ಅನವಶ್ಯಕವಾಗಿ ರಸ್ತೆಗಿಳೀತಿರೋ ವಾಹನ ಸವಾರರು - ಕಂಟ್ರೋಲ್ ಮಾಡಲು ಸ್ವತಃ ರಸ್ತೆಗಿಳಿದ ಡಿಸಿ ಮತ್ತು ಎಸ್​ಪಿ

ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಮನೆ ಬಿಟ್ಟು ಹೊರಗೆ ಬಂದಿರುವುದರ ಉದ್ದೇಶ ಪ್ರಶ್ನಿಸುವ ಕೆಲಸವನ್ನು ಜಿಲ್ಲಾಧಿಕಾರಿ ಶಿವಕುಮಾರ್ ಮತ್ತು ಎಸ್ ಪಿ  ಶಾಂತರಾಜು ಮಾಡುತ್ತಿದ್ದಾರೆ.

ರಸ್ತೆಗೆಳಿದು ತಪಾಸಣೆ ನಡೆಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಎಸ್​ಪಿ

ರಸ್ತೆಗೆಳಿದು ತಪಾಸಣೆ ನಡೆಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಎಸ್​ಪಿ

  • Share this:
ಶಿವಮೊಗ್ಗ(ಏ.19): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಎರಡನೇ ಹಂತದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಅದರು ಸಹ ಸಾರ್ವಜನಿಕರು ವಿನಾಃ ಕಾರಣ ರಸ್ತೆ ಮೇಲೆ ಸಂಚಾರ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಅನವಶ್ಯಕ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸಿ ಮುಟ್ಟಿಸುತ್ತಿದ್ದಾರೆ.

ಪ್ರತಿ ನಿತ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳು ಸಂಚಾರ ನಡೆಸಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳಿಗೆ ಸಹ ದಿಢೀರ್ ಭೇಟಿ ಕೊಟ್ಟು ತಪಾಸಣೆ  ಕೈಗೊಳ್ಳುತ್ತಿದ್ದಾರೆ. ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಮನೆ ಬಿಟ್ಟು ಹೊರಗೆ ಬಂದಿರುವುದರ ಉದ್ದೇಶ ಪ್ರಶ್ನಿಸುವ ಕೆಲಸವನ್ನು ಜಿಲ್ಲಾಧಿಕಾರಿ ಶಿವಕುಮಾರ್ ಮತ್ತು ಎಸ್ ಪಿ  ಶಾಂತರಾಜು ಮಾಡುತ್ತಿದ್ದಾರೆ.

ಆಸ್ಪತ್ರೆ, ಮೆಡಿಕಲ್, ಕೃಷಿ ಚಟುವಟಿಕೆ, ಸ್ಥಳೀಯವಾಗಿ ಅಗತ್ಯ ವಸ್ತುಗಳನ್ನು ಖರೀದಿಯಂತಹ ಅತ್ಯವಶ್ಯಕ ಕೆಲಸಗಳಿಗೆ ಬಂದಿರುವವರಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಹಾಲಿನ ವಾಹನಗಳು, ಗೂಡ್ಸ್ ವಾಹನಗಳು, ತರಕಾರಿ ಹಣ್ಣು ಮಾರಾಟದ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅನಾವಶ್ಯಕವಾಗಿ ಹೊರಗೆ ಬಂದಂತವರ ವಾಹನಗಳನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ಕಳುಹಿಸಿಕೊಡುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನಾ ವೈರಸ್ ಪ್ರಕರಣ ದಾಖಲಾಗಿಲ್ಲ. ಸಂಚಾರ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದೆ ಎಂದರ್ಥವಲ್ಲ. ಜನರು ತಮ್ಮ ಮನೆ ಬಳಿ ಇರುವ ಅಂಗಡಿಗಳಿಂದ ಮಾತ್ರ ಸಾಮಾಗ್ರಿಗಳನ್ನು ಖರೀದಿಸಬೇಕು ಎಂದು ಎಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ.  ನಗರದೆಲ್ಲೆಡೆ ತಿರುಗಾಡಲು ಯಾರಿಗೂ ಅವಕಾಶವಿಲ್ಲ. ಆಸ್ಪತ್ರೆಗೆ ಬರುವವರು ಕುಟುಂಬದ ಇತರ ಸದಸ್ಯರನ್ನು ಕರೆ ತರಬಾರದು ಎಂಬ ಸೂಚನೆಯನ್ನು  ಕೊಡುತ್ತಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಅನಾವಶ್ಯಕವಾಗಿ ಹೊರಗೆ ಬರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆಯನ್ನು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಪ್ರತಿ ದಿನ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ  ಕೆಲಸವನ್ನು ಎಸ್ ಪಿ ಮತ್ತು ಡಿಸಿ ಮಾಡುತ್ತಿದ್ದಾರೆ.  ವಾಹನಗಳನ್ನು ಸೀಮಿತ ಉದ್ದೇಶಕ್ಕಾಗಿ ಮಾತ್ರ ರಸ್ತೆಗಿಳಿಸಬೇಕು, ವಿನಾಃ ಕಾರಣ ವಾಹನ ಹೊರಗಡೆ ತಂದು ಸಂಚಾರ ನಡೆಸಿದರೆ, ಕೇಸು ದಾಖಲಿಸುತ್ತೇವೆ, ವಾಹನ ಸೀಜ್ ಮಾಡುತ್ತೇನೆ ಎಂಬ ಎಚ್ಚರಿಕೆಯನ್ನು ಜನರಿಗೆ ನೀಡುತ್ತಿದ್ದಾರೆ.

ಇದನ್ನೂ ಓದಿ : ಹೌದೋ ಹುಲಿಯಾ..! ಲಾಕ್​ಡೌನ್ ನಂತರ ಕುಡಿಯಲು ಆಗದ ಪೀರಪ್ಪನ ಬದುಕು ಈಗ ಹೇಗಿದೆ?

ಜಿಲ್ಲೆಯಲ್ಲಿ ಈಗಾಗಲೇ 1500 ಬೈಕ್ ಗಳನ್ನು ಸೀಜ್ ಮಾಡಲಾಗಿದೆ. ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಮುಟ್ಟುಗೋಲು ಹಾಕಲು ಸೂಚಿಸಲಾಗಿದ್ದು, ಜಿಲ್ಲೆಯಾದ್ಯಂತ ಲಾಕ್​​ ಡೌನ್​​ ಕಟ್ಟುನಿಟ್ಟಿನಿಂದ ಜಾರಿಗೊಳಿಸಿದ್ದಾರೆ. ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಈ ಮೂಲಕ ಕೊರೋನಾ ವೈರಸ್ ಶಿವಮೊಗ್ಗಕ್ಕೆ  ಬರದಂತೆ ತಡೆಗಟ್ಟಲು ಡಿಸಿ ಮತ್ತು ಎಸ್ ಪಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
First published: