ಬೆಂಗಳೂರು (ಮೇ 30); ಕೊರೋನಾ ಲಸಿಕೆಗಾಗಿ ಜನ ಪರದಾಡುತ್ತಿದ್ದಾರೆ. 18-44 ವಯಸ್ಸಿನವರಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದರೂ ಚಾಲ್ತಿಯಲ್ಲಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಎದುರು ಜನ ಜಂಗುಳಿಯೇ ನೆರೆದಿದೆ. ಆದರೆ, ಈ ಸಮಸ್ಯೆಯನ್ನು ಬಗೆಹರಿಸದ ಸಂಸದ ತೇಜಸ್ವಿ ಸೂರ್ಯ "ಖಾಸಗಿ ಆಸ್ಪತ್ರೆಯಲ್ಲಿ ಹಣ ಕೊಟ್ಟು ಕೊರೋನಾ ಲಸಿಕೆ ಹಾಕಿಸಿಕೊಳ್ಳಿ" ಎಂದು ಇತ್ತೀಚೆಗೆ ಪ್ರಚಾರಕ್ಕೆ ನಿಂತಿದ್ದರು. ಮತ್ತೊಂದೆಡೆ ಅವರ ಚಿಕ್ಕಪ್ಪ ಶಾಸಕ ರವಿಸುಬ್ರಣ್ಯ ಕಮಿಷನ್ಗೆ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ನೀಡಿದ್ದಾರೆ ಎಂಬ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಯೂ ಆಗಿತ್ತು. ಹೀಗಾಗಿ ಶಾಸಕ ರವಿಸುಬ್ರಮಣ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸು-ಮೋಟು ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಸಾಮಾಜಿಕ ಹೋರಾಟಗಾರ ವೆಂಕಟೇಶ್ ಗಿರಿನಗರದ ವಿಠ್ಠಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ಜೊತೆಗೆ ಮಾತನಾಡಿದ್ದ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಈ ಆಡಿಯೋದಲ್ಲಿ, "ಆಸ್ಪತ್ರೆ ಸಿಬ್ಬಂದಿಗೆ ಲಸಿಕೆ ನೀಡಲು 900 ರೂ. ಏಕೆ ಕೊಡಬೇಕು? ಎಂದು ಪ್ರಶ್ನೆ ಮಾಡಲಾಗಿದೆ. ಆದರೆ, ಅದಕ್ಕೆ ಉತ್ತರ ನೀಡಿರುವ ಆಕೆ ಈ ಹಣದಲ್ಲಿ 700 ರೂ. ಗಳನ್ನು ಶಾಸಕ ರವಿ ಸುಬ್ರಮಣ್ಯ ಅವರಿಗೆ ಪಾವತಿಸಬೇಕು" ಎಂದು ತಿಳಿಸಿದ್ದಾರೆ.
ವಾಸವಿ ಆಸ್ಪತ್ರೆಯು ಸಂಸದ ಶ್ರೀ ತೇಜಸ್ವೀ ಸೂರ್ಯರವರ ಸಹಕಾರದೊಂದಿಗೆ,ಬೆಂಗಳೂರು ದಕ್ಷಿಣ ಜನತೆಗೆ ಲಸಿಕಾ (ಕೋವಿಶೀಲ್ಡ್) ಕಾರ್ಯ ಹಮ್ಮಿಕೊಂಡಿದ್ದು, ಮುಂಚಿತ ನೋಂದಣಿಗೊಂಡವರಿಗೆ ಮಾತ್ರ ಲಸಿಕೆ ಲಭ್ಯವಿದೆ.ನೇರ ಪ್ರವೇಶಕ್ಕೆ ಅವಕಾಶವಿಲ್ಲ.1ಡೋಸ್ ಗೆ ಆಸ್ಪತ್ರೆಯು 900 ರೂ,ನಿಗದಿಗೊಳಿಸಿದೆ
ನೋಂದಣಿಗೆ👇https://t.co/xwkYmA5Hcb ಸಂಪರ್ಕಿಸಿ
— Office of Tejasvi Surya (@Offtejasvisurya) May 25, 2021
ಆದರೆ, ಈ ಲಸಿಕೆಗೆ ಕಮಿಷನ್ ಪಡೆದಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರವಿ ಸುಬ್ರಮಣ್ಯ, "ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಕೆಲವು ದುಷ್ಕರ್ಮಿಗಳು ನನ್ನ ವಿರುದ್ಧ ನಡೆಸಿರುವ ಪಿತೂರಿ ಭಾಗ ಇದು. ನನ್ನ ಹೆಸರನ್ನು ದುರ್ಬಳಕೆ ಮಾಡಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಪರಸ್ಪರ ಸಹಾಯ ಮಾಡಲು ಜಗತ್ತು ಸಾಮಾನ್ಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವಾಗ, ಈ ದುಷ್ಕರ್ಮಿಗಳು ಅಂತಹ ತೊಡಗಿರುವುದು ನಾಚಿಕೆಗೇಡಿನ ಸಂಗತಿ. ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಸರಣಿ ಟ್ವೀಟ್ ಮಾಡಿದ್ದರು.
ಇದೇ ಸಂದರ್ಭದಲ್ಲಿ ಆರೋಪಕ್ಕೆ ಒಳಗಾದ ವಿಠ್ಠಲ್ ಆಸ್ಪತ್ರೆಗೂ ಭೇಟಿ ನೀಡಿ ತಮ್ಮ ವಿರುದ್ಧ ಅಪ ಪ್ರಚಾರದಲ್ಲಿ ತೊಡಗಿದ್ದ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಗರಂ ಆಗಿದ್ದರು. ಅಲ್ಲದೆ, ತದನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ರವಿ ಸುಬ್ರಮಣ್ಯ, "ನನಗೂ ಈ ಆಸ್ಪತ್ರೆಗೂ ಯಾವುದೇ ಸಂಬಂಧ ಇಲ್ಲ. ನಾನು ಬಿಬಿಎಂಪಿ ಜೊತೆಗೂಡಿ ಲಸಿಕೆ ಕಾರ್ಯಕ್ರಮ ಆಯೋಜಿಸುತ್ತಿದ್ದೇನೆ, ಹೊರತು ಈ ಆಸ್ಪತ್ರೆಗೆ ಯಾವುದೇ ಲಸಿಕೆಯನ್ನೂ ನೀಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು
ಈ ಬಗ್ಗೆ ಖಾಸಗಿ ಆಸ್ಪತ್ರೆ ಸಹ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಹೇಳಿಕೆಯಲ್ಲಿ, "ಆಸ್ಪತ್ರೆಯಲ್ಲಿ ಸ್ವತಂತ್ರ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಆಯೋಜಿಸಲಾಗಿದೆ. ಆದರೆ, ಇದಕ್ಕೂ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ, ನಾವು ಸರ್ಕಾರ ನಿಗದಿಪಡಿಸಿದ ದರದಲ್ಲೇ ಲಸಿಕೆ ನೀಡುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದೆ.
ಆದರೆ, ಲಿಖಿತ ದೂರನ್ನು ಮಾಧ್ಯಮನಗಳಿಗೆ ಹಂಚಿಕೊಂಡಿರುವ ಸಾಮಾಜಿಕ ಹೋರಾಟಗಾರ ವೆಂಕಟೇಶ್, "ಖಾಸಗಿ ಆಸ್ಪತ್ರೆಯ ಲಸಿಕೆ ಕಾರ್ಯಕ್ರಮವನ್ನು ಉತ್ತೇಜಿಸುವ ಸಂಸದ ತೇಜಸ್ವಿ ಸೂರ್ಯ ನೀಡಿದ ಜಾಹೀರಾತಿನಲ್ಲಿ "ಪಟ್ಟಭದ್ರ ಆಸಕ್ತಿ" ಸ್ಪಷ್ಟವಾಗಿದೆ. ಮತ್ತೊಂದೆಡೆ ಆಸ್ಪತ್ರೆ ಸಿಬ್ಬಂದಿಯೇ ಅಲ್ಲಿ ನೀಡುತ್ತಿರುವ ಲಸಿಕೆಗೂ ಶಾಸಕರಿಗೂ ಸಂಬಂಧ ಇದೆ ಎಂದು ಹೇಳುತ್ತಿರುವಾಗ ಇಂತವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು, ಈ ಬಗ್ಗೆ ತನಿಖೆ ನಡೆಯಬೇಕು" ಎಂದು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ