ಮನುಕುಲಕ್ಕೆ ಬರಸಿಡಿಲಿನಂತೆರಗಿದ ಕೊರೋನಾ; ದಕ್ಷಿಣ ಕನ್ನಡದಲ್ಲಿ ಮಾತ್ರ ಹೊಸ ಮನೆ ಭಾಗ್ಯ ಕಲ್ಪಿಸಿದ ಕೊರೋನಾ

ಸವಣೂರು ಗ್ರಾಮ ಪಂಚಾಯತ್ ನ ಸದಸ್ಯರು, ಸ್ಥಳೀಯ ಯುವಕ ಮಂಡಲ ಸೇರಿ ಇದೀಗ ಮನೆ ಕಟ್ಟುವ ಕೆಲಸವನ್ನು ಆರಂಭಿಸಿದೆ.

ಹೊಸ ಮನೆ ಕಟ್ಟುತ್ತಿರುವುದು

ಹೊಸ ಮನೆ ಕಟ್ಟುತ್ತಿರುವುದು

  • Share this:
ಪುತ್ತೂರು(ಮೇ 25): ಜನ ಜೀವನವನ್ನೇ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ ಹಲವು ಕುಟುಂಬಗಳ ಪಾಲಿಗೆ ಬರಸಿಡಿಲಿನಂತೆ ಬಡಿದೆ. ಉದ್ಯೋಗವಿಲ್ಲದೆ ಹಲವು ಕುಟುಂಬಗಳು ಪರದಾಡಬೇಕಾದ ಸ್ಥಿತಿಗೆ ತಂದೊಡ್ಡಿದೆ. ಆದರೆ, ದಕ್ಷಿಣಕನ್ನಡ ಜಿಲ್ಲೆಯ ಕುಗ್ರಾಮ ವೊಂದರಲ್ಲಿ ವಾಸಿಸುತ್ತಿದ್ದ ಬಡ ಕುಟುಂಬಕ್ಕೆ ಮಾತ್ರ ಕೊರೋನಾ ಹೊಸ ಮನೆಯ ಭಾಗ್ಯವನ್ನು ನೀಡಿದೆ.

ವಿಶ್ವದೆಲ್ಲೆಡ ವ್ಯಾಪಿಸಿರುವ ಕೊರೋನಾ ಜನರ ಜೀವನ ಕ್ರಮದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳತಕ್ಕ ಸತ್ಯವಾಗಿದೆ. ಬೇಕಾಬಿಟ್ಟಿ ಸಾಗುತ್ತಿದ್ದ ಬದುಕಿಗೆ ಒಂದು ರೀತಿಯ ಪಥವನ್ನು ಈ ಕೊರೋನಾ ಒದಗಿಸಿದೆ ಎನ್ನುವುದಕ್ಕೆ ಹಲವು ನಿದರ್ಶನಗಳೂ ನಮ್ಮ ಮುಂದಿದೆ. ರಸ್ತೆ ಬದಿ, ಎಲ್ಲೆಂದರಲ್ಲಿ ಸಿಕ್ಕಿದ್ದನ್ನು ತಿನ್ನುವುದು, ಉಗುಳುವುದು ಕೊರೋನಾ ಬಳಿಕ ನಿಂತು ಹೋಗಿದೆ.

ಜನಜಂಗುಳಿ ಸಂಪೂರ್ಣ ನಿಂತುಹೋಗಿದೆ. ಪ್ರತಿಯೊಬ್ಬನ ಜೀವನದಲ್ಲಿ ಅರಿವಿಗೆ ಬಾರದೇ ಶಿಸ್ತು ಆವರಿಸಿಕೊಂಡಿದೆ. ಇದರ ಜೊತೆಗೆ ಹಲವರ ಬದುಕಿನಲ್ಲಿ ಚೆಲ್ಲಾಟವನ್ನೇ ಆಡಿರುವ ಕೊರೋನಾ ಲಕ್ಷಾಂತರ ಕುಟುಂಬಗಳನ್ನು ಉದ್ಯೋಗವಿಲ್ಲದಂತೆಯೂ ಮಾಡಿದೆ. ಆದರೆ ಕೊರೊನಾ ಬಡ ಕುಟುಂಬವೊಂದಕ್ಕೆ ವಾಸದ ಮನೆಯ ಭಾಗ್ಯವನ್ನೂ ಕರುಣಿಸಿದೆ  ಎನ್ನುವುದುಕ್ಕೆ ಸಾಕ್ಷಿಯೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.

ದೇಶದಾದ್ಯಂತ ಕೊರೋನಾ ಲಾಕ್ ಡೌನ್ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಹಲವು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಬಡ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆಯಲ್ಲಿ ತೊಡಗಿ ಕೊಂಡಿದೆ. ಹೀಗೆ ಕಿಟ್ ವಿತರಣೆಯಲ್ಲಿ ತೊಡಗಿಕೊಂಡಿದ್ದ ಪುತ್ತೂರಿನ ಸವಣೂರು ಗ್ರಾಮ ಪಂಚಾಯತ್ ನ ಸದಸ್ಯರು ಹಾಗೂ ಸ್ಥಳೀಯರಿಗೆ ಅತ್ಯಂತ ಕಡು ಬಡತನದಲ್ಲಿ, ಜೋಪಡಿಯೊಂದರಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ದರ್ಶನವಾಗಿದೆ.

ಸವಣೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಾಲ್ತಾಡು ನಿವಾಸಿ ಸುಂದರಿ ತನ್ನ ಮೂವರು ಮಕ್ಕಳೊಂದಿಗೆ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ನಾಲ್ಕು ಮೂಲೆಗಳಲ್ಲಿರುವ ಮರದ ಕಂಬಕ್ಕೆ ಪ್ಲಾಸ್ಟಿಕ್ ಹೊದಿಕೆ ಮಾಡಿ ಅದರೊಳಗೆ ಈ ಕುಟುಂಬ ಜೀವನ ಸಾಗಿಸುತ್ತಿತ್ತು. ಕುಟುಂಬದ ಈ ದಯನೀಯ ಪರಿಸ್ಥಿತಿಯನ್ನು ಕಂಡು ಮರುಗಿದ ಕಿಟ್ ವಿತರಿಸಲು ಹೊರಟ ತಂಡ ಸುಂದರಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಶಪಥವನ್ನು ಅಂದೇ ಮಾಡಿತ್ತು. ಸವಣೂರು ಗ್ರಾಮ ಪಂಚಾಯತ್ ನ ಸದಸ್ಯರು, ಸ್ಥಳೀಯ ಯುವಕ ಮಂಡಲ ಸೇರಿ ಇದೀಗ ಮನೆ ಕಟ್ಟುವ ಕೆಲಸವನ್ನು ಆರಂಭಿಸಿದೆ.

ದಾನಿಗಳಿಂದ ಹಂಚು, ಮರಳು, ಕಲ್ಲು-ಮಣ್ಣು ಸಂಗ್ರಹಿಸಿ ಈಗಾಗಲೇ ಮನೆಯ ಕಾಮಗಾರಿ 90 ಶೇಕಡಾ ಮುಗಿದಿದ್ದು, ಕೆಲವೇ ದಿನಗಳಲ್ಲಿ ಮನೆಯ ಹಸ್ತಾಂತರವೂ ನಡೆಯಲಿದೆ. ಸುಂದರಿಯವರಿಗೆ ಪಿರ್ತಾರ್ಜಿತವಾಗಿ ಬಂದ ಜಾಗ ಮಾಣಿ ಎನ್ನುವವರ ಹೆಸರಿನಲ್ಲಿದ್ದು, ದಾಖಲೆಗಳು ಸರಿಯಾಗಿ ಇಲ್ಲದ ಕಾರಣಕ್ಕಾಗಿ ಸರಕಾರಿ ಮನೆ ಪಡೆಯುವ ಭಾಗ್ಯವೂ ಈ ಕುಟುಂಬಕ್ಕಿರಲಿಲ್ಲ.

ಇದನ್ನೂ ಓದಿ : ಕಲಬುರ್ಗಿಯಿಂದ ಲೋಹದ ಹಕ್ಕಿಯ ಹಾರಾಟ ಪುನರಾರಂಭ ; ಮೊದಲ ದಿನ ನೀರಸ ಪ್ರತಿಕ್ರಿಯೆ

ಕೊರೋನಾ ಲಾಕ್ ಡೌನ್ ಬಳಿಕ ಈ ಕುಟುಂಬಕ್ಕೆ ಜೀವನ ಸಾಗಿಸುವುದೇ ದುಸ್ತರವಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಸ್ಥಳಿಯರೇ ಈ ಕುಟುಂಬದ ನೆರವಿಗೆ ಬಂದಿದ್ದಾರೆ. ಸರಕಾರಿ ನಿಯಮಗಳಿಂದ ಮನೆ ಪಡೆಯಲಾಗದೆ ಪರದಾಡುತ್ತಿದ್ದ ಈ ಕುಟುಂಬಕ್ಕೆ ಕೊರೋನಾ ಮನೆಯ ಭಾಗ್ಯವನ್ನು ಕರುಣಿಸಿದೆ.
First published: