ರಾಮನಗರದಲ್ಲಿ ಸಾವಿರಾರು ದಿನಗೂಲಿ ಕಾರ್ಮಿಕರ ಅನ್ನ ಕಿತ್ತುಕೊಂಡ ಡೆಡ್ಲಿ ಕೊರೋನಾ

ಕೊರೋನಾ ವೈರಸ್ ದೊಡ್ಡದೊಡ್ಡ ಉದ್ಯಮಕ್ಕೆ ನಷ್ಟ ತಂದಿಡುವ ಜೊತೆಗೆ ದಿನಗೂಲಿ ಕಾರ್ಮಿಕರ ಮೇಲೂ ತನ್ನ ರೌದ್ರನರ್ತನ ತೋರಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

news18-kannada
Updated:March 26, 2020, 12:13 PM IST
ರಾಮನಗರದಲ್ಲಿ ಸಾವಿರಾರು ದಿನಗೂಲಿ ಕಾರ್ಮಿಕರ ಅನ್ನ ಕಿತ್ತುಕೊಂಡ ಡೆಡ್ಲಿ ಕೊರೋನಾ
ಚನ್ನಪಟ್ಟಣದಲ್ಲಿರುವ ದಿನಗೂಲಿ ಕಾರ್ಮಿಕರು
  • Share this:
ವಿಶ್ವದಲ್ಲಿಯೇ ಕೊರೋನಾ ವೈರಸ್ ಸೋಂಕಿಗೆ ಎಲ್ಲಾ ವ್ಯವಹಾರ, ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಷೇರುಮಾರುಕಟ್ಟೆಯಲ್ಲೂ ಕೂಡ ಸೆನ್ಸೆಕ್ಸ್ ಊಹಿಸಲಾಗದ ಮಟ್ಟಕ್ಕೆ ಕುಸಿದಿದೆ. ಆದರೆ ಕೊರೋನಾ ಅತೀ ಹೆಚ್ಚು ಹೊಡೆತ ಕೊಟ್ಟಿರುವುದುದ ದಿನಗೂಲಿ ಕಾರ್ಮಿಕರಿಗೆ. ಕಾರ್ಖಾನೆ, ರಿಯಲ್ ಎಸ್ಟೇಟ್ ಬಹುತೇಕ ಸ್ಥಗಿತಗೊಂಡಿರುವುದರಿಂದ ದಿನಗೂಲಿ ನೌಕರರಿಗೆ ಕೆಲಸ ಇಲ್ಲದಂತಾಗಿದೆ. ಕೆಲಸವಿಲ್ಲದೇ ಕೂಲಿ ಹಣವೂ ಇಲ್ಲದೆ ಇವರ ಜೀವನ ಬೀದಿಗೆ ಬಿದ್ದಿದೆ. ಇದು ನಿಜಕ್ಕೂ ಕಣ್ಣಂಚಲಿ ನೀರಿಳಿಯುವ ವಿಚಾರ. ಕೂಲಿಗಾಗಿ ಬಂದಿರುವ ಇವರೆಲ್ಲರ ಪಾಡು ಈಗ ದೇವರಿಗೆ ಪ್ರೀತಿ.

ರಾಮನಗರದ ಚನ್ನಪಟ್ಟಣ ನಗರದಲ್ಲಿ ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಜನ ಉತ್ತರಕರ್ನಾಟಕ ಮೂಲದ ಕೂಲಿ ಕಾರ್ಮಿಕರು ವಾಸ ಮಾಡ್ತಿದ್ದಾರೆ. ಅವರೆಲ್ಲರ ಬದುಕು ಮಾತ್ರ ನಿಜಕ್ಕೂ ಶೋಚನೀಯವಾಗಿದೆ. ಪ್ರತಿ ಯುಗಾದಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡ್ತಿದ್ದ ಇವರಿಗೆ ಈ ಬಾರಿಯ ಯುಗಾದಿ ಸೂತಕದ ವಾತಾವರಣ ತರಿಸಿದೆ.

ಇದನ್ನೂ ಓದಿ: ಜೀವ ಉಳಿಸಿಕೊಳ್ಳಬೇಕಾದರೆ 3 ವಾರ ಎಲ್ಲವನ್ನೂ ಸಹಿಸಿಕೊಳ್ಳಬೇಕು: ಸಚಿವ ಸುಧಾಕರ್

ಇವರೆಲ್ಲ ಮೂಲತಃ ಬಳ್ಳಾರಿ, ಕೊಪ್ಪಳ ಭಾಗದ ಜನರು. ಆದರೆ ಇಲ್ಲಿಗೆ ಬಂದು ದಿನಗೂಲಿ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇರೋದಕ್ಕೆ ತಾವೇ ಸಣ್ಣ ಟೆಂಟ್‌ಗಳನ್ನ ನಿರ್ಮಿಸಿಕೊಂಡು ವಾಸಮಾಡ್ತಿದ್ದಾರೆ. ಆದರೆ ಕಳೆದ 15 ದಿನಗಳಿಂದ ಕೋರೋನಾ ಭೀತಿಯಿಂದಾಗಿ ಇವರ ಜೀವನ ಮಾತ್ರ ಸಂಪೂರ್ಣ ಬರಿದಾಗಿದೆ. ಕೊರೋನಾ ಕರ್ಫ್ಯೂಯಿಂದಾಗಿ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತವಾಗಿವೆ. ಹಾಗಾಗಿ ಇವರನ್ನ ಕೂಲಿಗೆ ಕರೆಯುತ್ತಿದ್ದವರು ಕೂಡ ಕಳೆದ 15 ದಿನಗಳಿಂದ ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ. ಹಾಗಾಗಿ ದಿನದ ಊಟಕ್ಕೂ ಸಹ ಸಂಕಷ್ಟದ ವಾತವರಣ ನಿರ್ಮಾಣವಾಗಿದೆ ಎಂದು ಇವರು ತಮ್ಮ ಅಳಲನ್ನ ನ್ಯೂಸ್18 ಕನ್ನಡದ ಜೊತೆಗೆ ತೋಡಿಕೊಂಡಿದ್ದಾರೆ. ಎಲ್ಲವೂ ಸರಿಯಿದ್ದರೆ ನಮ್ಮೂರಿಗೆ ಹೋಗಿ ಯುಗಾದಿ ಹಬ್ಬವನ್ನ ಆಚರಣೆ ಮಾಡುತ್ತಿದ್ದೆವು. ಆದರೆ ಈ ಬಾರಿ ಊರಿಗೆ ಹೋಗಲು ನಮ್ಮ ಬಳಿ ಹಣವೇ ಇಲ್ಲ ಎನ್ನುತ್ತಾರೆ ಇವರು.

ಇನ್ನು, ದಿನವೊಂದಕ್ಕೆ ಪುರುಷ ಕೂಲಿಕಾರ್ಮಿಕನಿಗೆ 500, ಮಹಿಳಾ ಕೂಲಿಕಾರ್ಮಿಕಳಿಗೆ 400 ರೂಪಾಯಿ ಹಣ ಸಿಗುತ್ತಿತ್ತು. ಇದರಿಂದಾಗಿ ಜೀವನ ಉತ್ತಮವಾಗಿ ಸಾಗುತ್ತಿತ್ತು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ ಕಳೆದ 15 ದಿನಗಳಿಂದ ಗುತ್ತಿಗೆದಾರರು ಕೂಲಿ ಕೆಲಸಗಾರರನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಜೊತೆಗೆ ಇಷ್ಟು ದಿನಗಳ ಕಾಲ ದುಡಿದಿದ್ದ ಹಣವೆಲ್ಲ ಕಳೆದ 15 ದಿನಗಳಿಂದ ಮನೆಯಲ್ಲೇ ಇದ್ದಿದ್ದರಿಂದ ಖರ್ಚಾಗಿದೆ. ಹಾಗಾಗಿ ನಮಗೆ ಈಗ ಬಹಳ ಕಷ್ಟವಾಗುತ್ತಿದೆ ಎನ್ನುತ್ತಾರೆ ಕೂಲಿ ಕಾರ್ಮಿಕರು. ಹಾಗಾಗಿ ಸಂಬಂಧಪಟ್ಟ ಆಡಳಿತ ವರ್ಗ ನಮಗೆ ತಾತ್ಕಾಲಿಕವಾಗಿ ಪರಿಹಾರ ನೀಡುವ ಬಗ್ಗೆ ಚಿಂತನೆ ಮಾಡಬೇಕೆಂದು ನ್ಯೂಸ್18 ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಟ್ಟಾರೆ ಕೊರೋನಾ ವೈರಸ್ ದೊಡ್ಡದೊಡ್ಡ ಉದ್ಯಮಕ್ಕೆ ನಷ್ಟ ತಂದಿಡುವ ಜೊತೆಗೆ ದಿನಗೂಲಿ ಕಾರ್ಮಿಕರ ಮೇಲೂ ತನ್ನ ರೌದ್ರನರ್ತನ ತೋರಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

ವರದಿ: ಎ.ಟಿ. ವೆಂಕಟೇಶ್
First published: March 26, 2020, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading