ಬೆಂಗಳೂರು (ಆಗಸ್ಟ್ 30); "ಓನಂ ಹಬ್ಬದ ನಂತರ ಕೇರಳದಲ್ಲಿ ಕೊರೋನಾ ವೈರಸ್ (CoronaVirus) ಪಾಸಿಟಿವ್ ಸಂಖ್ಯೆ ಅಧಿಕವಾಗುತ್ತಿದ್ದು, ಇದು ಕರ್ನಾಟಕಕ್ಕೂ ಆಘಾತ ನೀಡುವ ಸಾಧ್ಯತೆ ಇದೆ. ಹೀಗಾಗಿ ಕೇರಳ (Kerala) ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಕೇರಳದಿಂದ ಕರ್ನಾಟಕಕ್ಕೆ (Karnataka) ಆಗಮಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯ 1 ವಾರದ ಕ್ವಾರಂಟೈನ್ ಇರಲಿದ್ದು, ಕೊರೋನಾ ಸೋಂಕು ರಾಜ್ಯದಲ್ಲೂ ವ್ಯಾಪಿಸುವುದನ್ನು ತಡೆಯುವ ಸಲುವಾಗಿ ಹಲವು ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂವನ್ನು ಮುಂದುವರೆ ಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಪಾಸಿಟಿವಿಟಿ ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6 ರಿಂದ 8 ತರಗತಿ ಓಪನ್ ಆಗಲಿವೆ (School Reopen)" ಎಂದು ಸಚಿವ ಆರ್. ಅಶೋಕ್ (R Ashok) ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಹಿರಿಯ ಸಚಿವರ ಮತ್ತು ಅಧಿಕಾರಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅನೇಕ ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಲಾಗಿದೆ. ಈ ಅಂಶಗಳನ್ನು ಸಚಿವ ಆರ್. ಅಶೋಕ್ ಮಾಧ್ಯಮಗಳ ಎದುರು ಪ್ರಸ್ತುತಪಡಿಸಿದ್ದಾರೆ.
"9 ರಿಂದ 12 ನೇ ತರಗತಿವರೆಗೆ ಶಾಲೆ ಆರಂಭಿಸಲಾಗಿದೆ. ಆದರೆ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿಲ್ಲ. ಹೀಗಾಗಿ ಪಾಸಿಟಿವಿಸಿ ದರ ಶೇ. 2 ಕ್ಕಿಂತ ಕಡಿಮೆಇರುವ ತಾಲೂಕುಗಳಲ್ಲಿ 6,7,8 ನೇ ತರಗತಿಗಳನ್ನು ಸೆಪ್ಟೆಂಬರ್ 6ನೇ ತಾರೀಖಿನಿಂದ ಆರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ದಿನ ಬಿಟ್ಟು ದಿನ ಮಾತ್ರ ತರಗತಿಗಳು ನಡೆಯಲಿದ್ದು, ಶೇ. 50 ರಷ್ಟು ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗಿದೆ. ವಾರದಲ್ಲಿ 5ದಿನ ಮಾತ್ರ ತರಗತಿಗಳು ನಡೆಯಲಿದ್ದು, ವಾರದಲ್ಲಿ 2 ದಿನ ಶುಚಿಗೊಳಿಸಲು ಅವಕಾಶ ನೀಡಲಾಗಿದೆ. ಪ್ರತಿ ದಿನ ತರಗತಿ ನಡೆಯುತ್ತದೆ. ಮೊದಲ ದಿನ ಶೇ. 50 ಮತ್ತು ಮರುದಿನ ಶೇ.50 ರಷ್ಟು ಹಾಜರಾತಿ ಇರಲಿದೆ. ಶನಿವಾರ ಮತ್ತು ಭಾನುವಾರ ಸ್ಯಾನಿಟೈಸ್ ಮಾಡಲು ಮೀಸಲಿರಿಸಲಾಗಿದೆ.
ಶಾಲೆಗಳನ್ನು ಪುನಃ ತೆರೆಯಲು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 6472 ಮಕ್ಕಳಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು 14 ವಿದ್ಯಾರ್ಥಿಗಳಿಗೆ ಮಾತ್ರ ಪಾಸಿಟಿವ್ ಬಂದಿದೆ. ಹೀಗಾಗಿ ಶಾಲೆಗಳನ್ನು ತೆರೆಯುವುದರಿಂದ ಮಕ್ಕಳ ಆರೋಗ್ಯದ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ. ಅಲ್ಲದೆ, ಶಿಕ್ಷಕರಿಗೂ ಲಸಿಕೆ ಹಾಕಿಸಲಾಗಿದೆ. 2.61 ಲಕ್ಷ ಶಿಕ್ಷಕರ ಪೈಕಿ 1.10 ಲಕ್ಷ ಶಿಕ್ಷಕರಿಗೆ ಎರಡು ಡೊಸ್ ಲಸಿಕೆ ನೀಡಲಾಗಿದೆ" ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮೂರನೇ ಅಲೆಯ ನಡುವೆ ಹಬ್ಬ ಆಚರಣೆ; ಸಚಿವರ ಎಚ್ಚರಿಕೆ!;
ಇನ್ನೂ ಕೊರೋನಾ ಮೂರನೇ ಅಲೆಯ ನಡುವೆ ಜನರಿಗೆ ಎಚ್ಚರಿಕೆ ನೀಡಿರುವ ಸಚಿವ ಆರ್ ಅಶೋಕ್, "ಓನಂ ಹಬ್ಬದಿಂದಾಗಿ ಕೇರಳದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಹೀಗಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಒಂದು ವಾರ ಕಡ್ಡಾಯ ಕ್ವಾರಂಟೈನ್ಗೆ ಆದೇಶ ಹೊರಡಿಸಲಾಗಿದೆ. ಕೋವಿಡ್ ಟೆಸ್ಟ್ ಕೂಡ ಕಡ್ಡಾಯ ಮಾಡಲಾಗಿದೆ.
ಆದರೆ, ಮೂರನೇ ಅಲೆಯ ಆತಂಕದ ನಡುವೆ ಕರ್ನಾಟಕದಲ್ಲೂ ಹಬ್ಬದ ಆಚರಣೆಯಲ್ಲಿ ಎಚ್ಚರಿಕೆ ನಡೆಯನ್ನು ಇಡಬೇಕಾಗಿದೆ. ಚಿತ್ರದುರ್ಗ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ದೊಡ್ಡಮಟ್ಟದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತದೆ. 30 ಕಡೆ ಅತೀ ಹೆಚ್ಚಿನ ಜನ ಸೇರುತ್ತಾರೆ. ಈ ವೇಳೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಸಂಘಟಕರ ಜೊತೆ ಒಂದು ಸುತ್ತಿನ ಮಾತುಕತೆ ಮಾಡಲಾಗುವುದು.
ಪೊಲೀಸರ ಬಳಿ ಎಲ್ಲ ಸಂಘಟಕರ ಮಾಹಿತಿ ಇದೆ. 5ನೇ ತಾರೀಖು ಸಿಎಂಮತ್ತೊಂದು ಸಭೆ ನಡೆಸುತ್ತಾರೆ. ಅನೇಕರು ಹಬ್ಬದ ಆಚರಣೆಗೆ ಅವಕಾಶ ನೀಡಲು ಮನವಿ ಮಾಡಿದ್ದರು. ಕೋವಿಡ್ ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಗಣೇಶ ಚತುರ್ಥಿ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ