ವಿಜಯಪುರ(ಮೇ 05): ಕೊರೊನಾ ಸೋಂಕಿತ ಮಹಿಳೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಇಲ್ಲಿ ಸಂಭವಿಸಿದೆ. P640 ರೋಗಿಯಾಗಿದ್ದ 62 ವರ್ಷದ ಮಹಿಳೆ ಮೂರ್ನಾಲ್ಕು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ನಿನ್ನೆ ದೃಢಪಟ್ಟಿತ್ತು. ಇಂದು ಬೆಳಗಿನ ಜಾವ ಈ ಮಹಿಳೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಈ ಮಹಿಳೆ ಕಳೆದ ಹಲವು ದಿನಗಳಿಂದ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರು. ಅಸ್ತಮಾ, ಶ್ವಾಸಕೋಶ ಕಾಯಿಲೆ, ಬೊಜ್ಜು ಸೇರಿ ನಾನಾ ಕಾಯಿಲೆಗಳು ಬಾಧಿಸುತ್ತಿದ್ದವು. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಈ ವೃದ್ಧೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಇಂದು ಬೆಳಗಿನ ಜಾವ ಈ ಮಹಿಳೆಯ ಆರೋಗ್ಯ ಏಕಾಏಕಿ ಏರುಪೇರಾದ ಕಾರಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಂತರ ಈ ವೃದ್ಧೆಯ ಅಂತ್ಯಕ್ರಿಯೆಯನ್ನು ಆಕೆಯ ಕೆಲವು ಜನ ಸಂಬಂಧಿಕರ ಸಮ್ಮುಖದಲ್ಲಿ ವೈದ್ಯಕೀಯ ಪ್ರೊಟೊಕಾಲ್ ಪ್ರಕಾರ ಹಾಗೂ ಧಾರ್ಮಿಕ ವಿಧಿ ವಿಧಾನದಂತೆ ನೆರವೇರಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕುಡಿಯುವ ನೀರಿಗಾಗಿ ನಿತ್ಯವೂ 2 ಕಿ.ಮೀ. ಅಲೆದಾಟ; ಇದು ಯಾದಗಿರಿ ಅಲೆಮಾರಿ ಜನಾಂಗದ ನಿತ್ಯದ ಗೋಳಾಟ
ಕೊರೊನಾದಿಂದ ಮತ್ತೆ 3 ಜನ ಗುಣಮುಖ, ಡಿಸ್ಚಾರ್ಜ್:
ಈ ಮಧ್ಯೆ, ಕೊರೊನಾದಿಂದ ಗುಣಮುಖರಾದ ಮೂರು ಜನ ವಿಜಯಪುರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂರು ಜನರಲ್ಲಿ 6 ತಿಂಗಳ ಗಂಡು ಮಗು ಕೂಡ ಸೇರಿದೆ. ಇದರಿಂದಾಗಿ ಈವರೆಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಇಂದು P309 - 70 ವರ್ಷದ ವೃದ್ಧೆ, P329 - 6 ತಿಂಗಳ ಗಂಡು ಮಗು, ಮತ್ತು P330 - 28 ವರ್ಷದ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಗುಣಮುಖರಾದರವನ್ನು ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಶುಭ ಕೋರಿ ಬೀಳ್ಕೊಟ್ಟಿದ್ದಾರೆ.
ಈವರೆಗೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 47 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾದ ಬಳಿಕ ಅವರಲ್ಲಿ ಕೊರೊನಾ ಸೋಂಕು ದೃಢವಾಗಿದೆ. 22 ಮಂದಿ ಕೊರೊನಾದಿಂದ ಗುಣಮುಖರಾಗಿ ವಿಜಯಪುರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಈಗ 22 ಜನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ