ಕೊರೋನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ - ಮುಜರಾಯಿ ಇಲಾಖೆ ಆದೇಶ

ದೇವಸ್ಥಾನ ತೆರೆಯದೇ ಇದ್ದರೂ ಅರ್ಚಕರು, ಸಿಬ್ಬಂದಿಯವರು ದೇವರ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಸ್ಥಾನದ ಆವರಣದ ಒಳಗೆ ಯಾವ ಸಾರ್ವಜನಿಕರನ್ನೂ ಸೇರಿಸಿಕೊಳ್ಳದೇ ಪೂಜೆ, ಹೋಮ ಹವನ ಮಾಡಿಕೊಳ್ಳಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಮಾ. 20): ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ದೇಶಾದ್ಯಂತ ವಿವಿಧ ರೀತಿಯ ನಿರ್ಬಂಧ, ನಿಷೇಧಗಳು ಚಾಲನೆಯಲ್ಲಿವೆ. ಹಲವೆಡೆ ಕರ್ಫ್ಯೂ ಹೇರಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯು ಎಲ್ಲಾ ದೇವಸ್ಥಾನಗಳಿಗೆ ನಿರ್ಬಂಧ ಹೇರಿದೆ. ಅನಿರ್ದಿಷ್ಟಾವಧಿಯವರೆಗೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಂದಿನ ಆದೇಶದವರೆಗೂ ಈ ನಿರ್ಬಂಧ ಮುಂದುವರಿಯಲಿದೆ.

ಜಾತ್ರೆ, ಸಾಂಸ್ಕೃತಿ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಉತ್ಸವ, ಪ್ರಸಾದ ವಿತರಣೆ, ದಾಸೋಹ ಇತ್ಯಾದಿಗಳನ್ನ ರಾಜ್ಯ ಸರ್ಕಾರ ನಿಷೇಧಿಸಿತ್ತು. ಈಗ ದೇವಸ್ಥಾನಗಳನ್ನೂ ಬಂದ್ ಮಾಡಲು ಆದೇಶಿಸಲಾಗಿದೆ. ದೇವಸ್ಥಾನ ತೆರೆಯದೇ ಇದ್ದರೂ ಅರ್ಚಕರು, ಸಿಬ್ಬಂದಿಯವರು ದೇವರ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಸ್ಥಾನದ ಆವರಣದ ಒಳಗೆ ಯಾವ ಸಾರ್ವಜನಿಕರನ್ನೂ ಸೇರಿಸಿಕೊಳ್ಳದೇ ಪೂಜೆ, ಹೋಮ ಹವನ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಸಾರ್ವಜನಿಕರ ಪ್ರವೇಶವನ್ನಷ್ಟೇ ನಿಷೇಧಿಸಲಾಗಿದೆ.

ಇದನ್ನೂ ಓದಿ: ಕೊರೋನಾ ನಿಗ್ರಹಕ್ಕೆ ಪ್ರಧಾನಿ ಕರೆ ನೀಡಿದ ಜನತಾ ಕರ್ಫ್ಯೂಗೆ ಹಲವು ಸಂಘ ಸಂಸ್ಥೆಗಳ ಬೆಂಬಲ

ದೆಹಲಿ, ಮುಂಬೈ, ಪುಣೆ ಮೊದಲಾದ ನಗರಗಳಲ್ಲಿ ಶಾಲಾ, ಕಾಲೇಜು, ಕಚೇರಿ, ಮಾಲ್​ಗಳನ್ನು ಬಂದ್ ಆಡಲು ಆದೇಶಿಸಲಾಗಿದೆ. ಭಾರತದಲ್ಲಿ ಸೋಂಕು ಸದ್ಯಕ್ಕೆ ನಿಧಾನಗತಿಯಲ್ಲಿ ಹರಡುತ್ತಿದೆಯಾದರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದಿದ್ದರೆ ಸೋಂಕು ಹರಡುವಿಕೆಯ ವೇಗ ಕೈಮೀರಿ ಹೆಚ್ಚಾಗಬಹುದು ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. ಚೀನಾ, ಇಟಲಿ ಮೊದಲಾದ ದೇಶಗಳಲ್ಲೂ ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗಿತ್ತು. ಭಾರತದಲ್ಲೂ ಅಂಥ ಸ್ಥಿತಿ ಬರುವ ಸಾಧ್ಯತೆ ಇದೆ. ಇದನ್ನು ಎದುರಿಸಲು ಪರೀಕ್ಷಾ ಕಿಟ್, ಕೇಂದ್ರಗಳ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕು. ನಿರ್ಬಂಧ, ನಿಷೇಧ ಇತ್ಯಾದಿ ಕ್ರಮಗಳನ್ನು ಹೆಚ್ಚು ಕಾಲ ಮತ್ತು ಹೆಚ್ಚು ವ್ಯಾಪಕವಾಗಿ ಮಾಡುವ ಅಗತ್ಯ ಇದೆ ಎನ್ನುತ್ತಾರೆ ತಜ್ಞರು.

ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕಿನಿಂದ ಸತ್ತವರ ಸಂಖ್ಯೆ 10 ಸಾವಿರ ದಾಟಿದೆ. ಚೀನಾ ಮತ್ತು ಇಟಲಿ ದೇಶಗಳಲ್ಲಿ ತಲಾ 3 ಸಾವಿರಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ಧಾರೆ. ಇರಾನ್, ಅಮೆರಿಕ, ಸ್ಪೇನ್ ಮೊದಲಾದ ದೇಶಗಳಲ್ಲೂ ಈ ವೈರಸ್ ಸೋಂಕು ಅಧಿಕವಾಗಿದೆ. ಭಾರತದಲ್ಲಿ ಐದಾರು ಮಂದಿ ಮೃತಪಟ್ಟಿದ್ಧಾರೆ.

First published: