ರಾಜಸ್ಥಾನದಲ್ಲಿ ಸಿಲುಕಿಕೊಂಡ ರಾಜ್ಯದ ವಿದ್ಯಾರ್ಥಿಗಳು - ವಾಪಸ್ ಕರೆಯಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹ

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳು ತಮ್ಮ ರಾಜ್ಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ವಾಪಸ್ ಕರೆಯಿಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ  ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಪೋಷಕರು

ವಿದ್ಯಾರ್ಥಿಗಳ ಪೋಷಕರು

  • Share this:
ಕಲಬುರ್ಗಿ(ಏ.26): ರಾಜಸ್ಥಾನದ ಕೋಟಾದಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಐಐಟಿ, ನೀಟ್ ಕೋಚಿಂಗ್ ಗೆ ಹೋಗಿದ್ದ ವಿದ್ಯಾರ್ಥಿಗಳು ಲಾಕ್ ಡೌನ್ ನಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಉತ್ತರ ಪ್ರದೇಶ ಮತ್ತಿತರ ರಾಜ್ಯಗಳು ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್ ಕರೆಯಿಸಿಕೊಳ್ಳಲು ವ್ಯವಸ್ಥೆ ಮಾಡಿವೆ. ಆದರೆ, ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ವಿದ್ಯಾರ್ಥಿಗಳು ಆತಂಕಗೊಳ್ಳುವಂತಾಗಿದ್ದು, ಪೋಷಕರನ್ನು ಕಂಗಾಲಾಗಿಸಿದೆ. ಕೂಡಲೇ ವಿದ್ಯಾರ್ಥಿಗಳನ್ನು ವಾಪಸ್ ಕರೆಯಿಸಲು ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.

ಕೊರೋನಾ ಲಾಕ್ ಡೌನ್ ದೇಶವನ್ನು ಸ್ತಬ್ದಗೊಳಿಸಿದೆ. ಲಾಕ್ ಡೌನ್ ಕಾರಣಕ್ಕೆ ದೇಶದ ಹಲವೆಡೆ ಗುಳೇ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇದೀಗ ಕೇಂದ್ರ ಸರ್ಕಾರ ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಳ್ಳಲು ಹಸಿರು ನಿಶಾನೆ ನೀಡಿದೆ. ಆದರೆ, ದೇಶದ ಬೇರೆ ಬೇರೆ ಕಡೆ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜಸ್ಥಾನ ಕೋಟಾದಲ್ಲಿ ರಾಜ್ಯದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.

ಕಲ್ಯಾಣ ಕರ್ನಾಟಕದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟದಲ್ಲಿ ಉಳಿದು ಕೊಂಡಿದ್ದಾರೆ. ಐಐಟಿ, ನೀಟ್ ತರಬೇತಿಗಾಗಿ ಹೋಗಿರುವ ವಿದ್ಯಾರ್ಥಿಗಳು ಲಾಕ್ ಡೌನ್ ಕಾರಣಕ್ಕೆ ಅಲ್ಲಿಯೇ ಸಿಲುಕಿ ಕೊಳ್ಳುವಂತಾಗಿದೆ. ಊಟ ಸೇರಿದಂತೆ ಎಲ್ಲದಕ್ಕೂ ಪರದಾಡುವ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ. ತಾಯ್ನಾಡಿಗೆ ಕರೆಯಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಕಲಬುರ್ಗಿ ವಿದ್ಯಾರ್ಥಿ ಪಾರ್ಥಾ ಮನವಿ ಮಾಡಿಕೊಂಡಿದ್ದಾನೆ.

ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್ ಮೊದಲಾದ ಜಿಲ್ಲೆಗಳ ವಿದ್ಯಾರ್ಥಿಗಳು ಕೋಟಾದ ವಿವಿಧ ಪಿ.ಜಿ.ಗಳಲ್ಲಿ ಉಳಿದುಕೊಂಡಿದ್ದಾರೆ. ಆದರೆ, ಕೆಲ ವಿದ್ಯಾರ್ಥಿಗಳ ಬಳಿ ಇದ್ದ ಹಣ ಖಾಲಿಯಾಗಿದ್ದು, ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪಾಲಕರಲ್ಲಿ ಆತಂಕ ಸೃಷ್ಟಿಯಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳು ತಮ್ಮ ರಾಜ್ಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ವಾಪಸ್ ಕರೆಯಿಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ  ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಕೊರೋನಾಗೆ ಮತ್ತೊಂದು ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 19ಕ್ಕೇರಿಕೆ

ಈಗಲಾದರೂ ವಿದ್ಯಾರ್ಥಿಗಳನ್ನು ವಾಪಸ್ ಕರೆಯಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಪೋಷಕರಾದ ಪರಂಜ್ಯೋತಿ ಗುರು ಚವ್ಹಾಣ, ಮಹೇಶ್ ದೇಶಪಾಂಡೆ ಮತ್ತಿತರರು ಆಗ್ರಹಿಸಿದ್ದಾರೆ.

ಒಟ್ಟಾರೆ ಲಾಕ್ ಡೌನ್ ಕಾರಣಕ್ಕೆ ರಾಜಸ್ಥಾನದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಹಣವಿಲ್ಲದೆ, ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಅವರನ್ನು ವಾಪಸ್ ಕರೆಯಿಸುವ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ.
First published: