುಳ್ಳ ದೇಗುಲವಾಗಿದ್ದು, ನಿತ್ಯ ಸಾವಿರಾರು ಭಕ್ತರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ, ಕಾಣಿಕೆ ಸಮರ್ಪಿಸುವುದು ವಾಡಿಕೆಯಾಗಿದೆ, ಹೀಗೆ ದೇಗುಲ ಹುಂಡಿಯಲ್ಲಿ ಸಂಗ್ರಹವಾದ ಭಕ್ತರ ಹಣದಲ್ಲೆ ಇಷ್ಟೆಲ್ಲಾ ಸಮಾಜ ಮುಖಿ ಕಾರ್ಯವನ್ನ ಟ್ರಸ್ಟ್ ಆರಂಭಿಸಿದೆ, ದೇಗುಲ ಹೆಸರಲ್ಲಿ ಬ್ಯಾಂಕ್‍ನಲ್ಲಿ 3 ಕೋಟಿ ರೂಗೂ ಅಧಿಕ ಹಣವಿದೆ. ಪ್ರತಿ ಸಲ ನೆರವು ನೀಡುವುದಕ್ಕೂ ಮೊದಲು, ಸದಸ್ಯರೆಲ್ಲ ಸಭೆ ಸೇರಿ, ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಸೇವೆಯನ್ನು ಮಾಡಲಾಗುತ್ತಿದೆ, ದೇಗುಲ ಟ್ರಸ್ಟ್ ಸೇವೆಯಿಂದ ಆರೋಗ್ಯ ಇಲಾಖೆಗೆ ಸಾಕಷ್ಟು ನೆರವಾಗಿದೆ ಎಂದು ಮಾಲೂರು ಶಾಸಕ ಕೆ ವೈ ನಂಜೇಗೌಡ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: ಲಾಕ್​ಡೌನ್​ ಸಂಕಷ್ಟ: ಹಿಂಗಾರಿನಲ್ಲಿ ಬೆಳೆದ ಭತ್ತ ಕೇಳೋರೇ ಇಲ್ಲ


ಒಟ್ಟಿನಲ್ಲಿ ಸಂಕಷ್ಟ ಎದುರಾದಾಗ ದೇವರತ್ತ ಮುಖ ಮಾಡುತ್ತಿದ್ದ ಜನರೀಗ, ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಹಾಗಾಗಿ ದೇವರ ಹುಂಡಿ ಹಣದಿಂದಲೇ, ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವು ನೀಡುತ್ತಿರುವ ಮಾಲೂರಿನ ಮಾರಿಕಾಂಬ ದೇಗುಲ ಟ್ರಸ್ಟ್ ಸೇವಾ ಮನೋಭಾವ, ನಿಜಕ್ಕೂ ಇತರರಿಗೂ ಮಾದರಿ ಎಂದರು ತಪ್ಪಾಗಲಾರದು.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)

Published by:Seema R
First published: