news18-kannada Updated:July 6, 2020, 4:10 PM IST
ಪರಪ್ಪನ ಅಗ್ರಹಾರ ಜೈಲು
ಬೆಂಗಳೂರು (ಜುಲೈ 06); ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊರೋನಾ ಭೀತಿ ಕಾಡುತ್ತಿದ್ದು, 26 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಪರಿಣಾಮ ಜೈಲಿನ ಸಿಬ್ಬಂದಿಗಳು ಹಾಗೂ ಖೈದಿಗಳು ಬೆಚ್ಚುವಂತಾಗಿದೆ.
ದರೋಡೆ ,ಕೊಲೆ ,ಕೊಲೆ ಯತ್ನ ಪ್ರಕರಣಗಳಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಜೈಲು ಸೇರಿದ್ದ ವಿಚಾರಣಾಧಿನಾ ಖೈದಿಗಳು, ಜೈಲಿಗೆ ಬರುವಾಗ ತಪಾಸಣೆ ಮಾಡಿಸಲಾಗಿತ್ತು. ಈ ವೇಳೆ ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿತ್ತು.ಆದರೆ, 15 ದಿನಗಳ ಹಿಂದೆ ಬಂದ ಇಪ್ಪತ್ತು ಮಂದಿಯ ಬ್ಯಾಚನ್ನು ಒಂದೇ ಬ್ಯಾರಕ್ ಗೆ ಹಾಕಲಾಗಿತ್ತು. ಪರಪ್ಪನ ಅಗ್ರಹಾರ ಹೊರಗಿನ ಮಹಿಳಾ ವಿಶೇಷ ಬ್ಯಾರಕ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಅಲ್ಲದೆ, 15 ದಿನ ಕ್ವಾರಂಟೈನ್ ಮುಗಿದ ಹಿನ್ನಲೆ ದೊಡ್ಡ ಜೈಲಿಗೆ ಶಿಪ್ಟ್ ಮಾಡಲು ಮತ್ತೆ ತಪಾಸಣೆ ಮಾಡಿಸಿದಾಗ, ಇಪ್ಪತ್ತು ಮಂದಿಗೆ ಪಾಸಿಟಿವ್ ಬಂದಿದೆ. ಅಷ್ಟೇ ಅಲ್ಲ ಆ ಬ್ಯಾರಕ್ ಬಳಿ ಭದ್ರತೆಗಿದ್ದ ಆರು ಮಂದಿಗೂ ಪಾಸಿಟಿವ್ ಕಾಣಿಸಿಕೊಂಡು ಆತಂಕ ಮನೆ ಮಾಡಿದೆ. ಇದರಿಂದ ಮಹಿಳಾ ವಿಶೇಷ ಬ್ಯಾರಕ್ ಭದ್ರತೆಗೆ ಹೋಗಲು ಸಿಬ್ಬಂದಿ ಭಯಪಡುವಂತಾಗಿದೆ.
ಜೈಲು ಸಿಬ್ಬಂದಿಗಳು ತಮ್ಮ ಹಿರಿಯ ಅಧಿಕಾರಿಗಳ ಬಳಿ ನಮ್ಮನ್ನ ದೊಡ್ಡ ಸೆಲ್ ಭದ್ರತೆಗೆ ನಿಯೋಜಿಸಿ, ಇಲ್ಲಿ ನಮಗೆ ಕೊರೋನಾ ಭೀತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ. ಆ ಜೈಲಿನಲ್ಲಿ ಭದ್ರತೆಗೆ ನಿಯೋಜನೆಗೊಂಡ 40 ಸಿಬ್ಬಂದಿ ಸೇರಿದಂತೆ ಬರೋಬ್ಬರಿ 460 ಮಂದಿ ವಿಚಾರಣಾಧೀನ ಖೈದಿಗಳಿಗೆ ತಪಾಸಣೆ ಮಾಡಲುಪರಪ್ಪನ ಅಗ್ರಹಾರ ಜೈಲಿನ ವೈದ್ಯರಿಂದ ಡಿಜಿ ಹಾಗೂ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಈಗಲೇ ತಪಾಸಣೆ ಮಾಡದಿದ್ದರೆ, ಇಡೀ ಜೈಲಿಗೆ ಸೊಂಕು ಹರಡಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ : ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನಲೆ; ಮೊದಲ ಹಂತದಲ್ಲಿ 20 ಸಾವಿರ ಸಿಬ್ಬಂದಿಗೆ ಪರೀಕ್ಷೆ
ಈ ನಡುವೆ ವಿಶೇಷ ಜೈಲಿನಲ್ಲಿ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಕಾರಾಗೃಹದ ಕಡೆ ಬರದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 5,400 ಮಂದಿ ಕೈದಿಗಳಿದ್ದು, ಕಾರಾಗೃಹದ ಸಿಬ್ಬಂದಿ ಅಥವಾ ಒಬ್ಬ ಖೈದಿಗೆ ಸೋಂಕು ಹರಡಿದರೆ, ಸಮಸ್ಯೆಯಾಗುವ ಆತಂಕವಿದೆ. ಈಗಾಗಲೇ ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕಾರಾಗೃಹಗಳಲ್ಲಿ ಹಬ್ಬಿದ್ದು, ಇದೇ ಆತಂಕ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೂ ಕಾಡುತ್ತಿದೆ ಎನ್ನಲಾಗುತ್ತಿದೆ.
Published by:
MAshok Kumar
First published:
July 6, 2020, 4:10 PM IST