ಕೊರೊನಾ ಎಫೆಕ್ಟ್​; ಮಾರಕ ವೈರಸ್​ ಎಷ್ಟೆಲ್ಲಾ ದೇಶಗಳಲ್ಲಿ ಹಬ್ಬಿದೆ ಮತ್ತು ಇದರಿಂದ ಭಾರತಕ್ಕೇನು ಲಾಭ? ಏನು ನಷ್ಟ?

ದೇಶದಲ್ಲಿ ಈ ವೈರಸ್ ಹರಡದಂತೆ ಸಾಕಷ್ಟು ಎಚ್ಚರಿಕೆವಹಿಸಲಾಗಿದೆ. ಆದರೆ, ಭಾರತೀಯರು ಇಷ್ಟಕ್ಕೆ ಸಂತೋಷಪಡಲೂ ಸಾಧ್ಯವಿಲ್ಲ. ಏಕೆಂದರೆ ಕೊರೊನಾದಿಂದ ಭಾರತದಲ್ಲಿ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದರೂ ಸಹ ಇದರಿಂದ ಭಾರತಕ್ಕೆ ಕೆಲವು ವಿಚಾರದಲ್ಲಿ ನಷ್ಟ ಸಂಭವಿಸಿದರೆ, ಮತ್ತೆ ಕೆಲವು ವಿಚಾರದಲ್ಲಿ ಲಾಭವಾಗಲಿದೆ. ಅವು ಯಾವುವು ಗೊತ್ತಾ?

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚೀನಾದ ವುಹಾನ್ ನಗರದಿಂದ ಆರಂಭವಾದ ಕೊರೊನಾ ವೈರಸ್ ಇಂದು ಜಗತ್ತಿಗೆ ಅತಿದೊಡ್ಡ ಬೆದರಿಕೆಯನ್ನುಒಡ್ಡಿದೆ. ಈ ಮಾರಣಾಂತಿಕ ವೈರಸ್ ಈ ವರೆಗೆ ಚೀನಾದಲ್ಲಿ ಮಾತ್ರ ಸುಮಾರು 2,600ಕ್ಕೂ ಹೆಚ್ಚು ಜೀವವನ್ನು ಬಲಿ ತೆಗೆದುಕೊಂಡಿದೆ. ಇನ್ನೂ ಸಾವಿರಾರು ಜನ ಈ ಸೋಂಕಿಗೆ ಒಳಗಾಗಿದ್ದು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

ಈ ಸೋಂಕು ಇಂದು ಕೇವಲ ಚೀನಾಗೆ ಮಾತ್ರ ಸೀಮಿತವಾಗಿಲ್ಲ. ಚೀನಾದಿಂದ ಆರಂಭವಾದ ಈ ಸೋಂಕು ನೆರೆಯ ಜಪಾನ್, ತೈವಾನ್, ಮಲೇಷ್ಯಾ, ಸಿಂಗಾಪೂರ್, ಥಾಯ್ಲೆಂಡ್, ದಕ್ಷಿಣ ಕೋರಿಯಾ, ವಿಯೆಟ್ನಾಂ ದೇಶಗಳಿಗೂ ವ್ಯಾಪಿಸಿದೆ. ಅಲ್ಲದೆ, ದೂರದ ಆಸ್ಟ್ರೇಲಿಯಾ, ಅಮೆರಿಕ, ಜರ್ಮನಿ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಸೇರಿದಂತೆ ಭಾರತಕ್ಕೂ ವ್ಯಾಪಿಸಿದೆ. ಆದರೆ, ಕೊರೊನಾದಿಂದ ಅಪಾಯ ಎದುರಿಸುತ್ತಿರುವ 30 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 23ನೇ ಸ್ಥಾನ. ಆ ಮಟ್ಟಿಗೆ ಭಾರತ ಸದ್ಯಕ್ಕೆ ಸುರಕ್ಷಿತ ಎನ್ನಲು ಅಡ್ಡಿಯಲ್ಲ.

ಕರೊನಾ ಪ್ರಹಾರದಿಂದ ಭಾರತದಲ್ಲಿ ಈವರೆಗೆ ಯಾವುದೇ ಸಾವಿ-ನೋವು ಸಂಭವಿಸಿಲ್ಲ. ದೇಶದಲ್ಲಿ ಈ ವೈರಸ್ ಹರಡದಂತೆ ಸಾಕಷ್ಟು ಎಚ್ಚರಿಕೆವಹಿಸಲಾಗಿದೆ. ಆದರೆ, ಭಾರತೀಯರು ಇಷ್ಟಕ್ಕೆ ಸಂತೋಷಪಡಲೂ ಸಾಧ್ಯವಿಲ್ಲ. ಏಕೆಂದರೆ ಕೊರೊನಾದಿಂದ ಭಾರತದಲ್ಲಿ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದರೂ ಸಹ ಇದರಿಂದ ಭಾರತಕ್ಕೆ ಕೆಲವು ವಿಚಾರದಲ್ಲಿ ನಷ್ಟ ಸಂಭವಿಸಿದರೆ, ಮತ್ತೆ ಕೆಲವು ವಿಚಾರದಲ್ಲಿ ಲಾಭವಾಗಲಿದೆ. ಅವು ಯಾವುವು ಗೊತ್ತಾ?

ಕೊರೊನಾದಿಂದ ಭಾರತಕ್ಕೆ ಆಗಬಹುದಾದ ಲಾಭಗಳೇನು?

1- ಪ್ರವಾಸೋದ್ಯಮಕ್ಕೆ ಭಾರೀ ಲಾಭ; ಭಾರತೀಯರು ಸಾಮಾನ್ಯವಾಗಿ ಬೇಸಿಗೆಯಲ್ಲಿ ಚೀನಾ, ಮಲೇಷ್ಯಾ, ಸಿಂಗಾಪೂರ್ ಸೇರಿದಂತೆ ಹಲವೆಡೆ ಪ್ರವಾಸಕ್ಕೆ ತೆರಳುವುದು ವಾಡಿಕೆ. ಅದರಲ್ಲೂ ಥಾಯ್ಲೆಂಡ್,ಸಿಂಗಾಪೂರ್ ಮತ್ತು ಮಲೇಷ್ಯಾ ಭಾರತೀಯರ ಹಾಟ್ ಪೇವರೆಟ್. ಆದರೆ, ಇದೀಗ ಅಲ್ಲಿ ಕೊರೊನಾ ವೈರಸ್ ಭೀತಿ ಇರುವ ಕಾರಣ ಭಾರತೀಯರು ಪ್ರವಾಸಕ್ಕೆ ತೆರಳದೆ ಭಾರತದ ದೇಶದ ಒಳಗೇ ಪ್ರವಾಸ ಮಾಡಲು ಮುಂದಾಗುತ್ತಾರೆ. ಇದರಿಂದ ಭಾರತದ ಪ್ರವಾಸೋದ್ಯಮ ಬೆಳೆಯಲಿದೆ, ಮತ್ತಷ್ಟು ಆರ್ಥಿಕ ಲಾಭ ಪಡೆಯಲಿದೆ ಎನ್ನಲಾಗುತ್ತಿದೆ.

2-ಕಾಟನ್ (ಹತ್ತಿ) ಉದ್ಯಮಕ್ಕೂ ಅನುಕೂಲ; ಯುರೋಪಿಯನ್ ದೇಶಗಳಿಗೆ ಅತಿಹೆಚ್ಚು ಹತ್ತಿ ಬಟ್ಟೆ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರ ಚೀನಾ. ಆದರೆ, ಕೊರೊನಾ ವೈರಸ್ ದಾಳಿಯಿಂದಾಗಿ ಚೀನಾದಲ್ಲಿ ಹತ್ತಿ ಬಟ್ಟೆ ಉತ್ಪಾದನೆ ಗಾರ್ಮೆಂಟ್ಸ್​ಗಳು ಕಳೆದ ಎರಡು ತಿಂಗಳಿನಿಂದ ಬಾಗಿಲು ಎಳೆದಿವೆ. ಪರಿಣಾಮ ಹತ್ತಿ ಬಟ್ಟೆ ಬೇಡಿಕೆ ಇರುವ 31 ದೇಶಗಳ 142 ಕಂಪೆನಿಗಳು ಈಗಾಗಲೇ ಭಾರತದ ಕಾಟನ್ ಸಿಟಿ ಖ್ಯಾತಿಯ ತಮಿಳುನಾಡಿನ ತಿರುಪ್ಪೂರ್​ ಮತ್ತು ಕೋಲ್ಕತ್ತಾಗೆ ಆಗಮಿಸಿ ಇಲ್ಲಿನ ಕಂಪೆನಿಗಳಿಂದ ಬಟ್ಟೆ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿದೆ. ಇದರಿಂದ ದೇಶೀಯ ಹತ್ತಿ ಉತ್ಪಾದಕರು ಮತ್ತು ಬಟ್ಟೆ ತಯಾರಕರಿಗೆ ಲಾಭವಾಗಲಿದೆ.

3. ಭಾರತದ ಹಾಲು ಉತ್ಪನ್ನಕ್ಕೆ ಹೆಚ್ಚಲಿದೆ ಜಾಗತಿಕ ಬೇಡಿಕೆ: ಇಡೀ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಮೊದಲ ರಾಷ್ಟ್ರ ಚೀನಾ. ಈ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ ಇದೆ. ಹೀಗಾಗಿ ವಿಶ್ವದ ನಾನಾ ರಾಷ್ಟ್ರಗಳಿಗೆ ಚೀನಾ ವಿವಿಧ ಹಾಲು ಉತ್ಪಾದನೆಯನ್ನು ರಫ್ತು ಮಾಡುತ್ತಿದೆ. ಆದರೆ, ಪ್ರಸ್ತುತ ಚೀನಾದ ಹಾಲು ಉತ್ಪನ್ನ ರಫ್ತು ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಇದರಿಂದ ಭಾರತಕ್ಕೆ ಲಾಭವಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಉದ್ಯಮದಲ್ಲಿ ಜಾಗತಿಕವಾಗಿ ಸಾರ್ವಭೌಮತ್ವ ಸಾಧಿಸಲು ಇದು ಉತ್ತಮ ಕಾಲ.

4. ಆಹಾರ ಉತ್ಪನ್ನಗಳಿಗೂ ಹೆಚ್ಚಲಿದೆ ಬೇಡಿಕೆ; ಅಕ್ಕಿ ಬೇಳೆ ಕಾಳುಗಳು ಸೇರಿದಂತೆ ಚೀನಾ ಏಷ್ಯಾದಲ್ಲೇ ಅಧಿಕ ಆಹಾರ ಉತ್ಪನ್ನಗಳನ್ನು ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡು ದೇಶ. ಆದರೆ, ಚೀನಾ ಇದೀಗ ಆಹಾರ ಉತ್ಪನ್ನಗಳ ರಫ್ತುನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಭಾರತ ಆಹಾರೋತ್ಪನ್ನ ಮಾರುಕಟ್ಟೆ ಇದರ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

5. ದೇಸಿ ಆಟಿಕೆ ಉದ್ಯಮಕ್ಕೆ ಇದು ಸಕಾಲ: ಭಾರತದಲ್ಲಿ ಚೀನಾದ ಆಟಿಕೆ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಲ್ಲಿನ ಮಕ್ಕಳು ಚೀನಾ ದೇಶದ ಆಟಿಕೆಗಳನ್ನು ಬಳಸುವುದು ತೀರಾ ಸಾಮಾನ್ಯ. ಆದರೆ, ಇದೀಗ ಕೊರೊನಾ ಭೀತಿಯಿಂದ ಚೀನಾದ ಆಟಿಕೆ ವಸ್ತುಗಳ ಆಮದಿಗೆ ಕೇಂದ್ರ ಸರ್ಕಾರ ತಡೆ ಒಡ್ಡಿದೆ. ಪರಿಣಾಮ ಭಾರತದ ದೇಸಿ ಆಟಿಕೆ ಉದ್ಯಮ ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು.

6. ರಾಸಾಯನಿಕ ದಾಸ್ತಾನು ಕಂಪೆನಿಗಳಿಗೆ ಲಾಭ; ಚೀನಾದ ವುಹಾನ್ ವಿಶ್ವದಲ್ಲೇ ಅತಿಹೆಚ್ಚು ಕೆಮಿಕಲ್ ಉದ್ಯಮವನ್ನು ಹೊಂದಿರುವ ನಗರ. ಆದರೆ, ಕೊರೊನಾ ವೈರಸ್ ಈ ನಗರವನ್ನು ಬಿಟ್ಟುಬಿಡದೆ ಕಾಡುತ್ತಿದೆ. ಪರಿಣಾಮ ವಿವಿಧ ರಾಸಾಯನಿಕಗಳ ಮೇಲಿನ ಬೇಡಿಕೆ ವಿಶ್ವ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಭಾರತದ ರಾಸಾಯನಿಕ ಉದ್ಯಮ ಕಳೆದ ಒಂದು ತಿಂಗಳಲ್ಲಿ ಶೇ.30 ರಷ್ಟು ಅಧಿಕ ಲಾಭಗಳಿಸಿದೆ. ಅಲ್ಲದೆ, ಈ ಕಂಪೆನಿಗಳ ಷೇರುಪೇಟೆ ಸೂಚ್ಯಾಂಕ ಕಳೆದ ಎರಡು ವಾರದಲ್ಲಿ ಶೇ. 3.2 ರಷ್ಟು ಏರಿಕೆ ಕಂಡಿದೆ.

7.ಮತ್ಸೋದ್ಯಮಕ್ಕೂ ಅಧಿಕ ಲಾಭ: ಏಷ್ಯಾದ ಪಾಲಿಗೆ ಮತ್ಸೋದ್ಯಮದಲ್ಲಿ ಚೀನಾ ಬೃಹತ್ ಶಕ್ತಿ. ಪ್ರತಿವರ್ಷ ವಿಶ್ವದ ನಾನಾ ಮೂಲೆಗಳಿಗೆ ಚೀನಾ ಸಾವಿರಾರು ಟನ್ ಮೀನಿನ ಮಾಂಸವನ್ನು ರಫ್ತು ಮಾಡುತ್ತದೆ. ಆದರೆ, ಕೊರೊನಾ ಎಫೆಕ್ಟ್​ನಿಂದಾಗಿ ಚೀನಾ ಮತ್ಸೋದ್ಯಮ ಸಾವಿರಾರು ಕೋಟಿ ನಷ್ಟ ಅನುಭವಿಸಿದೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಚೀನಾದಿಂದ ಖಾಲಿಯಾಗಿರುವ ಮತ್ಸೋದ್ಯಮದಲ್ಲಿ ಭಾರತ ಪ್ರಭುತ್ವ ಸಾಧಿಸಲು ಇದು ಸೂಕ್ತ ಕಾಲವಾಗಿದೆ.

ಭಾರತದ ಪಾಲಿಗೆ ಕೊರೊನಾ ಸೃಷ್ಟಿಸಿರುವ ಅನಾನುಕೂಲಗಳು

1. ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ ಮತ್ತು ಅಭಾವ: ಭಾರತ ಇಡೀ ವಿಶ್ವದಲ್ಲೇ ಅತಿಹೆಚ್ಚು ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ. ಈ ಪೈಕಿ ಶೇ. 26ರಷ್ಟು ಎಲೆಕ್ಟ್ರಾನಿಕ್ ಸಾಮಗ್ರಿಗಳು ಚೀನಾದಿಂದಲೇ ಆಮದಾಗುತ್ತವೆ. ಆದರೆ, ಚೀನಾ ಇದೀಗ ಭಾರತಕ್ಕೆ ಈ ವಸ್ತುಗಳ ರಫ್ತನ್ನು ನಿಲ್ಲಿಸಿದ್ದು, ಮುಂದಿನ ತಿಂಗಳ ವೇಳೆಗೆ ದೇಶದಲ್ಲಿರುವ ಎಲ್ಲಾ ದಾಸ್ತಾನುಗಳು ಖಾಲಿಯಾಗಲಿವೆ. ಪರಿಣಾಮ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೆಲೆ 10 ರಿಂದ 15ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

2.ಫಾರ್ಮಸಿ ಕ್ಷೇತ್ರಕ್ಕೆ ಹಿನ್ನೆಡೆ: ಭಾರತದ ವೈದ್ಯಕೀಯ ಫಾರ್ಮಸಿ ಕ್ಷೇತ್ರ ಶೇ.80 ರಷ್ಟು ಕಚ್ಚಾ ವಸ್ತುಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಕೊರೊನಾ ವೈರಸ್ ದಾಳಿ ಈ ಕ್ಷೇತ್ರದ ಮೇಲೂ ತನ್ನ ಪ್ರಭಾವವನ್ನು ಬೀರಿದ್ದು, ಭವಿಷ್ಯದಲ್ಲಿ ಭಾರತದಲ್ಲಿ ಔಷಧೀಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಕರೋನಾ ಪ್ರಹಾರ; ಅತಿಹೆಚ್ಚು ಬಲಿಪಡೆದಿರುವ ಜಗತ್ತಿನ ಮಾರಕ ವೈರಸ್​ಗಳ ಟಾಪ್​5 ಪಟ್ಟಿ!
First published: