ಚೆನ್ನೈ (ಮಾರ್ಚ್ 23); ಮಾರಣಾಂತಿಕ ಕೊರೋನಾ ವೈರಸ್ ಪ್ರಭಾಕ್ಕೆ ಒಳಗಾಗಿರುವ ತಮಿಳುನಾಡು ಸರ್ಕಾರ ಸಹ ಇಂದು ತಮ್ಮ ರಾಜ್ಯದಲ್ಲಿ ಲಾಕ್ಡೌನ್ ಘೋಷಿಸಿದೆ. ಈ ಮೂಲಕ ದೇಶದಲ್ಲಿ ಲಾಕ್ಡೌನ್ ಘೋಷಿಸುತ್ತಿರುವ 15ನೇ ರಾಜ್ಯವಾಗಿದೆ.
ಕೊರೋನಾ ಸೋಂಕಿಗೆ ಒಳಗಾಗಿ ವಿಶ್ವದಾದ್ಯಂತ ಸುಮಾರು 10,000 ಸಾವಿರ ಜನ ಸಾವನ್ನಪ್ಪಿದ್ದರೆ, ಭಾರತದಲ್ಲೂ ಈ ಸೋಂಕು 8 ಜನರನ್ನು ಬಲಿ ಪಡೆದಿದೆ. ಅಲ್ಲದೆ, ಸುಮಾರು 415 ಜನರಿಗೆ ಈ ಸೋಂಕು ಕಾಣಿಸಿಕೊಂಡಿದೆ. ತಮಿಳುನಾಡಿನಲ್ಲೂ ಸಹ ಸೋಂಕಿತರ ಸಂಖ್ಯೆ 10 ದಾಟಿದ್ದು ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಸರ್ಕಾರವೂ ರಾಜ್ಯದಲ್ಲಿ ತುರ್ತು ಲಾಕ್ಡೌನ್ ಘೋಷಿಸಿದೆ.
ದೇಶದಲ್ಲಿ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೋಂಕು ಪೀಡಿತ 80 ಜಿಲ್ಲೆಗಳನ್ನು ಲಾಕ್ಡೌನ್ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಕೆಲವು ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಇಂದು ಟ್ವೀಟರ್ ಮೂಲಕ ಅಸಮಾಧಾನ ತೋಡಿಕೊಂಡಿದ್ದರು. ನರೇಂದ್ರ ಮೋದಿ ಅಸಮಾಧಾನ ತೋಡಿಕೊಂಡ ಬೆನ್ನಿಗೆ ಇಂದು ತಮಿಳುನಾಡು ಸರ್ಕಾರವೂ ಸಹ ಸೋಂಕು ಪೀಡಿತ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಮಾಡಿದೆ.
ತಮಿಳುನಾಡಿನಲ್ಲಿ ವಿಧಾನಮಂಡಲ ಅಧಿವೇಶನವೂ ನಡೆಯುತ್ತಿದೆ. ಏಪ್ರಿಲ್. 3ರ ವರೆಗೆ ಎರಡೂ ಸದನದಲ್ಲಿ ಅಧಿವೇಶ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ, ಕೊರೋನಾ ಭಯದಿಂದಾಗಿ ಇಂದು ಹಣಕಾಸು ಮಸೂದೆ ಮಂಡಿಸಿ ಅದರ ಬೆನ್ನಿಗೆ 12 ದಿನಗಳಿಗೆ ಮುಂಚಿತವಾಗಿಯೇ ಅಧಿವೇಶನವನ್ನು ಮುಕ್ತಾಯಗೊಳಿಸಲಾಗಿದೆ.
ಭಾರತದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆ ಇದನ್ನು ತಡೆಯುವ ಸಲುವಾಗಿ ನಾನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೆ, ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಕೊರೋನಾ ಭೀತಿ; ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ