ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕೊರೋನಾ ಸೋಂಕಿತ ಬಲಿ

ಬಿಬಿಎಂಪಿಯವರನ್ನು ನಂಬಿಕೊಂಡರೆ ನಮ್ಮ ತಂದೆಯ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆಲೋಚಿಸಿದ ಕುಟುಂಬದವರು ತಕ್ಷಣಕ್ಕೆ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ. ಅಷ್ಟರೊಳಗೆ ನರಳಾಡಿ ನರಳಾಡಿ ಅರೆಜೀವವಾಗಿದ್ದ ಸೋಂಕಿತ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

news18-kannada
Updated:July 1, 2020, 1:51 PM IST
ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕೊರೋನಾ ಸೋಂಕಿತ ಬಲಿ
ಬಿಬಿಎಂಪಿ ಕಚೇರಿ
  • Share this:
ಬೆಂಗಳೂರು(ಜು.01): ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ದರ್ಪ, ನಿಷ್ಕಾಳಜಿ ತೋರುವುದನ್ನು ಬಿಟ್ಟು, ಮಾನವೀಯತೆ ಮತ್ತು ಸಮಯಪ್ರಜ್ಞೆ ತೋರಿಸಿದ್ದರೆ  ಆ ನಿಷ್ಪಾಪಿ ಸೋಂಕಿತನ ಜೀವ ಬದುಕುಳಿಯುತ್ತಿತ್ತೇನೋ. ಕೊರೋನಾದಿಂದ ಜನರು ಸಾಯುತ್ತಿರುವ ಈ ಸಮಯದಲ್ಲಿ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡುವುದನ್ನು ಬಿಟ್ಟು ಸಾಯುವ ಹಂತದಲ್ಲಿರುವವರಿಂದಲೂ ಹಣ ಲೂಟಿಗೆ ಇಳಿದು ಬಿಟ್ಟಿವೆ. ಅಂತದ್ದೇ ಒಂದು ಘಟನೆಗೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ. ಕುಟುಂಬದ ಯಜಮಾನನನ್ನು ಉಳಿಸಿಕೊಳ್ಳಲು ಇಡೀ ಕುಟುಂಬ ಹೋರಾಡಿದ್ರೂ ಆಸ್ಪತ್ರೆಯೊಂದರ ಕ್ರೌರ್ಯದ ಮುಂದೆ ಅದು ಸಾಧ್ಯವಾಗಲೇ ಇಲ್ಲ.

ಅಂದ ಹಾಗೆ ಈ ಒಂದು ಘಟನೆ  ನಡೆದಿರುವುದು ನಾಗರಬಾವಿ ವ್ಯಾಪ್ತಿಯ ಮಾಳಗಾಳದಲ್ಲಿ. ಕಳೆದ ಐದು ದಿನಗಳ ಹಿಂದೆ ಶೀತ ಕೆಮ್ಮು ಜ್ವರದಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಯನ್ನು ಆತನ ಕುಟುಂಬದವರು ವಿಜಯನಗರದಲ್ಲಿರುವ ಮಾರುತಿ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದರು. ಕೋವಿಡ್ ಪರೀಕ್ಷೆಗೆ ವೈದ್ಯರು ನೀಡಿದ ಸಲಹೆಯ ಮೇರೆಗೆ ಅಂದು ರಾತ್ರಿಯೇ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಭಾನುವಾರ ಬಂದಂತಹ ವರದಿಯಲ್ಲಿ ಆ ವ್ಯಕ್ತಿಗೆ ಕೋವಿಡ್ ಇರುವಂತದ್ದು ದೃಢಪಟ್ಟಿತ್ತು. ತಕ್ಷಣಕ್ಕೆ ಆ ವ್ಯಕ್ತಿಯನ್ನ ಕೋವಿಡ್ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾನವೀಯತೆ ಇದ್ದಿದ್ದರೆ ಆ ವೈದ್ಯರು ಮಾಡಬೇಕಿತ್ತು. ಅದರ ಬದಲು ಬಿಬಿಎಂಪಿ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಕರೆದುಕೊಂಡು ಹೋಗುತ್ತಾರೆ. ಅವರನ್ನು ಸಂಪರ್ಕಿಸಿ ಎಂಬ ಪುಕ್ಕಟೆ ಸಲಹೆ ಕೊಟ್ಟು ಮ‌ನೆಗೆ ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ಇನ್ಮುಂದೆ ಮಲ್ಲೇಶ್ವರಂನಲ್ಲಿ ಶಾಪಿಂಗ್​ ಮಾಡೋಕಾಗಲ್ಲ; ಸೆಲ್ಫ್​ ಲಾಕ್​ಡೌನ್​ ಮೊರೆ ಹೋದ ವ್ಯಾಪಾರಿಗಳು!

ಸೋಂಕಿತರನ್ನು ಮನೆಗೆ ಕರೆದುಕೊಂಡು ಬಂದು ತಕ್ಷಣಕ್ಕೆ ಮಕ್ಕಳು ಬಿಬಿಎಂಪಿ ಅಧಿಕಾರಿಗಳಿಗೆ ಕಾಲ್ ಮಾಡಿದ್ದಾರೆ. ಆದರೆ ಅವರಿಂದ ಬಂದ ಉತ್ತರಗಳು ತರಹೇವಾರಿ. ಆಶಾ ಕಾರ್ಯಕರ್ತರು ನಿಮ್ಮ ಮನೆಗೆ ಬಂದು ಮಾಹಿತಿ ಪಡೆದುಕೊಂಡು ಹೋಗ್ತಾರೆ. ಆನಂತರದಲ್ಲಿ ನಮಗೆ ಮಾಹಿತಿ ಕೊಡುತ್ತಾರೆ ನಾವು ಬಂದು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ ಬಿಬಿಎಂಪಿ ಸಿಬ್ಬಂದಿ.
ಅವರ ಸಲಹೆಯಂತೆ ಬಿಬಿಎಂಪಿಗೆ ಪದೇ ಪದೇ ಕಾಲ್ ಮಾಡಿದರೂ ಆ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಆಪ್ತಮಿತ್ರ ಸಹಾಯವಾಣಿಯ ಮೂಲಕ ಸಂಪರ್ಕಿಸಿದರೂ ಅವರಿಂದ ಸಿಕ್ಕಿದ್ದೂ ಉಡಾಫೆ ಉತ್ತರವೇ. ಈ ಅವಧಿಯಲ್ಲಿ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 108 ಗೆ ಕಾಲ್ ಮಾಡಿದ್ರೂ ಅರ್ಧಗಂಟೆಯಲ್ಲಿ ಬರುತ್ತೇವೆ ಎಂದು ಹೇಳಿದವರು ಎರಡು ಗಂಟೆಯಾದರೂ ಬರಲಿಲ್ಲ.

ಬಿಬಿಎಂಪಿಯವರನ್ನು ನಂಬಿಕೊಂಡರೆ ನಮ್ಮ ತಂದೆಯ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆಲೋಚಿಸಿದ ಕುಟುಂಬದವರು ತಕ್ಷಣಕ್ಕೆ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ. ಅಷ್ಟರೊಳಗೆ ನರಳಾಡಿ ನರಳಾಡಿ ಅರೆಜೀವವಾಗಿದ್ದ ಸೋಂಕಿತ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ದುಃಖತಪ್ತ ಕುಟುಂಬ ಈ ವೇಳೆಯೂ ಬಿಬಿಎಂಪಿಗೆ ಫೋನಾಯಿಸಿದೆ. ಆಗಲೂ‌ ನಿರ್ದಯಿ ಬಿಬಿಎಂಡಿ ಸಿಬ್ಬಂದಿಯಿಂದ ಯಾವುದೇ ಉತ್ತರ ಬಂದಿಲ್ಲ. ನಂತರ ವಿಧಿ ಇಲ್ಲದೆ ವಿಕ್ಟೋರಿಯಾ ಆಸ್ಪತ್ರೆಗೆ ಶವವನ್ನು ಕೊಂಡೊಯ್ದಿದ್ದಾರೆ. ದುರಾದೃಷ್ಟ ಎಂದರೆ ಈ ಕ್ಷಣದವರೆಗೂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ‌ ಶವವನ್ನು ಮುಟ್ಟುವ ಗೋಜಿಗೇನೇ ಹೋಗಿಲ್ಲ.

ಬಿಬಿಎಂಪಿ ಸಹಾಯವಾಣಿ ಆಗಲಿ ಅಥವಾ ಸರ್ಕಾರದ ಆರೋಗ್ಯ ಇಲಾಖೆಯಾಗಲಿ ಎಲ್ಲಕ್ಕಿಂತ ಹೆಚ್ಚಾಗಿ "ವೈದ್ಯೋ ನಾರಾಯಣೋ ಹರಿ" ಅಂತ ನಾವು ಗೌರವಿಸುವ ವೈದ್ಯರಾಗಲಿ ಯಾರೂ ಸಹ ಈ ಸೋಂಕಿತನ ನೆರವಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನರಳಾಡಿ ನರಳಾಡಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಹೇಳಿಕೊಳ್ಳೋಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಸರ್ಕಾರ ಮತ್ತು ಬಿಬಿಎಂಪಿ ಬಡಾಯಿ ಕೊಚ್ಚಿಕೊಳ್ಳುತ್ತಿವೆ‌. ಆದರೆ ವಾಸ್ತವದಲ್ಲಿ ಸೋಂಕಿತರು ಅಥವಾ ಸೋಂಕಿನ ಬಗ್ಗೆ ಶಂಕೆ ಉಳ್ಳಂತವರು ಬಿಬಿಎಂಪಿಗೆ ಕಾಲ್ ಮಾಡಿದರೆ ಅಥವಾ ಸಹಾಯವಾಣಿ ಗೆ ಲಿಂಕ್ ಆದ್ರೂ ಯಾವುದೇ ಸಮಂಜಸ ಉತ್ತರ ಬರುತ್ತಿಲ್ಲ.ಕೇವಲ ನಿರೀಕ್ಷಿಸಿ. ಕಾಯಿರಿ ಎಂಬ ಉತ್ತರ ದೊರೆಯುತ್ತಿದೆ.

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ ಮತ್ತು ನಿರ್ಲಜ್ಜ ಧೋರಣೆಯಿಂದ ಸಂಭವಿಸಿರುವ ಏಕೈಕ ದುರಂತ ಇದಲ್ಲ‌. ದಿನಂಪ್ರತಿ ಇಂತಹ ಹತ್ತಾರು ಘಟನೆಗಳು ವರದಿಯಾಗುತ್ತಲೇ ಇವೆ. ಇಷ್ಟೆಲ್ಲಾ ಆದರೂ ಎಚ್ಚೆತ್ತುಕೊಳ್ಳುವಂಥ ಯಾವುದೇ ಪ್ರಜ್ಞಾವಂತಿಕೆಯನ್ನು ಸಂಬಂಧಪಟ್ಟಂತ ಇಲಾಖೆಗಳು ತೋರಿಲ್ಲ. ಇವರಿಗೆ ಕಡಿವಾಣ ಹಾಕದೆ ಹೋದರೆ ಇವರ ನಿರ್ಲಕ್ಷ್ಯಕ್ಕೆ ಸೋಂಕಿತರು ಬೀದಿಯಲ್ಲಿ ಹೆಣಗಳಾಗಿ ಸಾಯಬೇಕಾದ ಪರಿಸ್ಥಿತಿ ಸೃಷ್ಟಿಯಾದರೂ ಆಗಬಹುದು.

 
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading