ಬೆಂಗಳೂರು(ಏ.13) : ಕೊರೋನಾ ವೈರಸ್ ಭೀತಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಅನೇಕ ನೌಕರರು ಉದ್ಯೋಗ ಭದ್ರತೆಯ ಸಂಕಷ್ಟ ಎದುರಾಗಿದೆ. ಇಂತಹ ಕಾರ್ಮಿಕರಿಗೆ ಬೆಂಬಲ ನೀಡುವಂತೆ ಮಹತ್ವದ ಆದೇಶವನ್ನು ಕಾರ್ಮಿಕ ಇಲಾಖೆ ಹೊರಡಿಸಿದೆ.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಸೂಚನೆಯ ಮೇರೆಗೆ ಆದೇಶ ಹೊರಡಿಸಿರುವ ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಕ್ಯಾಪ್ಟನ್ ಮಣಿವಣ್ಣನ್, ಕೋವಿಡ್-19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಎಲ್ಲಾ ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಉದ್ಯೋಗದಾತರು, ತಮ್ಮ ಉದ್ಯೋಗಿಗಳನ್ನು, ವಿಶೇಷವಾಗಿ ಕ್ಯಾಸುಯಲ್ಟಿ ಕೆಲಸಗಾರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ವಿಪತ್ತು ನಿರ್ವಹಣೆ ಕಾಯ್ದೆ 2005 ಸೆಕ್ಷನ್ 69ರಡಿಯಲ್ಲಿ ಆದೇಶಿಸಿದ್ದಾರೆ.
ಇನ್ನೂ ಮುಂದುವರೆದು ಯಾವುದೇ ಕೆಲಸಗಾರರನ್ನು ಈ ಅವಧಿಯಲ್ಲಿ ರಜೆ ತೆಗೆದುಕೊಂಡಿದ್ದಲ್ಲಿ ಅವರ ವೇತನದಲ್ಲಿ ಯಾವುದೇ ಪರಿಣಾಮಕಾರಿ ಕಡಿತವಿಲ್ಲದೇ, ಅಂತಹ ಕೆಲಸಗಾರರನ್ನು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸುವುದು. ಇದಲ್ಲದೇ ಕೋವಿಡ್-19 ಕಾರಣದಿಂದಾಗಿ ಉದ್ಯೋಗದ ಸ್ಥಳದಲ್ಲಿ ಕಾರ್ಯನಿರ್ವಹಿಸದಿರುವ ಸಂದರ್ಭ ಉಂಟಾದಲ್ಲಿ ಅಂತಹ ಘಟಕದ(ವರ್ಕ್ ಯುನಿಟ್) ನೌಕರರು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :
KFD: ರಾಜ್ಯಕ್ಕೆ ಕೊರೋನಾ ಚಿಂತೆಯಾದರೆ ಶಿವಮೊಗ್ಗಕ್ಕೆ ಕೆಎಫ್ಡಿ ಭೀತಿ; ಇವತ್ತೂ ಇಬ್ಬರಿಗೆ ಸೋಂಕು
ಈ ಸಂಬಂಧ ಮಾಡುವ ಯಾವುದೇ ಉಲ್ಲಂಘನೆಗಳು ವಿಪತ್ತು ನಿರ್ವಹಣೆ ಕಾಯ್ದೆ 2005ರಡಿ ದಂಡನೆಯ ಕ್ರಮಕ್ಕೆ ಒಳಪಟ್ಟಿರುತ್ತದೆ. ಕಾರ್ಮಿಕ ಇಲಾಖೆಯು ಈ ನಿಟ್ಟನಲ್ಲಿ 48 ಗಂಟೆಯೊಳಗಾಗಿ ಸಹಾಯವಾಣಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವುದು ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ